ದೇಶಹಿತ ವಿಚಾರದಲ್ಲಿ ಒಗ್ಗಟ್ಟು: ಎಲ್ಲ ಪಕ್ಷಗಳಿಗೆ ಮುರ್ಮು ಕರೆ

Kannadaprabha News   | Kannada Prabha
Published : Jan 29, 2026, 06:59 AM IST
president droupadi murmu

ಸಾರಾಂಶ

ವಿಕಸಿತ ಭಾರತ, ಸ್ವದೇಶಿ ಅಭಿಯಾನ ಮತ್ತು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಎಲ್ಲ ಪಕ್ಷಗಳೂ ತಮ್ಮಲ್ಲಿನ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಒತ್ತಾಯಿಸಿದ್ದಾರೆ.

 ನವದೆಹಲಿ : ವಿಕಸಿತ ಭಾರತ, ಸ್ವದೇಶಿ ಅಭಿಯಾನ ಮತ್ತು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಎಲ್ಲ ಪಕ್ಷಗಳೂ ತಮ್ಮಲ್ಲಿನ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಒತ್ತಾಯಿಸಿದ್ದಾರೆ. ಇವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮೀರಿದ ವಿಷಯಗಳು ಎಂದು ಪ್ರತಿಪಾದಿಸಿದ್ದಾರೆ.

ಬಜೆಟ್ ಅಧಿವೇಶನದ ಆರಂಭವನ್ನು ಗುರುತಿಸಿದ ಸಂಸತ್ತಿನ ಎರಡೂ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಸರ್ಕಾರ ಸಿದ್ಧಪಡಿಸಿದ ಭಾಷಣ ಓದಿದ ಅವರು, ‘ಸರ್ಕಾರವು ‘ಸುಧಾರಣಾ ಎಕ್ಸ್‌ಪ್ರೆಸ್‌’ನ ಆವೇಗವನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತದೆ’ ಎಂದು ಹೇಳಿದರು ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ತೆಗೆದುಕೊಂಡ ವಿವಿಧ ಆರ್ಥಿಕ ಮತ್ತು ಸಾಮಾಜಿಕ ಉಪಕ್ರಮಗಳನ್ನು ಪಟ್ಟಿ ಮಾಡಿದರು.

ಹಿರಿಯರ ನೋಡಿ ಕಲಿಯಿರಿ 

ಮುರ್ಮು ಅವರು ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಬಾಬಾಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಉಲ್ಲೇಖಿಸಿದರು ಮತ್ತು ಪ್ರಜಾಪ್ರಭುತ್ವದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಸಹಜ. ವಿಕಸಿತ ಭಾರತದ ಸಂಕಲ್ಪ, ಭಾರತದ ಭದ್ರತೆ, ಆತ್ಮನಿರ್ಭರತ, ಸ್ವದೇಶಿ ಅಭಿಯಾನ, ರಾಷ್ಟ್ರೀಯ ಏಕತೆಗಾಗಿ ಪ್ರಯತ್ನಗಳು, ಸ್ವಚ್ಛತೆ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಸಂಸದರು ಒಗ್ಗಟ್ಟಿನಿಂದ ನಿಲ್ಲಬೇಕು. ಇದು ಸಂವಿಧಾನದ ಸ್ಫೂರ್ತಿ’ ಎಂದು ಪ್ರತಿಪಾದಿಸಿದರು.

‘ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಎಲ್ಲಾ ಸಂಸದರು ಏಕೀಕೃತ ನಿಲುವನ್ನು ತೆಗೆದುಕೊಳ್ಳಬೇಕು. ಅದರ ಪ್ರಗತಿಗೆ ಹೊಸ ಶಕ್ತಿಯನ್ನು ತುಂಬಬೇಕು’ ಎಂದು ಮುರ್ಮು ಒತ್ತಾಯಿಸಿದರು.

ಆಪರೇಷನ್‌ ಸಿಂದೂರಕ್ಕೆ ಮೆಚ್ಚುಗೆ

ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಸ್ವಂತ ಸಂಪನ್ಮೂಲಗಳ ಬಲದಿಂದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿವೆ. ಅವರ ಶೌರ್ಯವನ್ನು ಜಗತ್ತು ನೋಡಿದೆ. ಯಾವುದೇ ಭಯೋತ್ಪಾದಕ ಕೃತ್ಯಕ್ಕೆ ನಿರ್ಣಾಯಕ ಕ್ರಮದೊಂದಿಗೆ ಪ್ರತಿಕ್ರಿಯಿಸಲಾಗುವುದು ಎಂದು ಪ್ರತಿಪಾದಿಸಿದರು.

ಅಧಿಕಾರವನ್ನು ಜವಾಬ್ದಾರಿ ಮತ್ತು ಬುದ್ಧಿವಂತಿಕೆಯಿಂದ ಬಳಸಬಹುದು ಎಂಬುದನ್ನು ಭಾರತ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.

ಎಲ್ಲ ವರ್ಗಗಳಿಗೂ ಆದ್ಯತೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ, ಒಬಿಸಿ ವಿದ್ಯಾರ್ಥಿಗಳ ದೂರು ಆಲಿಸಲು ಸಮಿತಿ ರಚಿಸುವ ಯುಜಿಸಿ ನಿರ್ಧಾರಕ್ಕೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತವಾಗಿರುವ ನಡಯವೆಯೇ, ‘ಸರ್ಕಾರವು ಎಲ್ಲರಿಗೂ - ದಲಿತರು, ಹಿಂದುಳಿದ ವರ್ಗಗಳು, ಅಂಚಿನಲ್ಲಿರುವವರು ಮತ್ತು ಬುಡಕಟ್ಟು ಸಮುದಾಯಗಳ ಜತೆ- ಪೂರ್ಣ ಸಂವೇದನೆ ಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ’ ಎಂದರು

ಬಡವರ ಸಬಲೀಕರಣ

ಸರ್ಕಾರದ 3ನೇ ಅವಧಿಯಲ್ಲಿ, ಬಡವರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಕೆಲಸ ಮಾಡಲಾಗುತ್ತಿದೆ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳು ಈಗ ಸುಮಾರು 95 ಕೋಟಿ ನಾಗರಿಕರಿಗೆ ಲಭ್ಯವಿವೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಹೇಳಿದರು.

ಭ್ರಷ್ಟಾಚಾರಕ್ಕೆ ಅಂಕುಶ

ಭ್ರಷ್ಟಾಚಾರ ಮತ್ತು ಹಗರಣಗಳನ್ನು ಹತ್ತಿಕ್ಕುವಲ್ಲಿ ಮತ್ತು ಸಾರ್ವಜನಿಕ ನಿಧಿಯ ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಕಳೆದ 10-11 ವರ್ಷಗಳಲ್ಲಿ, ಭಾರತವು ಪ್ರತಿಯೊಂದು ವಲಯದಲ್ಲೂ ತನ್ನ ಅಡಿಪಾಯವನ್ನು ಬಲಪಡಿಸಿದೆ" ಎಂದು ಅವರು ಹೇಳಿದರು.

ವ್ಯಾಪಾರ ಒಪ್ಪಂದಕ್ಕೆ ಸಂತಸ

ಯುರೋಪ್‌ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು, ಇದು ಉತ್ಪಾದನೆ ಮತ್ತು ಸೇವಾ ವಲಯಗಳಿಗೆ ಉತ್ತೇಜನ ನೀಡುತ್ತದೆ ಮತ್ತು ದೇಶದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ಬಿಕ್ಕಟ್ಟಿನ ನಡುವೆಯೂ ಭಾರತ ಸದೃಢ

ಕಳೆದ 11 ವರ್ಷಗಳಲ್ಲಿ, ದೇಶದ ಆರ್ಥಿಕ ಅಡಿಪಾಯ ಗಮನಾರ್ಹವಾಗಿ ಬಲಗೊಂಡಿದೆ ಮತ್ತು ವಿವಿಧ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಎಂದು ಅವರು ಹೇಳಿದರು.

ಬಾಹ್ಯಾಕಾಶ ವಿಕ್ರಮಕ್ಕೆ ಸಂತಸ

ಕಳೆದ ವರ್ಷ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೈಗೊಂಡ ಯಾತ್ರೆ ಒಂದು ಐತಿಹಾಸಿಕ ಪ್ರಯಾಣದ ಆರಂಭವಾಗಿದೆ ಮತ್ತು ಬಾಹ್ಯಾಕಾಶ ಪ್ರವಾಸೋದ್ಯಮವು ಭಾರತದ ಕೈಗೆಟಕುವಂಥದ್ದಲ್ಲ ಎಂಬ ಊಹೆಗಳನ್ನು ಸುಳ್ಳು ಮಾಡಿದೆ. ಮುಂಬರುವ ವರ್ಷಗಳಲ್ಲಿ ದೇಶವು ಬಾಹ್ಯಾಕಾಶದಲ್ಲಿ ಭಾರತೀಯ ನಿಲ್ದಾಣವನ್ನು ಸ್ಥಾಪಿಸುವತ್ತ ಗಮನ ಹರಿಸಲಿದೆ. ಗಗನಯಾನ ಮಿಷನ್‌ನಲ್ಲಿ ದೇಶವು ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ಮುರ್ಮು ಹೇಳಿದರು.

- ರಾಷ್ಟ್ರೀಯ ವಿಷಯಗಳಲ್ಲಿ ಗಾಂಧಿ, ನೆಹರು, ವಾಜಪೇಯಿ ಅವರನ್ನು ನೋಡಿ ಕಲಿಯಬೇಕು

- ರಾಷ್ಟ್ರಹಿತ, ಭದ್ರತೆ, ವಿಕಸಿತ ಭಾರತ ವಿಷಯಗಳು ರಾಜಕೀಯ ಮೀರಿ ನಿಲ್ಲುವ ವಿಷಯಗಳು

- ಜಾಗತಿಕ ಬಿಕ್ಕಟ್ಟು ಇದ್ದರೂ ಇಂದು ಭಾರತ ಅಚಲ । 2047ಕ್ಕೆ ದೇಶ ವಿಕಸಿತ ಆಗಬೇಕು

- ಬಜೆಟ್‌ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಾರಾಷ್ಟ್ರ ಪಾಲಿನ ‘ಶಾಶ್ವತ ಡಿಸಿಎಂ’ ಅಜಿತ್‌ ದಾದಾ : 6 ಬಾರಿ ಡಿಸಿಎಂ ಹುದ್ದೆ
ಪವಾರ್‌ ವಿಮಾನ ದುರಂತ : ಸುಪ್ರೀಂ ನಿಗಾದಲ್ಲಿ ತನಿಖೆಗೆ ಮಮತಾ, ಖರ್ಗೆ ಆಗ್ರಹ