ಮೋದಿ ಸಾಧನೆ ಪ್ರಸ್ತಾಪಿಸಿದ್ದಕ್ಕೆ ಸದನದಲ್ಲಿ ಗದ್ದಲ

Published : Jul 19, 2023, 03:00 AM IST
ಮೋದಿ ಸಾಧನೆ ಪ್ರಸ್ತಾಪಿಸಿದ್ದಕ್ಕೆ ಸದನದಲ್ಲಿ ಗದ್ದಲ

ಸಾರಾಂಶ

ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಿವರಾಜ್‌ ತಂಗಡಗಿ, ನರೇಂದ್ರ ಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಅವರ ಅಂಕಿ ಅಂಶಗಳು ಸುಳ್ಳು. ಮೋದಿ ಸರ್ಕಾರ ಎಷ್ಟುಸಾಲ ಮಾಡಿದೆ, ಯಾವ್ಯಾವ ಉದ್ಯಮಿಗಳಿಗೆ ಎಷ್ಟುಸಾಲ ಮನ್ನ ಮಾಡಿದೆ, 15 ಲಕ್ಷ, 2 ಕೋಟಿ ಉದ್ಯೋಗ ಮತ್ತಿತರ ಭರವಸೆಗಳು ಏನಾದವು ಎಂಬುದನ್ನೂ ಹೇಳಲಿ ಎಂದರು. ಈ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನಸಭೆ(ಜು.19):  ರಾಜ್ಯಪಾಲರ ಭಾಷಣ, ಬಜೆಟ್‌ ಮೇಲಿನ ಚರ್ಚೆಯ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನೂ ಸಾಧನೆ ಮಾಡಿಲ್ಲ ಎಂಬ ಕಾಂಗ್ರೆಸ್‌ನ ವಿವಿಧ ಸದಸ್ಯರ ಆರೋಪ, ಟೀಕೆಗಳಿಗೆ ಪ್ರತ್ಯುತ್ತರವಾಗಿ ಮಂಗಳವಾರ ಬಿಜೆಪಿಯ ವೇದವ್ಯಾಸ ಕಾಮತ್‌ ಸದನದಲ್ಲಿ ಮೋದಿ ಸರ್ಕಾರ ಸಾಧನೆಗಳ ಪಟ್ಟಿಓದಲಾರಂಭಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿ ಸದನಲ್ಲಿ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ವೇದವ್ಯಾಸ ಕಾಮತ್‌, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ 28 ಬಾರಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿರುವುದು ದುರದೃಷ್ಟಕರ. ಮಾತೆತ್ತಿದರೆ ಕಾಂಗ್ರೆಸ್‌ನವರು ಮೋದಿ ಸರ್ಕಾರ ಏನೂ ಮಾಡಿಲ್ಲ ಎನ್ನುತ್ತಾರೆ. ಕಳೆದ 9 ವರ್ಷಗಳ ಆಡಳಿತದಲ್ಲಿ ಮೋದಿ ಸರ್ಕಾರ ಏನೇನು ಮಾಡಿದೆ ಎಂದು ಅಂಕಿ ಅಂಶಗಳ ಸಹಿತವಾಗಿ ಪಟ್ಟಿಮಾಡಿ ತಂದಿದ್ದೇನೆ. ಅದನ್ನು ಸದನದಲ್ಲಿ ತಿಳಿಸುತ್ತೇನೆ ಎಂದು ಪಟ್ಟಿ ಓದಲಾರಂಭಿಸಿದರು.

ಸದನಕ್ಕೆ ಆಗಮಿಸದ ಸಚಿವರು: ಸ್ಪೀಕರ್‌ ಖಾದರ್ ಗರಂ

ಮೋದಿ ಸರ್ಕಾರದ ಅಧಿಕಾರದಲ್ಲಿ ದೇಶದಲ್ಲಿ 26000 ಕಿ.ಮೀ. ಇದ್ದ ರಾಷ್ಟ್ರೀಯ ಹೆದ್ದಾರಿ 54,000 ಕಿ.ಮೀ.ಗೆ ಹೆಚ್ಚಾಗಿದೆ. 3.8 ಲಕ್ಷ ಕಿ.ಮೀ ಇದ್ದ ಗ್ರಾಮೀಣ ರಸ್ತೆಗಳು 7.3 ಲಕ್ಷ ಕಿ.ಮೀ.ಗೆ, ಇತರೆ ರಸ್ತೆಗಳು 91 ಸಾವಿರ ಕಿ.ಮೀ.ನಿಂದ 1.9 ಲಕ್ಷ ಕಿ.ಮೀಟರ್‌ಗೆ, 5 ನಗರಗಳಲ್ಲಿದ್ದ ಮೆಟ್ರೋ 15 ನಗರಗಳಿಗೆ ವಿಸ್ತರಣೆಯಾಗಿದೆ. ಏರ್‌ಪೋರ್ಚ್‌ಗಳ ಸಂಖ್ಯೆ 74ರಿಂದ 148, ಐಐಟಿಗಳು 16ರಿಂದ 23ಕ್ಕೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 64ರಿಂದ 1341ಕ್ಕೆ, ವಿಶ್ವವಿದ್ಯಾಲಯಗಳ ಸಂಖ್ಯೆ 720ರಿಂದ 1603ಕ್ಕೆ ಏರಿಕೆಯಾಗಿದೆ. 3.91 ಕೋಟಿ ಯಷ್ಟಿದ್ದ ಆದಾಯ ತೆರಿಗೆ ಮರುಪಾವತಿ ಈಗ 7.9 ಕೋಟಿಗಿಂತ ಹೆಚ್ಚಾಗಿದೆ. 87 ಲಕ್ಷ ಕೋಟಿಯಷ್ಟಿದ್ದ ಬ್ಯಾಂಕ್‌ ಠೇವಣಿಗಳು 185 ಲಕ್ಷ ಕೋಟಿಗೆ ಏರಿದೆ. 120 ಕೋಟಿಯಷ್ಟಿದ್ದ ಬ್ಯಾಂಕ್‌ ಖಾತೆಗಳು 300 ಕೋಟಿ ತಲುಪಿದೆ. ಯೂನಿಕಾರ್ನ್‌ 115ಕ್ಕೆ ಏರಿಕೆಯಾಗಿವೆ ಎಂದು ಸುದೀರ್ಘ ಪಟ್ಟಿಓದತೊಡಗಿದರು.

ಈ ವೇಳೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಿವರಾಜ್‌ ತಂಗಡಗಿ, ನರೇಂದ್ರ ಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಅವರ ಅಂಕಿ ಅಂಶಗಳು ಸುಳ್ಳು. ಮೋದಿ ಸರ್ಕಾರ ಎಷ್ಟುಸಾಲ ಮಾಡಿದೆ, ಯಾವ್ಯಾವ ಉದ್ಯಮಿಗಳಿಗೆ ಎಷ್ಟುಸಾಲ ಮನ್ನ ಮಾಡಿದೆ, 15 ಲಕ್ಷ, 2 ಕೋಟಿ ಉದ್ಯೋಗ ಮತ್ತಿತರ ಭರವಸೆಗಳು ಏನಾದವು ಎಂಬುದನ್ನೂ ಹೇಳಲಿ ಎಂದರು. ಈ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕಬ್ಬಿನ ತೂಕದಲ್ಲಿ ಮೋಸ ದೂರು: ಸಕ್ಕರೆ ಫ್ಯಾಕ್ಟರಿಗಳಲ್ಲಿನ್ನು ಸರ್ಕಾರಿ ತೂಕ ಯಂತ್ರ?

ಬಿಜೆಪಿಯ ಸುನಿಲ್‌ ಕುಮಾರ್‌, ನೀವು ಬಜೆಟ್‌ನಲ್ಲಿ ಹೇಳಿರುವುದೆಲ್ಲವೂ ಸತ್ಯನಾ. ನೀವು ಹೇಳಿರುವುದನ್ನು ನಾವು ಕೇಳಿದ್ದೇವೆ. ಈಗ ನಮ್ಮ ಸದಸ್ಯರು ಅಂಕಿ ಅಂಶಗಳ ಸಹಿತ ಹೇಳುತ್ತಿದ್ದಾರೆ ತಾಳ್ಮೆಯಿಂದ ಕೇಳಿ ಎಂದರು. ಬಿಜೆಪಿಯ ಎಸ್‌.ಸುರೇಶ್‌ಕುಮಾರ್‌, ಬಜೆಟ್‌ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬ ನಿಮ್ಮ ಸಲಹೆಯನ್ನು ಬಜೆಟ್‌ ತಯಾರಕರಿಗೆ ಕೊಟ್ಟಿದ್ದರೆ ಸರಿಯಾಗಿರುತ್ತಿತ್ತು ಎಂದರು. ಇದರ ನಡುವೆಯೇ ವೇದವ್ಯಾಸ ಕಾಮತ್‌ ತಮ್ಮ ಮಾತು ಮುಂದುವರೆಸಿದಾಗ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಮಧ್ಯಪ್ರವೇಶಿಸಿದ ಸ್ಪೀಕರ್‌ ಯು.ಟಿ.ಖಾದರ್‌, ಆಡಳಿತ ಪಕ್ಷದ ಸದಸ್ಯರಿಗೆ ಬೇಕಾದಂತೆ ಮಾತನಾಡಲು ಅವರು ಪ್ರತಿಪಕ್ಷದಲ್ಲಿ ಕೂತಿಲ್ಲ. ನಿಮ್ಮ ವಿರುದ್ಧ ಮಾತನಾಡಲೆಂದೇ ಅಲ್ಲಿ ಕೂತಿರುವುದು. ಅವರ ಮಾತು ಸತ್ಯವೋ, ಸುಳ್ಳೋ ಎಂಬುದರ ಬಗ್ಗೆ ನಿಮಗೆ ಅವಕಾಶ ಕೊಟ್ಟಾಗ ನೀವು ಬೆಳಕುಚೆಲ್ಲಿ ಎಂದು ಹೇಳು ಮೂಲಕ ಕಾಂಗ್ರೆಸ್‌ ಸದಸ್ಯರನ್ನು ಸುಮ್ಮನಾಗಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ