
ಬೆಂಗಳೂರು (ಜೂ.10): ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ಪತ್ರ ಬರೆದಿರುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಹೊಸ ಅಧ್ಯಾಯ ಬರೆಯುವ ಪ್ರಾಮಾಣಿಕತೆ ಇದ್ದರೆ ಚರ್ಚೆಗೆ ಸಿದ್ಧ ಎಂದು ಬಹಿರಂಗವಾಗಿ ಹೇಳಿದ್ದೆ. ಆದರೆ, ಅದು ನಮ್ಮ ದೌರ್ಬಲ್ಯ ಎನ್ನುವ ಭಾವನೆ ಬೇಡ ಎಂದೂ ಅವರು ಗುಡುಗಿದ್ದಾರೆ.
ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು. ನಮ್ಮ ಪಕ್ಷದ ಶಾಸಕರಿಗೆ ಹೇಗೆ ಪತ್ರ ಬರೆಯುತ್ತಾರೆ. ಒಂದು ಕಡೆ ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಟೀಕೆ ಮಾಡುತ್ತಾರೆ. ಮತ್ತೊಂದು ಕಡೆ ನಮ್ಮದೇ ಶಾಸಕರಿಗೆ ಪತ್ರ ಬರೆದು ಮತ ಕೇಳುತ್ತಾರೆ. ಅವರಿಗೆ ಕೊಂಚವಾದರೂ ನಾಚಿಕೆ ಬೇಡವೇ ಎಂದು ಹರಿಹಾಯ್ದರು.
ಸಿದ್ದು- ಬಿಎಸ್‌ವೈ ಭೇಟಿ ವಿಡಿಯೋ ಬಹಿರಂಗ ಯಾವ ಸಂದೇಶಕ್ಕಾಗಿ?: ಎಚ್‌ಡಿಕೆ
ಸಿದ್ದರಾಮಯ್ಯ ಅವರು ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್‌ನ ಎರಡೂ ಕಣ್ಣು ಹೋಗಲಿ ಎನ್ನುವಂತೆ ವರ್ತಿಸುತ್ತಿದ್ದಾರೆ. ಕೇವಲ ಬಿಜೆಪಿ ಗೆಲ್ಲಲು ಅನುಕೂಲ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ಫಲಿತಾಂಶ ಬಂದ ಮೇಲೆ ಬಿಜೆಪಿ ಬಿ ಟೀಮ್ ಯಾವುದು ಎನ್ನುವುದು ಅರ್ಥವಾಗುತ್ತದೆ. ಚುನಾವಣೆಯಲ್ಲಿ ಅಡ್ಡಮತದಾನ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲ. ನಮಗೆ ಅಡ್ಡಮತದಾನದ ಆತಂಕವೂ ಇಲ್ಲ, ಭಯವೂ ಇಲ್ಲ. ನಮ್ಮ ಪಕ್ಷದ 32 ಶಾಸಕರು ನಮ್ಮ ಜತೆಯಲ್ಲಿಯೇ ಇದ್ದಾರೆ. ಮುಂದಿನ ಚುನಾವಣೆ ಬರುವವರೆಗೆ ನಮ್ಮ ಶಾಸಕರು ನಮ್ಮ ಜತೆಯೇ ಇರುತ್ತೇವೆಂದು ಹೇಳಿದ್ದಾರೆ. ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ. ನನ್ನ ಆತ್ಮೀಯರಾದ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡನೇ ಪ್ರಾಶಸ್ತ್ಯದ ಮತ ನೀಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದ ವ್ಯಕ್ತಿ ಇದೀಗ ಅದೇ ಪಕ್ಷದ ಶಾಸಕರ ಮತ ಕೇಳುತ್ತಿದ್ದಾರೆ. ಈಗ ಜೆಡಿಎಸ್ ಜಾತ್ಯತೀತ ಪಕ್ಷವಾಯಿತಾ? ಈಗ ಜೆಡಿಎಸ್ ಶಾಸಕರ ಸಂಪರ್ಕಬೇಕು, ಮತ ಬೇಕು. 2016ರಲ್ಲಿ ನಮ್ಮ ಶಾಸಕರನ್ನು ಹೈಜಾಕ್ ಮಾಡಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಿದ್ದರು. ಇದೇನಾ ಜಾತ್ಯತೀತ ಸಿದ್ಧಾಂತ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ? ನೀವು ಎಷ್ಟುಬಾರಿ ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದೀರಿ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದು ಯಾರ ಬೆಂಬಲದಿಂದ? ಎಲ್ಲ ಮಿತ್ರಪಕ್ಷಗಳ ಬೆಂಬಲದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾದರು. ಆಗ ನೀವು ಎಲ್ಲಿದ್ದೀರಿ ಸಿದ್ದರಾಮಯ್ಯನವರೇ? ದೇವೇಗೌಡ ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ಸಿನವರಾ? ಹಲವು ಮಿತ್ರಪಕ್ಷಗಳು ಸೇರಿ ದೇವೇಗೌಡ ಅರವನ್ನು ಪ್ರಧಾನಿಯನ್ನಾಗಿ ಮಾಡಿದ್ದವು. ಕಾಂಗ್ರೆಸ್ ನಡೆ ಬಗ್ಗೆ ಈಗಲೂ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.
ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ಗೆ ಓಪನ್ ಆಫರ್ ಕೊಟ್ಟ ಕುಮಾರಸ್ವಾಮಿ
ಬಿಜೆಪಿ ಜತೆ ಚೌಕಾಸಿ ಮಾಡಿದ್ದರು: ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಟವೆಲ್ ಹಾಕಿದ್ದರು. ಆತ್ಮಸಾಕ್ಷಿಯ ಬಗ್ಗೆ ಮಾತನಾಡುವವರು ಆತ್ಮಸಾಕ್ಷಿ ಇದ್ದರೆ ಈಗ ಸತ್ಯ ಹೇಳಲಿ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗಲ್ಲ ಎಂದು ಬಿಜೆಪಿ ಸೇರುವುದಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರೊಂದಿಗೆ ಚೌಕಾಸಿ ಮಾಡಿದ್ದರು. ಅದು ಸುಳ್ಳು ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ. 2009ರಲ್ಲಿಯೇ ಸಿದ್ದರಾಮಯ್ಯ ಮತ್ತವರ ತಂಡ ಬಿಜೆಪಿ ಸೇರಲು ಪ್ರಯತ್ನಿಸಿತ್ತು. ಎಲ್.ಕೆ.ಅಡ್ವಾಣಿ ಬಳಿ ಚರ್ಚೆ ಮಾಡಿದ್ದರು. ಇದು ಗೊತ್ತಿಲ್ವಾ ಸಿದ್ದರಾಮಯ್ಯ ಅವರೇ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.