ನಾರಾಯಣ ಹೆಗಡೆ
ಹಾವೇರಿ (ನ.27) : ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ನಾಲ್ಕಾರು ತಿಂಗಳು ಬಾಕಿ ಇರುವಾಗಲೇ ಜಿಲ್ಲೆಯಲ್ಲಿ ರಾಜಕೀಯ ತುರುಸುಗೊಂಡಿದೆ. ಹಾವೇರಿ ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಶಾಸಕ ನೆಹರ ಓಲೇಕಾರ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಲು 7 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಯಾರಿಗೆ ಟಿಕೆಟ್ ಎಂಬ ಕುತೂಹಲ ಕೆರಳಿಸಿದೆ.
undefined
2008ರ ಕ್ಷೇತ್ರ ಮರುವಿಂಗಡಣೆ ಬಳಿಕ ಹಾವೇರಿ ವಿಧಾನಸಭಾ ಕ್ಷೇತ್ರವು ಎಸ್ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಆ ಬಳಿಕ ನಡೆದ ಮೂರು ಚುನಾವಣೆಯಲ್ಲಿ 2008 ಮತ್ತು 2018ರಲ್ಲಿ ಬಿಜೆಪಿಯಿಂದ ನೆಹರು ಓಲೇಕಾರ ಗೆದ್ದಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನಿಂದ ರುದ್ರಪ್ಪ ಲಮಾಣಿ ಗೆದ್ದು ಕ್ಷೇತ್ರ ಪ್ರತಿನಿಧಿಸಿದ್ದರು.
2008ಕ್ಕಿಂತ ಮೊದಲು ಇದೇ ಜೋಡಿ ಬ್ಯಾಡಗಿಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಬ್ಯಾಡಗಿ ಕ್ಷೇತ್ರದಲ್ಲಿ ಇವರಿಬ್ಬರೂ ತಲಾ ಒಂದು ಅವಧಿಗೆ ಶಾಸಕರಾಗಿದ್ದರು. ಈಗ ಇವರೇ ಹಾವೇರಿ ಕ್ಷೇತ್ರದಲ್ಲಿ ರಾಜಕೀಯ ಸ್ಪರ್ಧಿಗಳಾಗಿದ್ದಾರೆ. ಇವರೊಂದಿಗೆ ಎರಡೂ ಪಕ್ಷಗಳಲ್ಲಿ ಹೊಸ ಮುಖಗಳು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವುದು ಹಳೇ ಜೋಡಿಗೆ ತಲೆಬಿಸಿ ತಂದಿಟ್ಟಿದ್ದಾರೆ.
ಹಾವೇರಿ ಕ್ಷೇತ್ರ ಯಾವ ಪಕ್ಷಕ್ಕೂ ಭದ್ರ ಕೋಟೆ ಎನ್ನುವಂತಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯನ್ನೇ ಬೆಂಬಲಿಸಿರುವುದು ಚುನಾವಣಾ ಅಂಕಿಅಂಶಗಳಿಂದ ತಿಳಿದುಬರುತ್ತದೆ. 2013ರಲ್ಲಿ ಕೆಜೆಪಿ ಜನ್ಮತಾಳಿದ್ದು ಮತ್ತು ಬಿಜೆಪಿಯಲ್ಲಿನ ಒಳಜಗಳದಿಂದ ಕಾಂಗ್ರೆಸ್‌ಗೆ ಲಾಭವಾಯಿತು ಎಂಬ ಮಾತು ಕೇಳಿಬರುತ್ತಿದೆ. ಕ್ಷೇತ್ರದ ಜನ ಒಬ್ಬರನ್ನೇ ಬಹಳ ಸಲ ಆಯ್ಕೆ ಮಾಡಿದ್ದು ಕಡಿಮೆ. ಒಮ್ಮೆ ಬಿಜೆಪಿ ಬೆಂಬಲಿಸಿದರೆ, ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸುತ್ತ ಬಂದು ರಾಜಕೀಯ ಪ್ರಜ್ಞೆ ಮೆರೆದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಅಷ್ಟಕ್ಕಷ್ಟೇ ಎಂಬಂತಿದ್ದು, ಆ ಪಕ್ಷದ ಆಕಾಂಕ್ಷಿಗಳೂ ಸದ್ಯಕ್ಕೆ ಹುಟ್ಟಿಕೊಂಡಿಲ್ಲ. 2023ರ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಕೈ ಟಿಕೆಟ್ ರೇಸ್‌ನಲ್ಲಿ 7 ಜನ
ಸಿದ್ದರಾಮಯ್ಯ ಅವಧಿಯಲ್ಲಿ ಜವಳಿ ಮತ್ತು ಮುಜರಾಯಿ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ರುದ್ರಪ್ಪ ಲಮಾಣಿ ಈ ಸಲವೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸೋತ ಮೇಲೂ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದಾರೆ.
Cabinet Reshuffle: ಅಸಮರ್ಥರು, ಹಿರಿಯ ಸಚಿವರನ್ನು ಕ್ಯಾಬಿನೆಟ್‌ನಿಂದ ಕೈ ಬಿಡಿ: ಓಲೇಕಾರ್ ಆಗ್ರಹ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ ಸಹ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಅಗತ್ಯ ದಾಖಲೆಗಳನ್ನು ಪಡೆದು ಟಿಕೆಟ್‌ಗಾಗಿ ಈಚೆಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಾ. ಸಂಜಯ ಡಾಂಗೆ ಈ ಸಲ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಎರಡು ವರ್ಷಗಳಿಂದ ಕಾಂಗ್ರೆಸ್ ವಕ್ತಾರರಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಅವರು ಈ ಸಲ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ಪ್ರಯತ್ನ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಈರಪ್ಪ ಲಮಾಣಿ ಈ ಸಲ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ರುದ್ರಪ್ಪ ಲಮಾಣಿಗೆ ಟಕ್ಕರ್ ಕೊಡಲು ಸಿದ್ಧತೆ ನಡೆಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಶಿವಕುಮಾರ ತಾವರಗಿ, ಜಗದೀಶ ಬೆಟಗೇರಿ, ಚಂದನರಾಣಿ ದೊಡ್ಡಮನಿ, ಪುಟ್ಟಪ್ಪ ಮರಿಯಮ್ಮನವರ ಕೈ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ಕೆಲವರು ಸಿದ್ದರಾಮಯ್ಯ ಬೆಂಬಲಿಗರಾಗಿದ್ದರೆ, ಇನ್ನು ಕೆಲವರು ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಬಿಜೆಪಿಯಲ್ಲೂ ಹೊಸಮಖಗಳ ಪೈಪೋಟಿ
ಹಾಲಿ ಶಾಸಕ ನೆಹರು ಓಲೇಕಾರ ಅವರಿಗೆ ಟಿಕೆಟ್ ತಪ್ಪಿಸಲು ಕೆಲವರು ಒಳಗಿಂದಲೇ ಪ್ರಯತ್ನ ನಡೆಸಿದ್ದಾರೆ. ಸಂಘ, ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಬಿಜೆಪಿಯಲ್ಲಿ ಹೆಚ್ಚಿನ ಮನ್ನಣೆ ಇರುವುದರಿಂದ ಹಾಲಿ ಶಾಸಕರಿದ್ದರೂ ಟಿಕೆಟ್ ಪಕ್ಕಾ ಎಂಬಂತಿಲ್ಲ. ಇದೇ ಕಾರಣಕ್ಕೆ ಅನೇಕರು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.
ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರ ಮೇಗಳಮನಿ, ವೆಂಕಟೇಶ ನಾರಾಯಣಿ, ರಾಮು ಮಾಳಗಿ ಪ್ರಯತ್ನ ನಡೆಸಿದ್ದಾರೆ. ಸದ್ಯ ಬ್ಯಾಡಗಿ ತಹಸೀಲ್ದಾರ್ ಆಗಿರುವ ಗವಿಸಿದ್ದಪ್ಪ ದ್ಯಾಮಣ್ಣನವರ ಹೆಸರು ಕೂಡ ಪ್ರತಿ ಸಲದಂತೆ ಹರಿದಾಡುತ್ತಿದೆ.
ನೇರ ಹಣಾಹಣಿ ನಿರೀಕ್ಷೆ
ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯ ವಾತಾವರಣವಿದೆ.
ಕಳೆದ ಅವಧಿಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಇದ್ದ ಆಡಳಿತ ವಿರೋಧಿ ಅಲೆಯನ್ನು ಈ ಸಲ ನೆಹರು ಓಲೇಕಾರ ಎದುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು, ಅನುಷ್ಠಾನವಾಗದ 24ಗಿ7 ನೀರು ಪೂರೈಕೆ ಯೋಜನೆ, ನೆರೆಯಲ್ಲಿ ಮನೆ ಕಳೆದುಕೊಂಡ ಅನೇಕ ಅರ್ಹರಿಗೆ ಸಿಗದ ಪರಿಹಾರ ಇತ್ಯಾದಿ ಕಾರಣಗಳು ಓಲೇಕಾರಗೆ ಮೈನಸ್ ಆಗುವ ಸಾಧ್ಯತೆಯಿದೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೇ ಆಡಿರುವ ಮಾತುಗಳು ಮುಳುವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಸಚಿವ ಸಂಪುಟಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ, ಸಿಎಂ ವಿರುದ್ಧ ಸಿಡಿದೆದ್ದ ಓಲೇಕಾರ್
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಅವರು ಬೇಡಜಂಗಮ (ಎಸ್ಸಿ) ಜಾತಿ ಪ್ರಮಾಣ ಪತ್ರ ಪಡೆದಿದ್ದು, ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬ ಚರ್ಚೆಯಿದೆ. ಅಂತಿಮವಾಗಿ ಎರಡೂ ಪಕ್ಷಗಳು ಗೆಲ್ಲುವ ಅಭ್ಯರ್ಥಿಯನ್ನೇ ನೆಚ್ಚಿಕೊಳ್ಳುವುದು ನಿಶ್ಚಿತ. ಯಾರು ಕಣಕ್ಕಿಳಿಯುತ್ತಾರೆ, ಪಕ್ಷ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಗೊತ್ತಾಗಲು ಇನ್ನಷ್ಟುದಿನ ಕಾಯಲೇಬೇಕು.