ಜೆಡಿಎಸ್‌ನ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ರಾಜೀನಾಮೆ ನೀಡಿದ್ದು, ಈ ರಾಜೀನಾಮೆ ವಿಚಾರ ಬಹಿರಂಗಗೊಂಡಿದೆ. ಇದರ ಮಧ್ಯೆಯೇ ಮತ್ತೋರ್ವ ಜೆಡಿಎಸ್ ಹಿರಿಯ ನಾಯಕ ಕುಮಾರಸ್ವಾಮಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ಗುಡ್‌ಬೈ ಹೇಳುತ್ತಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿ, (ಅ.16): ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿಚಾರಗಳು ಸಖತ್ ಸದ್ದು ಮಾಡುತ್ತಿವೆ. ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಏನಾಗುತ್ತಿದೆ ಎಂಬುದು ಅಗ್ರ ನಾಯಕರಿಗೆ ತಿಳಿಯದಂತಾಗಿದೆ.
ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಅತ್ತ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ರಾಜೀನಾಮೆ ನೀಡಿರುವ ವಿಚಾರ ಬಹಿರಂಗವಾಗಿದೆ.
ಮದುವೆ ಮನೆಯಲ್ಲಿ ರಾಜೀನಾಮೆ ಸೂತ್ರ, ತೆನೆ ಕೆಳಗಿಳಿಸಲು ರೆಡಿಯಾದ ಜೆಡಿಎಸ್ ಶಾಸಕರು!?
ಇದರ ಬೆನ್ನಲ್ಲಿಯೇ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕೂಡ ವರಿಷ್ಠರ ಮೇಲೆ ಅಸಮಾಧಾನಗೊಂಡಿದ್ದು, ಪಕ್ಷ ತೊರೆಯುತ್ತಾರಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಇನ್ನು ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಜೆಡಿಎಸ್ ನ ಹಲವಾರು ಶಾಸಕರಿಗೆ ಅಸಮಾಧಾನ ಇರೋದು ನಿಜ. ನನಗೂ ಸಾಕಷ್ಟು ಅಸಮಾಧಾನ, ನೋವು ಇದೆ ಎಂದು ಬಹಿರಂಗ ಪಡಿಸಿದರು.
ನನಗೂ ಕಾಂಗ್ರೆಸ್- ಬಿಜೆಪಿಯಿಂದ ಈಗಲೂ ಆಹ್ವಾನ ಇದೆ. ಆದರೆ ನಾನು ಪಕ್ಷ ಬಿಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಪಕ್ಷದ ವರಿಷ್ಠರು ಮೊದಲು ಏನೂ ತೀರ್ಮಾನ ತಗೆದುಕೊಳ್ಳುತ್ತಾರೆ ನೋಡೋಣ ಎಂದು ಅಚ್ಚರಿ ಹೇಳಿಕೆ ನೀಡಿದರು.
ವರಿಷ್ಠರಿಗೆ ಈಗಾಗಲೇ ನೋವು ಅಸಮಾಧಾನ ಬಗ್ಗೆ ಶರವಣ ಮೂಲಕ ಹೇಳಿ ಕಳುಹಿಸಿದ್ದೇವೆ ಎಂದೂ ಹೇಳಿದರು. ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ ಎಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಯಾಕಂದ್ರೆ, ಈಗಾಗಲೇ ಜೆಡಿಎಸ್ ಅತೃಪ್ತರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಸಭೆಯ ನೇತೃತ್ವವನ್ನು ಹೊರಟ್ಟಿ ಅವರು ವಹಿಸಿಕೊಂಡಿದ್ದರು. ಇದೀಗ ಈ ರೀತಿ ಹೇಳಿಕೆ ನೀಡುತ್ತಿರುವುದನ್ನು ನೋಡಿದ್ರೆ ಜೆಡಿಎಸ್ ಮೇಲೆ ಮುನಿಸಿಕೊಂಡಿರುವುದು ಬಹಿರಂಗವಾಗಿದೆ.
ಎಲ್ಲಾ ನೋವುಗಳನ್ನು ಈಗಾಗಲೇ ಪಕ್ಷದ ವರಿಷ್ಠರ ಗಮನಕ್ಕೇನೋ ತಂದಿದ್ದಾರೆ. ಒಂದು ವೇಳೆ ವರಿಷ್ಠರ ನಡುವಳಿಕೆಗಳು ಹಾಗೇ ಮುಂದುವರಿದರೆ ಹೊರಟ್ಟಿ ಸೇರಿದಂತೆ ಹಲವು ಪ್ರಮುಖ ನಾಯಕರು ಜೆಡಿಎಸ್‌ಗೆ ರಾಜೀನಾಮೆ ನೀಡುವುದನ್ನು ತಳ್ಳಿಹಾಕುವಂತಿಲ್ಲ.