ಉಪಚುನಾವಣೆ ಸೋಲಿನ ಕಾರಣ ಬಿಚ್ಚಿಟ್ಟು, ತಪ್ಪು ಸರಿಪಡಿಸಿಕೊಳ್ತೇವೆ ಎಂದ ಸಚಿವ ಸೋಮಣ್ಣ

Published : May 06, 2026, 06:17 AM IST
V Somanna

ಸಾರಾಂಶ

ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲಿಗೆ ತಂಡವಾಗಿ ಸರಿಯಾಗಿ ಕೆಲಸ ಮಾಡದಿರುವುದೇ ಕಾರಣ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಮ್ಮ ಅತಿಯಾದ ಆತ್ಮವಿಶ್ವಾಸವೂ ಸೋಲಿಗೆ ಕಾರಣವಾಯಿತು ಎಂದ ಅವರು, ಎಲ್ಲರೂ ಜವಾಬ್ದಾರಿ ಹೊತ್ತು ಮುಂದೆ ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ತಂಡವಾಗಿ ಸರಿಯಾಗಿ ಕೆಲಸ ಮಾಡದ ಪರಿಣಾಮ ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನನ್ನನ್ನೂ ಒಳಗೊಂಡಂತೆ ಪಕ್ಷ ಇದ್ದರೆ ನಾವು, ದೇಶ ಇದ್ದರೆ ಪಕ್ಷ. ನಮ್ಮೆಲ್ಲರಿಗಿಂತಲೂ ದೇಶ ದೊಡ್ಡದು ಎಂಬುದು ಪಕ್ಷದ ರಾಷ್ಟ್ರೀಯ ನಾಯಕರ ಸಂದೇಶ. ಈ ಸಂದೇಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ನಮಗೆ ಹಿನ್ನಡೆಯಾಗಿದೆ. ಮುಂದೆ ಇದನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ದೇಶಕ್ಕಾಗಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಪಡುತ್ತಿರುವ ಶ್ರಮದ ಎದುರು ನಮ್ಮದು ಏನೇನೂ ಇಲ್ಲ. ಮುಂದೆ ನಾವೆಲ್ಲ ಎಚ್ಚೆತ್ತುಕೊಂಡು ಅವರ ದಾರಿಯಲ್ಲಿ ಹೆಜ್ಜೆ ಹಾಕುತ್ತೇವೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಪಚುನಾವಣೆ ಸೋಲಿಗೆ ಜವಾಬ್ದಾರಿ ಯಾರು ಎನ್ನುವುದಕ್ಕಿಂತ ತಂಡವಾಗಿ ಕೆಲಸ ಮಾಡುವಲ್ಲಿ ಎಡವಟ್ಟಾಗಿದೆ. ನನ್ನದೂ ಜವಾಬ್ದಾರಿ ಇತ್ತು. ಎಲ್ಲರೂ ಕುಳಿತು ಚರ್ಚಿಸಿ ಸರಿಯಾದ ತೀರ್ಮಾನ ಕೈಗೊಳ್ಳಬೇಕಿತ್ತು. ಈಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಹೋಗುತ್ತೇನೆ: ಸೋಮಣ್ಣ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ನನ್ನನ್ನೂ ಕರೆದಿದ್ದಾರೆ. ಪಕ್ಷಾತೀತವಾಗಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರು ಪಕ್ಷ ಕಟ್ಟಿದವರು. ಹೀಗಾಗಿ ಆ ಕಾರ್ಯಕ್ರಮಕ್ಕೆ ನಾನೂ ಹೋಗುತ್ತೇನೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಕೇಂದ್ರ ಸಚಿವ ಸೋಮಣ್ಣ ತಿಳಿಸಿದರು.

ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ 28 ರೋಡ್‌ ಶೋ ನಡೆಸಿದ್ದರು. ಗೃಹ ಸಚಿವ ಅಮಿತ್ ಶಾ ಹಲವು ದಿನ ಅಲ್ಲೇ ವಾಸವಾಗಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಉತ್ತಮವಾಗಿ ಕೆಲಸ ಮಾಡಿ ಪಶ್ಚಿಮ ಬಂಗಾಳವನ್ನು ಗಂಡಾಂತರದಿಂದ ಪಾರು ಮಾಡಿದರು. ನಾವು ಕೂಡ ಇಲ್ಲಿ ಅದೇ ಕೆಲಸ ಮಾಡಬೇಕಿತ್ತು. ಈ ಉಪಚುನಾವಣೆ ಸೋಲು ನನಗೂ ನೋವು ತಂದಿದೆ ಎಂದು ಹೇಳಿದರು.

ನಿರೀಕ್ಷಿತ ಫಲಿತಾಂಶ ತರಲು ಸಾಧ್ಯವಾಗಿಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ದೇವದುರ್ಗ ಉಪಚುನಾವಣೆಯಲ್ಲಿ 10 ಮಂದಿ ಸಚಿವರನ್ನು ಹಾಕಿದ್ದರು. ಮೊದಲು ಹುರುಪಿನಲ್ಲಿದ್ದರು. ಈಗ ನಿಷ್ಪ್ರಯೋಜಕರಾಗಿದ್ದಾರೆ. ಅವರು ಈ ಉಪಚುನಾವಣೆ ಗೆದ್ದಿಲ್ಲ. ಪಾಪದ ದುಡ್ಡಿನಿಂದ ಗೆದ್ದಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಎಲ್ಲರೂ ಜೊತೆಯಾಗಿ ಹೋಗಬೇಕು. ನಮ್ಮ ಅತಿಯಾದ ಆತ್ಮವಿಶ್ವಾಸವೂ ಸೋಲಿಗೆ ಕಾರಣ. ಈ ಹಿಂದೆ ನಾನು 7-8 ಉಪಚುನಾವಣೆ ಮಾಡಿದ್ದೇನೆ. ಈ ಬಾರಿ ನಿರೀಕ್ಷಿತ ಫಲಿತಾಂಶ ತರಲು ಸಾಧ್ಯವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ ಮೇಲೆ ಮತ್ತೆ ಚರ್ಚೆ ಅಪ್ರಸ್ತುತ: ಸಚಿವ ಪ್ರಿಯಾಂಕ್
ಮುಂದಿನ ವಾರ ಸಿದ್ದು, ಡಿಕೆಗೆ ದಿಲ್ಲಿಗೆ ಬುಲಾವ್‌? ನಾಯಕತ್ವ, ಸಂಪುಟ ಪುನಾರಚನೆ ಚರ್ಚೆ ಸಂಭವ