ರಾಜ್ಯದಲ್ಲಿ ಅಪರಾದ ಪ್ರವೃತ್ತಿ ಹೆಚ್ಚುತ್ತಿದೆ. ಹಲ್ಲೆ, ಕೊಲೆ, ಸುಲಿಗೆ ಅತಿಯಾಗಿದೆ. ಸರ್ಕಾರದ ಎಲ್ಲ ಇಲಾಖೆಗಳೂ ಗೊಂದಲದ ಗೂಡಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕುಮಟಾ (ಮೇ.26): ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಡಳಿತ ನಡೆಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅಪರಾದ ಪ್ರವೃತ್ತಿ ಹೆಚ್ಚುತ್ತಿದೆ. ಹಲ್ಲೆ, ಕೊಲೆ, ಸುಲಿಗೆ ಅತಿಯಾಗಿದೆ. ಸರ್ಕಾರದ ಎಲ್ಲ ಇಲಾಖೆಗಳೂ ಗೊಂದಲದ ಗೂಡಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಅವಲೋಕನ ಸಭೆ ಉದ್ದೇಶಿಸಿ ಮಾತನಾಡಿದರು.
ಗ್ರೇಸ್ ಮಾರ್ಕ್ಸ್ ಕೊಟ್ಟರೂ ಪಾಸಾಗದ ಸರ್ಕಾರ ಈ ಸಿದ್ದರಾಮಯ್ಯನವರದು ಎಂದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಉತ್ಸುಕತೆಯಿಂದ ಒಟ್ಟಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಬಿಜೆಪಿ ವಿಜಯ ನಿಶ್ಚಿತ. ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಲಿಕ್ಕೆ ಕಾರಣವಾದ ಮತದಾರರು, ಕಾರ್ಯಕರ್ತರು ಹಾಗೂ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಶಾಸಕ ದಿನಕರ ಕೆ. ಶೆಟ್ಟಿ ಮಾತನಾಡಿದರು.
ಈ ಬಾರಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಜೊತೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಶ್ಚಿತವಾಗಿ ವಿಜಯ ಸಾಧಿಸುತ್ತಾರೆ. ಕುಮಟಾ ಕ್ಷೇತ್ರದಿಂದ ೨೫ ಸಾವಿರ ಮತಗಳ ಹೆಚ್ಚಿನ ಅಂತರವನ್ನು ನಮ್ಮ ಅಭ್ಯರ್ಥಿಗೆ ನೀಡುತ್ತೇವೆ ಎಂಬ ವಿಶ್ವಾಸವಿದೆ ಎಂದರು. ಬಳಿಕ ಸಭೆಯಲ್ಲಿ ಪ್ರತಿಯೊಂದು ಬೂತ್ ಮಟ್ಟದ ಮಾಹಿತಿಯನ್ನು ಪಡೆದು ಅವಲೋಕನ ನಡೆಸಲಾಯಿತು.
ರೈತರಿಗೆ ಅನ್ಯಾಯವಾಗದಂತೆ ಬೆಳೆಹಾನಿ ಸರ್ವೆ ಮಾಡಿ: ಸಚಿವ ತಿಮ್ಮಾಪುರ
ಸಭೆಯಲ್ಲಿ ಪಕ್ಷದ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗಡೆ, ಕ್ಷೇತ್ರ ಪ್ರಭಾರಿ ಕೆ.ಜಿ. ನಾಯ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಪ್ರಶಾಂತ ನಾಯ್ಕ, ರಾಜ್ಯ ಶಿಕ್ಷಕರ ಪ್ರಕೋಷ್ಠದ ಸಹ ಸಂಚಾಲಕ ಎಂ.ಜಿ. ಭಟ್, ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಶಕ್ತಿಕೇಂದ್ರ ಪ್ರಮುಖರು ಉಪಸ್ಥಿತರಿದ್ದರು. ಕುಮಟಾ ಮಂಡಲ ಅಧ್ಯಕ್ಷ ಜಿ.ಐ. ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ನಿರ್ವಹಿಸಿದರು. ಗಣೇಶ ಪಂಡಿತ ವಂದಿಸಿದರು.