ವಿಜಯಪುರ ಲೋಕಸಭಾ ಚುನಾವಣೆ, ಮತದಾನಕ್ಕೆ ಜಿಲ್ಲಾಡಳಿತ ಸಜ್ಜು: ಡಿಸಿ ಟಿ.ಭೂಬಾಲನ್ ಹೇಳಿದಿಷ್ಟು..

By Govindaraj S  |  First Published May 6, 2024, 9:30 AM IST

ಮುಕ್ತ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದಿಂದ,  ಮೇ.07ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.


ವಿಜಯಪುರ (ಮೇ.06): ಮುಕ್ತ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದಿಂದ,  ಮೇ.07ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19,46,090 ಮತದಾರರಿದ್ದು, ಜಿಲ್ಲೆಯಾದ್ಯಂತ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಇದೇ ಮೇ.7 ರಂದು ನಡೆಯುವ ಮತದಾನ ಹಾಗೂ ಜೂನ್. 4 ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತದಾರರ ವಿವರ ಹೀಗಿದೆ: ಜಿಲ್ಲೆಯಲ್ಲಿ 9,87,974 ಗಂಡು, 9,57,906 ಹೆಣ್ಣು ಹಾಗೂ 210 ಇತರೆ ಮತದಾರರು ಸೇರಿದಂತೆ ಒಟ್ಟು 19,46,090 ಮತದಾರರಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟು ಒಟ್ಟು 2357 ಮತದಾರರ ಪೈಕಿ 2170 ಮತದಾರರು ತಮ್ಮ ಮನೆಯಿಂದ ಮತ ಚಲಾಯಿಸಿದ್ದು, ಶೇ.92.06 ರಷ್ಟು ಮತದಾನವಾಗಿದೆ. ಅದರಂತೆ ಶೇ.40ಕ್ಕಿಂತ ಹೆಚ್ಚಿನ ದಿವ್ಯಾಂಗವಿರುವ (ಪಿಡಬ್ಲೂಡಿ) ಒಟ್ಟು 886 ಮತದಾರರ ಪೈಕಿ 854 ಮತದಾರರು ಮತ ಚಲಾಯಿಸುವ ಮೂಲಕ ಶೇ.96.38 ರಷ್ಟು ಮತದಾನವಾಗಿದೆ. 

Tap to resize

Latest Videos

undefined

ನನಗೆ, ಯೋಗಿ ಆದಿತ್ಯನಾಥ್‌ಗೆ ಮಕ್ಕಳು ಇಲ್ಲ, ನಿಮ್ಮ ಮಕ್ಕಳಿಗಾಗಿ ದುಡಿಯುತ್ತೇವೆ: ಪ್ರಧಾನಿ ಮೋದಿ ಭಾವುಕ

ಮತಗಟ್ಟೆಗಳ ವಿವರ ಹೀಗಿದೆ..: ವಿಜಯಪುರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಪ್ರತಿ ವಿಧಾನಸಭಾವಾರು 05 ಸಖಿ ಮತಗಟ್ಟೆ, 08 ದಿವ್ಯಾಂಗ ಮತಗಟ್ಟೆ, 08 ಯುವ ಮತಗಟ್ಟೆ, 08 ಧ್ಯೇಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ 171 ಸೂಕ್ಷ್ಮ ಹಾಗೂ 41 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.  ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೋ ಆಬ್ಜರ್ವರ್ ನೇಮಿಸಿದ್ದು, ವೆಬ್‍ಕಾಸ್ಟಿಂಗ್ ಮೂಲಕ ನಿಗಾ ಇಡಲಾಗುತ್ತಿದೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ರ್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ, , ವಿದ್ಯುತ್ ವ್ಯವಸ್ಥೆ, ಪೀಠೋಪಕರಣ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ, ಆಸನ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 

ವಿದ್ಯುನ್ಮಾನ ಮತಯಂತ್ರಗಳ ವಿವರ..!: ಚುನಾವಣೆಗಾಗಿ 2617 ಬಿ.ಯು, 2616 ಸಿ.ಯು, 2773 ವಿವಿಪ್ಯಾಟ್‍ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ನಂತರ ಮತ ಯಂತ್ರಗಳನ್ನು ಭದ್ರತೆಯಲ್ಲಿ ಇರಿಸಲು  ವಿಧಾನಸಭಾವಾರು ಮತ್ರಯಂತ್ರಗಳನ್ನು ಇರಿಸಲು ಸೈನಿಕಶಾಲೆಯಲ್ಲಿ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು,  ವಿಧಾನಸಭಾವಾರು ವಿವರದಂತೆ ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಮತಯಂತ್ರಗಳನ್ನು ಸೈನಿಕ ಶಾಲೆಯ ಒಡೆಯರ ಸದನದಲ್ಲಿ, ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಮತಕ್ಷೇತ್ರದ ಮತಯಂತ್ರಗಳನ್ನು ಆದಿಲ್‍ಶಾಹಿ ಸದನದಲ್ಲಿ, ವಿಜಯಪುರ ನಗರ ಹಾಗೂ ನಾಗಠಾಣ ಮತಕ್ಷೇತ್ರದ ಮತಯಂತ್ರಗಳನ್ನು ಹೊಯ್ಸಳ ಸದನದಲ್ಲಿ, ಇಂಡಿ ಹಾಗೂ ಸಿಂದಗಿ ಮತಕ್ಷೇತ್ರದ ಮತಯಂತ್ರಗಳನ್ನು ವಿಜಯಪುರ ನಗರ ಸದನದಲ್ಲಿ ವ್ಯವಸ್ಥೆ ಮಾಡಲಾಗಿದೆ. 

ಚುನಾವಣಾ ಸಿಬ್ಬಂದಿಗಳ ವಿವರ..!: ಚುನಾವಣಾ ಕರ್ತವ್ಯಕ್ಕೆ 2527 ಪಿಆರ್‍ಓ, 2527 ಎಪಿಆರ್‍ಓ, 5054 ಪಿಓ, 184 ಮೈಕ್ರೋ ಆಬ್ಜರ್ವರ್‍ಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಸಿಬ್ಬಂದಿಗಳಿಗೆ ಪ್ರತಿ ಮತಗಟ್ಟೆಗಳಿಗೆ  ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರನ್ನು ಅವಶ್ಯಕ ಔಷಧೋಪಚಾರದೊಂದಿಗೆ  ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಆಯಾ ಮತಗಟ್ಟೆಗಳಲ್ಲಿ ಹಾಗೂ ಆಯಾ ಮಸ್ಟರಿಂಗ್ ಡಿ ಮಸ್ಟರಿಂಗ್ ಕೇಂದ್ರಗಳಲ್ಲಿ ಉಟೋಪಚಾರ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ ಸಿಬ್ಬಂದಿಗಳಿಗೆ 241 ಬಸ್ಸು, 124 ಕ್ರೂಸರ್ ಸೇರಿದಂತೆ ಒಟ್ಟು 365 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ  ಮತಗಟ್ಟೆ ಸಿಬ್ಬಂದಿಗಳ ಮಕ್ಕಳ ಪಾಲನೆ-ಪೋಷಣೆಗಾಗಿ ದಿನಾಂಕ : 06-05-2024 ಮತ್ತು 07-05-2024 ರಂದು ಮಕ್ಕಳನ್ನು ನೋಡಿಕೊಳ್ಳಲು ಮಸ್ಟರಿಂಗ್ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೇಲ್ವಿಚಾರಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  

ಮತದಾರ ಸೌಲಭ್ಯ ಕೇಂದ್ರ- ಅಂಚೆ ಮತದಾನ ವಿವರ..!: ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಮತದಾರರಿರುವ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಧಿಕಾರಿ-ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಮತದಾರರ ಸೌಲಭ್ಯ ಕೇಂದ್ರಗಳಲ್ಲಿ ಹಾಗೂ ಅಂಚೆ ಮತದಾನ ಕೇಂದ್ರಗಳ (ಎಫ್‍ಸಿ &ಪಿವಿಸಿ) ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು,  ಸದರಿ ಸೌಲಭ್ಯ ಕೇಂದ್ರಗಳಲ್ಲಿ ಅಗತ್ಯ ಸೇವೆಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1969 ಮತದಾರರ ಪೈಕಿ 654 ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ಈ ಜಿಲ್ಲೆಯ ಮತದಾರರು ಹಾಗೂ ಈ ಜಿಲ್ಲೆಯ ಮತದಾರರು ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರ ಮತದಾರರು ಒಟ್ಟು 1382ರ ಪೈಕಿ 743 ಮತದಾರರು ಮತ ಚಲಾಯಿಸಿದ್ದಾರೆ. 

ಮಾದರಿ ನೀತಿ ಸಂಹಿತೆ..!: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಣೆ ಪ್ರಕರಣಗಳ ಮೇಲೆ  ನಿಗಾ ಇಡಲು ರಚಿಸಲಾದ ಪೊಲೀಸ್-ಕ್ಷೀಪ್ರ ಪಡೆಗಳು (ಎಫ್‍ಎಸ್‍ಟಿ) ಸ್ಥಿರ ಕಣ್ಗಾವಲು ತಂಡಗಳು (ಎಸ್‍ಎಸ್‍ಟಿ), ಆದಾಯ ತೆರಿಗೆ ಸೇರಿದಂತೆ ಒಟ್ಟು 378.51 ಲಕ್ಷ ರೂ. ನಗದು, 21.10ಲಕ್ಷ ರೂ.ಮೌಲ್ಯದ 5210.798 ಲೀ.  ಮದ್ಯ, 4.05 ಲಕ್ಷ ರೂ. ಮೌಲ್ಯದ 44.832 ಕಿ.ಗ್ರಾಂ. ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕುಂದು ಕೊರತೆ ಪರಿಹಾರ: ಮತದಾರರ ಸಹಾಯವಾಣಿಯಿಂದ ಸ್ವೀಕೃತವಾದ ಒಟ್ಟು 290 ಕರೆಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ ಎನ್.ಜಿ.ಆರ್.ಎಸ್. ಪೋರ್ಟಲ್‍ನಲ್ಲಿ 281 ದೂರುಗಳನ್ನು ದಾಖಲಿಸಲಾಗಿದ್ದು, ಎಲ್ಲ 281 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.  ನೀತಿ ಸಂಹಿತೆ ಉಲ್ಲಂಘನೆಯ 8 ದೂರುಗಳಿಗೆ ಸಂಬಂಧಿಸಿದಂತೆ 3 ದೂರುಗಳು ವಿಚಾರಣಾ ಹಂತದಲ್ಲಿದ್ದು, ಅಧಿಕಾರಿ-ನೌಕರರ ವಿರುದ್ದ ಸ್ವೀಕೃತವಾದ 38 ದೂರುಗಳ ಪೈಕಿ 36 ದೂರುಗಳನ್ನು ನಿಖಾಲಿ ಮಾಡಲಾಗಿದೆ. ಬಾಕಿ 2 ದೂರುಗಳು ವಿಚಾರಣೆಯಲ್ಲಿವೆ. ಇತರೆ ಚುನಾವಣೆಗೆ ಸಂಬಂಧಿಸಿದ 7 ದೂರುಗಳ ಪೈಕಿ 4 ದೂರುಗಳು ನಿಖಾಲಿಯಾಗಿದ್ದು, 3 ದೂರುಗಳು ವಿಚಾರಣೆ ಹಂತದಲ್ಲಿವೆ. ಸುವಿಧಾ ಅಡಿಯಲ್ಲಿ 250 ಅರ್ಜಿಗಳ ಪೈಕಿ 215 ಅರ್ಜಿ ಅಂಗೀಕರಿಸಲಾಗಿದೆ. 19 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 3 ಅರ್ಜಿಗಳು ಬಾಕಿ ಇವೆ, 13 ಅರ್ಜಿಗಳನ್ನು ರದ್ದುಗೊಳಿಸಲಾಗಿದೆ. 

ಕಾನೂನು ಸುವ್ಯವಸ್ಥೆ: ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಎಲ್ಲ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು 02 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 8 ಡಿಎಸ್‍ಪಿ, 26 ಸಿಪಿಐ, 95 ಪಿಎಸ್‍ಐ, 121 ಎಎಸ್‍ಐ, 704 ಹೆಚ್.ಸಿ., 1187 ಪಿಸಿ, 945 ಎಚ್‍ಜಿ, 11 ಎಫ್‍ಜಿ ಸೇರಿದಂತೆ 3099 ಜನರು ಸೇರಿದಂತೆ 55 ಸಿಎಪಿಎಫ್ ಹಾಗೂ 5 ಐಆರ್‍ಬಿ-ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಲೈಸನ್ಸ್ ಹೊಂದಿರುವ ಒಟ್ಟು 2363 ಆಯುಧಗಳ ಪೈಕಿ 2274 ಜಮಾ ಮಾಡಲಾಗಿದ್ದು, 54 ಆಯುಧಗಳನ್ನು ವಿನಾಯಿತಿ ನೀಡಲಾಗಿದೆ. 

Prajwal Revanna Sex Scandal: ಡಿಕೆ ಬ್ರದರ್ಸ್‌, ದೇವೇಗೌಡ ನಿವಾಸಕ್ಕೆ ಹೆಚ್ಚಿನ ಭದ್ರತೆ

ನಿಷೇಧಾಜ್ಞೆ: ಶೂನ್ಯ ಅವಧಿ (ಕೊನೆಯ 48 ಗಂಟೆಗಳು)ಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು ನಿಷೇಧಿಸಲಾಗಿದೆ. 5ಕ್ಕಂತ ಹೆಚ್ಚಿನ ಜನರು ತಿರುಗಾಡುವುದನ್ನು ನಿಷೇಧಿಸಿದೆ. ಮದ್ಯಪಾನ ಮಾರಾಟ ನಿಷೇಧಿಸಿದೆ. ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಕ್ಷೇತ್ರವನ್ನು ತೊರೆಯುವಂತೆ ತಿಳಿಸಿದೆ.  ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಸುಭದ್ರವಾದ ಸರ್ಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಮತವು ಅಮೂಲ್ಯವಾಗಿರುವುದರಿಂದ  ಜಿಲ್ಲೆಯ ಅರ್ಹ ಎಲ್ಲ ಮತದಾರರು ಮತದಾನದ ಹಬ್ಬದಲ್ಲಿ ಭಾಗವಹಿಸಿ ತಪ್ಪದೇ ಮತ ಚಲಾಯಿಸುಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

click me!