ಪಕ್ಷದ ಪ್ರಮುಖ ಹುದ್ದೆಗಳನ್ನು ಅವರವರ ಕುಟುಂಬದವರಿಗೆ ಮಾತ್ರ ನೀಡುವ ಪರಿಪಾಠವನ್ನು ಬೇರೆ ಪಕ್ಷದವರು ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಬಿಜೆಪಿ ಮಾತ್ರ ಆ ರೀತಿಯ ತಾರತಮ್ಯ ಮಾಡಿಲ್ಲ. ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರನ್ನು ಗುರುತಿಸುತ್ತದೆ: ಸಚಿವೆ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು(ಸೆ.25): ನಮ್ಮ ದೇಶ 100ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಪ್ರಪಂಚದ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಟಾಫ್ ತ್ರೀ ಸ್ಥಾನದಲ್ಲಿ ಇರಬೇಕೆಂಬುದು ಬಿಜೆಪಿಯ ಆಶಯವಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ. ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಬಿಜೆಪಿಯ ಓಬಿಸಿ ಮೋರ್ಚಾದ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಭಾರತ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪಥದತ್ತ ಸಾಗಿದೆ. ಇದರಿಂದಾಗಿ ಪ್ರಪಂಚದ ಬಲಾಢ್ಯ ರಾಷ್ಟ್ರಗಳು ನಮ್ಮ ದೇಶದತ್ತ ನೋಡುವಷ್ಟು ಕಾಲ ಬದಲಾಗಿದೆ ಎಂದರು.
ಪಕ್ಷದ ಪ್ರಮುಖ ಹುದ್ದೆಗಳನ್ನು ಅವರವರ ಕುಟುಂಬದವರಿಗೆ ಮಾತ್ರ ನೀಡುವ ಪರಿಪಾಠವನ್ನು ಬೇರೆ ಪಕ್ಷದವರು ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಬಿಜೆಪಿ ಮಾತ್ರ ಆ ರೀತಿಯ ತಾರತಮ್ಯ ಮಾಡಿಲ್ಲ. ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರನ್ನು ಗುರುತಿಸುತ್ತದೆ. ಅವರು ಎಲ್ಲೇ ಇದ್ದರೂ ಅವರನ್ನು ಹುಡುಕಿ ಪಕ್ಷದ ಉನ್ನತ ಸ್ಥಾನವನ್ನು ನೀಡುತ್ತದೆ. ಇಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ ಎಂದು ತಿಳಿಸಿದರು. ಜಾತಿಯ ಬಲವಿದ್ದರೆ ಮಾತ್ರ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎಂಬ ಮಾತಿದೆ. ಅದರ ಹೊರತಾಗಿಯೂ ಬಿಜೆಪಿ ಚಿಕ್ಕ ಪುಟ್ಟಜಾತಿಯವರನ್ನು ಗುರುತಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಗಾಣಿಗ ಸಮುದಾಯದವರು ಎಂದ ಅವರು, ಕೇಂದ್ರದ ಸಚಿವ ಸಂಪುಟದಲ್ಲಿ 27 ಮಂದಿ ಸಚಿವರು ಓಬಿಸಿ ಸಮುದಾಯಕ್ಕೆ ಸೇರಿದವರು ಇದ್ದಾರೆ ಎಂದರು.
ಭಾರತ್ ಜೋಡೋ ಪಾದಯಾತ್ರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ; ವಿ.ಎಸ್.ಉಗ್ರಪ್ಪ
ತುಳಿತಕ್ಕೆ ಒಳಗಾಗುವ ಸಮಾಜವನ್ನು ಮೇಲೆತ್ತುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಚಿಕ್ಕಪುಟ್ಟಸಮಾಜದವರಿಗೂ ಅವಕಾಶ ನೀಡಿದೆ ಎಂದು ತಿಳಿಸಿದರು.
ಭಾರತಕ್ಕೆ ವಿದೇಶದಲ್ಲಿ ಗೌರವ ಸಿಗಬೇಕು, ದೇಶದ ಗಡಿ ರಕ್ಷಣೆ ಆಗಬೇಕು, ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಬೇಕು. ಅದಕ್ಕಾಗಿ ಸಮರ್ಥ ಪ್ರಧಾನಮಂತ್ರಿ ಬರಬೇಕು ಎಂಬುದು ಬಿಜೆಪಿಯ ಹಲವು ವರ್ಷಗಳ ಆಶಾಭಾವನೆಯಾಗಿತ್ತು. ಈ ಆಸೆ ಈಡೇರಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಲವು ಕ್ಷೇತ್ರಗಳಲ್ಲಿ ವಿದೇಶಿಗರು ನಮ್ಮ ದೇಶವನ್ನು ನೋಡುವಷ್ಟರ ಮಟ್ಟಿಗೆ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿದ್ದಾರೆ ಎಂದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಸಮರ್ಥವಾಗಿ ಕೆಲಸ ಮಾಡಲು ಕಾರಣ, ಪಕ್ಷದ ಕಾರ್ಯಕರ್ತರು. ಈ ಶಕ್ತಿಯನ್ನು ಕೊಟ್ಟವರು ನೀವು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಕೆಲವು ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಓಬಿಸಿಯವರನ್ನು ವೋಟ್ ಬ್ಯಾಂಕ್‌ಗಾಗಿ ಬಳಕೆ ಮಾಡುತ್ತಿದ್ದರು. ಆದರೆ, ಬಿಜೆಪಿ ಈ ಸಮಾಜದವರನ್ನು ಗುರುತಿಸಿ ಅವರಿಗೆ ಉನ್ನತ ಸ್ಥಾನವನ್ನು ನೀಡುವ ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ.ರವಿ ಮಾತನಾಡಿ, ಯಾವುದೇ ಹಗರಣ, ಭ್ರಷ್ಟಾಚಾರ ಮಾಡದೆ ಜನರ ಪ್ರೀತಿ ವಿಶ್ವಾಸ ಮತ್ತು ಓಟುಗಳನ್ನು ಲೂಟಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.
ವಿರೋಧ ಪಕ್ಷದವರು ನನ್ನ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ. ಪ್ರೀತಿಯಿಂದ ಬಂದರೆ ಕಾಫಿ ನೀಡಲಾಗುವುದು. ದ್ವೇಷದಿಂದ ಬಂದರೆ ತಕ್ಕ ಪಾಠ ಕಲಿಸಲಾಗುವುದು. ಅಧಿಕಾರ ಬಂದಾಗ ಲೆಟರ್‌ಹೆಡ್ ಮಾರಿಕೊಂಡು ಅಧಿಕಾರಿಗಳಿಗೆ ದರ್ಪದಿಂದ ನಡೆದುಕೊಳ್ಳುತ್ತಿದ್ದವರಿಗೆ ಕ್ಷೇತ್ರದ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದರು.
Karnataka Politics: '2023ಕ್ಕೆ ಕುಮಾರಣ್ಣನೇ ಮುಖ್ಯಮಂತ್ರಿ ಆಗ್ತಾರೆ'
ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಶೋಕ್‌ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರಡಪ್ಪ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸದಸ್ಯ ಮಧುಕುಮಾರ್ ರಾಜ್ ಅರಸ್, ಜಿಪಂ ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ದೇವರಾಜ್ ಶೆಟ್ಟಿ, ಟಿ.ರಾಜಶೇಖರ್, ಕನಕರಾಜ್ ಉಪಸ್ಥಿತರಿದ್ದರು..
ಕಾಂಗ್ರೆಸ್ ಮುಖಂಡರು ನನ್ನನ್ನು ಕೋಟಿ ರವಿ, ಲೂಟಿ ರವಿ ಎಂದು ಆರೋಪಿಸುತ್ತಿದ್ದಾರೆ. ನಾನು ಕಾಂಗ್ರೆಸ್ ರೀತಿಯಲ್ಲಿ ಭ್ರಷ್ಟಾಚಾರ, ಹಗರಣ ಮಾಡಿ ಲೂಟಿ ರವಿ ಆಗಿಲ್ಲ, ಕ್ಷೇತ್ರದ ಜನರ ಸಣ್ಣ ಸಣ್ಣ ಸಮುದಾಯದವರ ಪ್ರೀತಿ ವಿಶ್ವಾಸ ಮತ್ತು ಮತಗಳನ್ನು ಗೆಲ್ಲುವಲ್ಲಿ ಲೂಟಿ ರವಿ ಆಗಿದ್ದೇನೆ ಅಂತ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.