ನನ್ನ ವಿರುದ್ಧ ಸಿಎಂ ಹಗರಣದ ಆರೋಪ ಮಾಡಿದ್ದಾರೆ. ಆರೋಪ ವಾಪಸ್ ಪಡೆಯದಿದ್ದರೆ ಧರಣಿ ಕೂರುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಉಡುಪಿ (ಜು.20): ನನ್ನ ವಿರುದ್ಧ ಸಿಎಂ ಹಗರಣದ ಆರೋಪ ಮಾಡಿದ್ದಾರೆ. ಆರೋಪ ವಾಪಸ್ ಪಡೆಯದಿದ್ದರೆ ಧರಣಿ ಕೂರುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಸಚಿವರಾಗಿದ್ದ ವೇಳೆ ಹಗರಣ ನಡೆದಿದೆ ಎಂಬ ಸಿಎಂ ಆರೋಪ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನಾನು ತಪ್ಪು ಮಾಡಿದ್ದರೆ ಜೈಲು ಶಿಕ್ಷೆ ಕೊಡುವ ಅಧಿಕಾರ ನಿಮಗಿತ್ತು. ಸಿಐಡಿಯೂ ನಿಮ್ಮ ಕೈಯಲ್ಲಿದೆ, ಒಂದು ವರ್ಷದಿಂದ ನೀವೇ ಮುಖ್ಯಮಂತ್ರಿಯಾಗಿದ್ದೀರಿ. ಆದರೆ ಕಳೆದೊಂದು ವರ್ಷದಿಂದ ಅದ್ಯಾವುದೂ ನೀವು ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ವಿಪಕ್ಷ ನಾಯಕರಾಗಿದ್ದಿರಿ ಆಗಲೂ ಏನೂ ಸೊಲ್ಲೆತ್ತಿಲ್ಲ. ಈಗ ವಾಲ್ಮೀಕಿ ಹಗರಣ ಬಯಲಿಗೆ ಬರ್ತಿದ್ದಂತೆ ಬೇರೆಯವರ ತಲೆಮೇಲೆ ಹಾಕಲು ಹೀಗೆ ಹೇಳುತ್ತಿದ್ದೀರಿ. ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಿರಿ ಇಲ್ಲವಾದರೆ ತಕ್ಷಣ ಈ ಪ್ರಕರಣವನ್ನ ಸಿಬಿಐಗೆ ವಹಿಸಿ ಎಂದು ಸವಾಲು ಹಾಕಿದರು.
ಮುಡಾ ಹಗರಣ ಮುಚ್ಚಿಕೊಳ್ಳಲು ವಿಪಕ್ಷಗಳ ಮೇಲೆ ತನಿಖೆಯ ಗುಮ್ಮ: ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಸಚಿವನಾಗಿದ್ದಾಗ ನಾನು ಒಂದು ರೂಪಾಯಿ ಅವ್ಯವಹಾರ ಮಾಡಿಲ್ಲ. ಮಾಡಿದ್ದೇನೆಂದರೆ ಸಿಬಿಐ ತನಿಖೆಗೆ ವಹಿಸಿ. ಒಂದು ವಾರ ಸಮಯ ಕೊಡುತ್ತೇನೆ. ವಾರದೊಳಗೆ ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತುಕೊಳ್ಳುತ್ತೇನೆ ಈ ಮೂಲಕ ವಾಲ್ಮೀಕಿ ನಿಗಮ ಹಗರಣ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯಕ್ಕೆ ಅಪಚಾರವಾಗಬಾರದು. ಎಂದರು.
ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣವನ್ನು ಚುನಾವಣೆಗೆ ಕೊಟ್ಟಿದ್ದೀರಿ. ಪರಿಶಿಷ್ಟ ಪಂಗಡ ಬಡವರಿಗೆ ಬಳಕೆಯಾಗಬೇಕಿದ್ದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಕೆ ಮಾಡುವ ಮೂಲಕ ದೊಡ್ಡ ಅಪರಾಧ ಮಾಡಿರುವ ಕಾಂಗ್ರೆಸ್ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.
ಹಿಂದಿನ ಸರ್ಕಾರದಲ್ಲಿ ನಡೆದ ಹಗರಣಗಳ ತನಿಖೆ ಬಗ್ಗೆ ಮಾತಾಡಿದ್ದೀರಿ. ನನ್ನ ಹೆಸರನ್ನು ಕೂಡ ಹಗರಣದಲ್ಲಿ ಎಳೆದು ತಂದಿದ್ದೀರಿ. ಕೋಟ ಶ್ರೀನಿವಾಸ ಪೂಜಾರಿ ಕೊಳವೆಭಾವಿ ಹಗರಣ ಮಾಡಿದ್ದಾನೆ ಎಂದಿದ್ದೀರಿ. ನಿಮಗೆ ನಾನು ಅಧಿಕೃತವಾಗಿ ಪತ್ರ ಬರೆಯುತ್ತೇನೆ. ನಾನು ಮಂತ್ರಿಯಾಗಿದ್ದಾಗ ಟೆಂಡರಿನಲ್ಲಿ ಅಕ್ರಮವಾಗಿದೆ ಎಂಬ ದೂರು ಕೇಳಿ ಬಂತು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೆಲ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಆ ಅಧಿಕಾರಿಗಳು ದುರ್ನಡತೆಯವರಾಗಿದ್ದರು. ಹಗರಣ ಮಾಡಿದವರಾಗಿದ್ದರು. ನಾನು ತಕ್ಷಣ ಅವರನ್ನು ಅಮಾನತು ಮಾಡಿದ್ದೆ. ಕಡತ ತರಿಸಿಕೊಂಡು ನಾನು ತಕ್ಷಣ ಸಿಐಡಿ ತನಿಖೆಗೆ ಆದೇಶಿಸಿದೆ. ರಾಜ್ಯದ ಇತಿಹಾಸದಲ್ಲಿ ಟೆಂಡರ್ ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ.
ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದ್ದು ನಿಜ, ಆದರೆ ಮುಡಾದಲ್ಲಿ ನಡೆದಿಲ್ಲ: ಎಂಬಿ ಪಾಟೀಲ್
ಪ್ರಥಮ ಬಾರಿಗೆ ಆದೇಶ ದೊರೆತ ರೈತರಿಗೆ ನೇರ ಕೊಳವೆಬಾವಿ ಖರೀದಿಗೆ ಅವಕಾಶ ಕಲ್ಪಿಸಿದೆ. ರೈತರ ಖಾತೆಗಳಿಗೆ ನೇರ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದೆ. ರೈತರಿಗೆ ಕೊಳವೆಬಾವಿ ಮಂಜೂರಾದರೆ ಯಾವ ಏಜೆನ್ಸಿ ಮೂಲಕ ತರಿಸಿಕೊಳ್ಳಬಹುದು ಈ ವ್ಯವಸ್ಥೆ ಮಾಡಿದ್ದೆ. ನಾನು ಮಾಡಿದ ವ್ಯವಸ್ಥೆ ಇಂದಿಗೂ ನಡೆಯುತ್ತಿದೆ. ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಹಗರಣ ಆಗಿಲ್ಲ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಹೇಳಿದ್ದಾರೆ. ಒಂದೇ ಒಂದು ರೂಪಾಯಿ ದುರುಪಯೋಗ ಮಾಡಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ನನ್ನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದೀರಿ. ನಾನು ಸೃಷ್ಟೀಕರಣ ಕೇಳಿ ನಿಮಗೆ ಪತ್ರ ಬರೆದಿದ್ದೇನೆ. ಉತ್ತರ ಕೊಡಿ ಎಂದರು.