Assembly elections 2022 : ಪಂಜಾಬ್ ಗೆ ನಾಳೆ ಮತದಾನ, ಉತ್ತರ ಪ್ರದೇಶಕ್ಕೆ ಮೂರನೇ ಹಂತದ ವೋಟಿಂಗ್!

By Suvarna NewsFirst Published Feb 19, 2022, 10:35 PM IST
Highlights

ನಾಳೆ ಪಂಜಾಬ್ ರಾಜ್ಯಕ್ಕೆ ನಡೆಯಲಿದೆ ಮತದಾನ
ಉತ್ತರ ಪ್ರದೇಶಕ್ಕೆ ಮೂರನೇ ಹಂತದ ವೋಟಿಂಗ್
ಯುಪಿಯ ಕರ್ಹಾಲ್ ನಲ್ಲಿ ನಿರ್ಧಾರವಾಗಲಿದೆ ಅಖಿಲೇಶ್ ಯಾದವ್ ಭವಿಷ್ಯ
 

ನವದೆಹಲಿ (ಫೆ. 19): ಪಂಜಾಬ್‌ನಲ್ಲಿ (Punjab) ಮೊದಲ ಹಾಗೂ ಒಂದೇ ಹಂತದ ವಿಧಾನಸಭಾ ಚುನಾವಣೆ (Assembly elections) ಮತ್ತು ಉತ್ತರ ಪ್ರದೇಶದಲ್ಲಿ(Uttar Pradesh) ಮೂರನೇ ಹಂತದ ಮತದಾನ ಫೆಬ್ರವರಿ 20ರ ಭಾನುವಾರದಂದು ನಡೆಯಲಿದೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತ್ತು ಯುಪಿಯಲ್ಲಿ 59 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ  ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಪಂಜಾಬ್ ನಲ್ಲಿ ಕಾಂಗ್ರೆಸ್ (Congress), ಎಎಪಿ (AAP), ಎಸ್‌ಎಡಿ-ಬಿಎಸ್‌ಪಿ (SAD-BSP), ಬಿಜೆಪಿ-ಪಿಎಲ್‌ಸಿ-ಎಸ್‌ಎಡಿ (ಸಂಯುಕ್ತ) ಮತ್ತು ವಿವಿಧ ರೈತ ಸಂಘಟನೆಗಳ ರಾಜಕೀಯ ಪಕ್ಷವಾದ ಸಂಯುಕ್ತ ಸಮಾಜ ಮೋರ್ಚಾ ನಡುವೆ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

ಯುಪಿಯಲ್ಲಿ, ಮೂರನೇ ಹಂತದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ( Akhilesh Yadav) ಅವರು ಬಿಜೆಪಿಯ ಎಸ್‌ಪಿ ಸಿಂಗ್ ಬಘೆಲ್ (SP Singh Baghel) ವಿರುದ್ಧ ಕರ್ಹಾಲ್ ಅಸೆಂಬ್ಲಿ ಸ್ಥಾನಕ್ಕಾಗಿ ಸೆಣಸಲಿದ್ದಾರೆ. ಪಂಜಾಬ್‌ನಲ್ಲಿ 93 ಮಹಿಳೆಯರು ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.14 ಕೋಟಿ ಮತದಾರರು ರಾಜಕೀಯ ನಾಯಕರುಗಳ ಭವಿಷ್ಯವನ್ನು ನಿರ್ಧಾರ ಮಾಡಲಿದ್ದಾರೆ.

ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್‌ ಚನ್ನಿ, ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್‌ ಮಾನ್‌, ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು, ಮಾಜಿ ಮುಖ್ಯಮಂತ್ರಿಗಳಾದ ಅಮರಿಂದರ್‌ ಸಿಂಗ್‌ ಮತ್ತು ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ. ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಾಲ್, ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಕೇಂದ್ರದ ಮಾಜಿ ಸಚಿವ ವಿಜಯ್ ಸಂಪ್ಲಾ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಅಬ್ಬರದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದರು. ಪಂಜಾಬ್ ಚುನಾವಣೆಯಲ್ಲಿ ಯಾವುದೇ "ಪ್ರಯೋಗ" ಕ್ಕೆ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ, ಶಾಂತಿ ಕಾಪಾಡುವುದು ರಾಜ್ಯಕ್ಕೆ ಅತ್ಯಂತ ಮುಖ್ಯ ಮತ್ತು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಅದು ಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭಾನುವಾರ ಅಂಗಡಿ, ವಾಣಿಜ್ಯ ಸಂಸ್ಥೆಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸಿದೆ. ಪ್ರಚಾರದ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ನಾನಾ ರೀತಿಯ ಉಚಿತ ಕೊಡುಗೆಗಳನ್ನು ನೀಡಿದ್ದವು. ಎಎಪಿ ಎಲ್ಲಾ ಮಹಿಳೆಯರಿಗೆ 1,000 ರೂ. ಭರವಸೆ ನೀಡಿದರೆ, ಕಾಂಗ್ರೆಸ್ ನಿರ್ಗತಿಕ ಮಹಿಳೆಯರಿಗೆ ತಿಂಗಳಿಗೆ 1,100 ರೂಪಾಯಿ ನೀಡುವ ಭರವಸೆ ನೀಡಿದೆ.

ಅದೇ ರೀತಿ ಎಸ್ಎಡಿ-ಬಿಎಸ್ ಪಿ ಮೈತ್ರಿಕೂಟ ಬಿಪಿಎಲ್ ಕಾರ್ಡುದಾರರ ಮುಖ್ಯಸ್ಥ ಮಹಿಳೆಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಭರವಸೆಯನ್ನು ನೀಡಿದೆ. ಅಲ್ಲದೆ, ಕಾಂಗ್ರೆಸ್ ಮತ್ತು ಎಸ್‌ಎಡಿ-ಬಿಎಸ್‌ಪಿ ಮೈತ್ರಿ ರಾಜ್ಯದಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿವೆ. ಯುಪಿಯ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 627 ಅಭ್ಯರ್ಥಿಗಳ ಭವಿಷ್ಯವನ್ನು 2.15 ಕೋಟಿ ಜನರು ನಿರ್ಧರಿಸಲಿದ್ದಾರೆ. ಮೂರನೇ ಹಂತದಲ್ಲಿ ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರೂಕಾಬಾದ್, ಕನ್ನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ್ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

click me!