
ತುಮಕೂರು (ಜೂ.08): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಸ್ಪರ್ಧಿಸುತ್ತಾರೆ. ಸೋಮಣ್ಣಗೆ ನೀವು ಸಾಥ್ ನೀಡಿ ಎಂದು ವೀರಶೈವ ಸಮಾಜಕ್ಕೆ ಸಂಸದ ಜಿ.ಎಸ್.ಬಸವರಾಜು ಮನವಿ ಮಾಡಿದ್ದಾರೆ. ನಗರದಲ್ಲಿ ನಡೆದ ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಅವರ ಮಾತು ಈಗ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಮ್ಮಲ್ಲೇ ಕಿತ್ತಾಡಿದ್ರೆ, ನಿಮ್ಮನ್ನೇ ಒದ್ದು ಓಡಿಸುತ್ತಾರೆ. ಅದು ಕೂಡ ಸನ್ನಿಹಿತವಾಗಿದೆ. ನನ್ನದಾಯ್ತು, ನನ್ನ ಸೀಟನ್ನು ಸೋಮಣ್ಣಗೆ ಕೊಡುತ್ತಾರೆ. ಮುಂದಿನ ಬಾರಿ ನಾನು ಚುನಾವಣೆಯಲ್ಲಿ ನಿಲ್ಲಲ್ಲ.
ನಾನು ದೆಹಲಿಗೆ ಹೋಗಿದ್ದಾಗ ವರಿಷ್ಠರಿಗೆ ಈ ಬಗ್ಗೆ ತಿಳಿಸಿದ್ದೇನೆ. ಸೋಮಣ್ಣ ಅವರ ಬೆಂಬಲಕ್ಕೆ ನಿಲ್ಲಿ. ಸಮಾಜ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಮುಂದೆ ಬರುವವರನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ, ಇಬ್ಬಗೆ ನೀತಿ ಮಾಡಿಕೊಳ್ಳಬೇಡಿ. ಇವರ ಮೇಲೆ ಅವರನ್ನು, ಅವರ ಮೇಲೆ ಇವರನ್ನು ಎತ್ತಿ ಕಟ್ಟಬೇಡಿ. ನಾನು ಈವರೆಗೆ ಲೋಕಸಭೆಗೆ 8 ಬಾರಿ ಸ್ಪರ್ಧಿಸಿದ್ದು, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತಿದ್ದೇನೆ. ಈ ಹಿಂದೆ ನಮ್ಮವರೇ ನನ್ನನ್ನು ಸೋಲಿಸಿದರು. ಆದರೆ, ನಾನು ಸೋತರೂ, ಗೆದ್ದರೂ ಒಂದೇ ರೀತಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಬಿಜೆಪಿ ಕಾಲದ 3 ಕಾಯ್ದೆಗಳು ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ
ಕೇಂದ್ರದಿಂದ ಜಿಲ್ಲೆ ಎಲ್ಲಾ ವಿಧದಲ್ಲೂ ಅಭಿವೃದ್ಧಿ: ಪ್ರಧಾನಿಮಂತ್ರಿಯಾಗಿ ನರೇಂದ್ರ ಮೋದಿ 9 ವರ್ಷ ಪೂರೈಸಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೆಗಾ ಪುಡ್‌ಪಾರ್ಕ್, ಎಚ್‌ಎಎಲ್, ಇಸ್ರೋ ಸೇರಿದಂತೆ ಹಲವಾರು ಮಹತ್ವದ ಕೆಲಸಗಳು ಆಗಿವೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ, ಕೃಷಿ, ತೋಟಗಾರಿಕೆ, ಕೈಗಾರಿಕೆ ಸೇರಿದಂತೆ ಎಲ್ಲಾ ವಿಧದಲ್ಲಿಯೂ ಜಿಲ್ಲೆ ಅಭಿವೃದ್ದಿ ಕಂಡಿದೆ ಎಂದರು. ಆರ್ಥಿಕ ತಜ್ಞ ನಂಜುಂಡಪ್ಪ ವರದಿ ಅನ್ವಯ ತುಮಕೂರು ಜಿಲ್ಲೆಯ 8 ತಾಲೂಕುಗಳು ಅತಿ ಹಿಂದುಳಿದ ತಾಲೂಕುಗಳಾಗಿದ್ದವು.
ಆದರೆ ಕಳೆದ 9 ವರ್ಷಗಳಲ್ಲಿ ಮೋದಿಯ ದೂರದೃಷ್ಟಿಯೋಜನೆಗಳ ಫಲವಾಗಿ ಇಂದು ಎಲ್ಲಾ ತಾಲೂಕುಗಳು ಮುಂದುವರೆದಿವೆ. ಮಿಷನ್ ಅಮೃತ ಸರೋವರ, ಅಟಲ ಭೂ ಜಲ ಯೋಜನೆಯ ಮೂಲಕ ಕೆರೆಗಳಲ್ಲಿದ್ದ ಹೂಳು ಎತ್ತಿ, ಎಲ್ಲಾ ಕೆರೆಗಳಿಗೆ ಅಂತರ್ಜಲ ವೃದ್ಧಿಯಾಗುವಂತೆ ಮಾಡಲಾಗಿದೆ. ಇದರ ಜೊತೆಗೆ ಭದ್ರ ಮೇಲ್ದಂಡೆ ಯೋಜನೆಗೆ 5000ಕ್ಕೂ ಹೆಚ್ಚು ಕೋಟಿ ಅನುದಾನ ನೀಡಲಾಗಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಜಲ ಸಂವೃದ್ಧಿ ಹೆಚ್ಚಾಗಿ, ರೈತರು ಕೃಷಿ ಮಾಡಿ, ಸಮೃದ್ಧಿಯ ಜೀವನ ನಡೆಸುತಿದ್ದಾರೆ ಎಂದು ಜಿ.ಎಸ್.ಬಸವರಾಜು ನುಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರು. ಪೋ›ತ್ಸಾಹಧನ ನೀಡಲಾಗುತ್ತಿದೆ. ಅಲ್ಲದೆ ತೋಟಗಾರಿಕೆ ಇಲಾಖೆಯ ಒಂದು ಜಿಲ್ಲೆ, ಒಂದು ಉತ್ಪನ್ನದಲ್ಲಿ ತೆಂಗು ಆಯ್ಕೆಯಾಗಿದ್ದು, ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳು ಹೇರಳವಾಗಿವೆ. ಕೃಷಿ ಸಂಶೋಧನಾ ಸಂಸ್ಥೆ ಹಿರೇಹಳ್ಳಿಯ ಮೂಲಕ ಕೇಂದ್ರದ ಎಂಡಿಐ ಯೋಜನೆಯಡಿ ಡ್ಯಾಗ್ರನ್ ಪೂ›ಟ್‌ಗೆ ಸಂಬಂಧಿಸಿದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಅನುಮೋದನೆ ದೊರೆತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ವಿಪಕ್ಷಗಳಿಗೆ ಗ್ಯಾರಂಟಿ ಬಗ್ಗೆ ಅನವಸರ ಗೊಂದಲ: ಸಂಸದ ಡಿ.ಕೆ.ಸುರೇಶ್
ಜಿಲ್ಲೆಯಲ್ಲಿ ಕಳೆದ 9 ವರ್ಷಗಳಲ್ಲಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಬೆಂಗಳೂರು-ಮುಂಬೈ ಏಕನಾಮಿಕ್ಸ್ ಇಂಡಸ್ಟ್ರೀಯಲ್ ಕಾರಿಡಾರ್‌ಗೆ ಕೇಂದ್ರ ಸರ್ಕಾರ ಒಪ್ಪಿದ್ದು, ಮುಂದೊಂದು ದಿನ ವಸಂತನರಸಾಪುರ ಕೈಗಾರಿಕಾ ವಸಾಹತು ಮತ್ತೊಂದು ಗ್ರೇಟರ್ ನೋಯಿಡಾ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಕಳೆದ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡ ಎಚ್‌ಎಎಲ್ ಬಹು ಉಪಯೋಗಿ ಲಘು ಹೆಲಿಕಾಪ್ಟರ್ ಘಟಕದಿಂದ ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಅಲ್ಲದೆ ಹಳೆಯ ಎಚ್‌ಎಂಟಿ ಜಾಗದಲ್ಲಿ ಇರುವ ಇಸ್ರೋ ಘಟಕದಿಂದ ರಾಕೆಟ್ ಉಡಾವಣೆಗೆ ಬೇಕಾದ ಬಿಡಿ ಬಾಗಗಳ ಉತ್ಪಾದನಾ ಘಟಕ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.