
ಮುಂಬೈ: ಚಿಕ್ಕಪ್ಪ (ತಂದೆಯ ಸಹೋದರ) ಆದ ಮಹಾರಾಷ್ಟ್ರ ರಾಜಕಾರಣದ ಭೀಷ್ಮ, ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರಿಗೇ ಸೆಡ್ಡು ಹೊಡೆದು ಪ್ರತ್ಯೇಕ ಗುರುತು ಮೂಡಿಸಿದ್ದ, ಮಹಾರಾಷ್ಟ್ರದ ಪಾಲಿನ ‘ಶಾಶ್ವತ ಉಪಮುಖ್ಯಮಂತ್ರಿ’ಯೆಂದೇ ಕರೆಯಲ್ಪಡುತ್ತಿದ್ದ ಅಜಿತ್ ಅನಂತರಾವ್ ಪವಾರ್ ಅವರು ನೆಲಮೂಲದಿಂದ ಬೆಳೆದು ಬಂದ ನಾಯಕ.
ಸಹಕಾರಿ ಚಳವಳಿ ಹಿನ್ನೆಲೆಯ ಅಜಿತ್ ಪವಾರ್ ಅವರದು ಗ್ರಾಮೀಣರು, ಪಕ್ಷದ ಕಾರ್ಯಕರ್ತರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ ಅಪರೂಪದ ವ್ಯಕ್ತಿತ್ವ. ಅನಿಸಿದ್ದನ್ನು ನೇರವಾಗಿ ಹೇಳುವ ಕಾರಣಕ್ಕೆ ಅಜಿತ್ ಪವಾರ್ ಅವರಿಗೂ ವಿವಾದಗಳಿಗೂ ಬಿಡಿಸಲಾಗದ ನಂಟು. ದೊಡ್ಡಪ್ಪ ಶರದ್ ಪವಾರ್ ಅವರನ್ನೇ ರಾಜಕೀಯ ಗುರುವಾಗಿ ಪರಿಗಣಿಸಿ, ಅವರ ನೆರಳಿನಲ್ಲೇ ಬೆಳೆದರೂ ಮಹಾರಾಷ್ಟ್ರ ರಾಜಕಾರಣದಲ್ಲಿ ಅಜಿತ್ ತಮ್ಮದೇ ಆದ ಛಾಪು ಮೂಡಿಸಿದವರು.
ಸಮಯ ಪರಿಪಾಲನೆಗೆ ಹಾಗೂ ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಕೆಲವೇ ಕೆಲ ರಾಜಕಾರಣಿಗಳಲ್ಲಿ ಅಜಿತ್ ಪವಾರ್ ಕೂಡ ಒಬ್ಬರು. ಅನೇಕ ಬಾರಿ ಸಿಬ್ಬಂದಿಗಿಂತಲೂ ಮೊದಲೇ ಕಚೇರಿಗೆ ಆಗಮಿಸುತ್ತಿದ್ದ, ಯಾವುದೇ ಖಾತೆ ನೀಡಿದರೂ ಯಶಸ್ವಿಯಾಗಿ ನಿಭಾಯಿಸಬಲ್ಲ, ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂಗಿ ಬಹುಬೇಗನೆ ಅಧಿಕಾರದ ಏಣಿ ಏರಿದ ನಾಯಕ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅವಧಿಗೆ (ಆರು ಬಾರಿ) ಡಿಸಿಎಂ ಹುದ್ದೆ ಅಲಂಕರಿಸಿದರೂ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಲು ಸಾಧ್ಯವಾಗದ ನತದೃಷ್ಟ ರಾಜಕಾರಣಿ.
ಜುಲೈ 22, 1959ರಲ್ಲಿ ಅಹಮದ್‌ನಗರದ ದೇವೊಲಾಲಿ ಪ್ರವಾರಾದಲ್ಲಿ ಜನಿಸಿದ ಅಜಿತ್ ಪವಾರ್ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಶರದ್ ಪವಾರ್ ನೆರಳಿನಲ್ಲೇ ಬೆಳೆದವರು. ಕಾಂಗ್ರೆಸ್‌ನಿಂದ ಹೊರಬಂದು ಶರದ್ ಪವಾರ್ 1999ರಲ್ಲಿ ಎನ್‌ಸಿಪಿ ಪಕ್ಷ ಕಟ್ಟಿದಾಗ ಅವರನ್ನು ಹಿಂಬಾಲಿಸಿದರು. 2019ರ ನವೆಂಬರ್‌ನಲ್ಲಿ ಅಲ್ಪಕಾಲ ಎನ್‌ಸಿಪಿಯಿಂದ ಹೊರಬಂದು ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ನಂತರ ಎನ್‌ಸಿಪಿಗೆ ವಾಪಸಾದರು. 2023ರಲ್ಲಿ ಶರದ್ ಪವಾರ್‌ರಿಂದ ಮುನಿಸಿಕೊಂಡು ಎನ್‌ಸಿಪಿಯಲ್ಲಿ ಬಂಡಾಯವೆದ್ದು, ಬಿಜೆಪಿ-ಶಿವಸೇನೆ ನೇತೃತ್ವದ ಮಹಾಯುತಿ ಸರ್ಕಾರ ಬೆಂಬಲಿಸಿ ಮತ್ತೆ ಡಿಸಿಎಂ ಹುದ್ದೆಗೇರಿದ್ದರು. ಮೂಲಗಳ ಪ್ರಕಾರ ಅಜಿತ್ ಪವಾರ್-ಶರದ್ ಪವಾರ್ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಿದ್ದು, ಇಬ್ಬರೂ ನಾಯಕರು ಮತ್ತೆ ರಾಜಕೀಯವಾಗಿ ಒಂದಾಗುವ ಲಕ್ಷಣಗಳು ಗೋಚರಿಸಿದ್ದವು. ಅಷ್ಟರಲ್ಲೇ ಇದೀಗ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ಅಜಿತ್ ಪವಾರ್ 1991ರಲ್ಲಿ ಬಾರಾಮತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಮುಖ್ಯವಾಹಿನಿ ರಾಜಕೀಯಕ್ಕೆ ಪ್ರವೇಶಿಸಿದರು. ಆದರೆ, ಮಾವ ಶರದ್ ಪವಾರ್‌ಗಾಗಿ ಕ್ಷೇತ್ರ ಬಿಟ್ಟುಕೊಟ್ಟು, ಅದೇ ವರ್ಷ ಬಾರಾಮತಿ ಅಸೆಂಬ್ಲಿ ಕ್ಷೇತ್ರಕ್ಕೆ ನಡೆದ ಬೈಎಲೆಕ್ಷನ್‌ನಲ್ಲಿ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿದರು. ತರುವಾಯ ಕ್ಷೇತ್ರದ ಜನ ಯಾವತ್ತೂ ಅಜಿತ್ ರನ್ನು ಕೈಬಿಟ್ಟಿದ್ದೇ ಇಲ್ಲ. ಅಲ್ಲಿಂದ 3 ದಶಕಗಳ ಕಾಲ ಕ್ಷೇತ್ರದಲ್ಲಿ ಅಜಿತ್ ಅವರದ್ದೇ ಪಾರುಪತ್ಯ. ಅವರು ಯಾವುದೇ ಪಕ್ಷ ಸೇರಲಿ, ಶರದ್ ಪವಾರ್‌ಗೇ ವಿರುದ್ಧವಾಗಿ ನಿಲ್ಲಲಿ, ಕ್ಷೇತ್ರದ ಜನ ಅವರನ್ನು ಬಹುಮತದಿಂದ ಗೆಲ್ಲಿಸುತ್ತಾ ಬಂದಿದ್ದಾರೆ. 8 ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.