ಸಿಎಂ ಬದಲಾವಣೆ: ಯಡಿಯೂರಪ್ಪರನ್ನ ಹಾಡಿ ಹೊಗಳಿದ ಕೇಂದ್ರ ಸಚಿವ ಬ್ಯಾಟಿಂಗ್‌

By Kannadaprabha NewsFirst Published Dec 21, 2020, 7:51 AM IST
Highlights

ಕೃಷಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ರಾಜಕೀಯವಿದೆ. ಅಗತ್ಯ ಕಂಡರೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಕಾಯ್ದೆಯನ್ನು ವಾಪಾಸ್‌ ಪಡೆಯುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ ಸಚಿವ ಅಠಾವಳೆ

ಬೆಂಗಳೂರು(ಡಿ.21): ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಪ್ರಸ್ತಾವನೆ ಅಥವಾ ಪ್ರಯತ್ನ ದೆಹಲಿಯ ಬಿಜೆಪಿ ನಾಯಕರ ಮುಂದೆ ಇಲ್ಲ. ಯಡಿಯೂರಪ್ಪ ಅವರೇ ಮುಂದೆಯೂ ಅಧಿಕಾರದಲ್ಲಿ ಇರುತ್ತಾರೆ. ಯಾರಾದರೂ ಇಂತಹ ಪ್ರಶ್ನೆ ಕೇಳಿದರೆ ಬಿಎಸ್‌ವೈ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿಯ ನಾಯಕರಿಗೆ ಖುದ್ದು ನಾನೇ ಹೇಳುತ್ತೇನೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಆರ್‌ಪಿಐ ಪಕ್ಷದ ಅಧ್ಯಕ್ಷ ರಾಮದಾಸ್‌ ಅಠಾವಳೆ ಹೇಳಿದ್ದಾರೆ.

ಕುಮಾರ ಕೃಪ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಠಾವಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಲಿತರಿಗೆ, ಆದಿವಾಸಿಗಳಿಗೆ ಒಳ್ಳೆಯ ಯೋಜನೆಗಳನ್ನು ನೀಡಿದ್ದಾರೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮವನ್ನು ಘೋಷಿಸಿ, ಅದಕ್ಕೆ ಅನುದಾನವನ್ನು ಪ್ರಕಟಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆರ್‌ಪಿಐ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ. ನಾವು ಕೆಲವು ಸೀಟ್‌ ಕೇಳಿದ್ದು ಆ ಸೀಟ್‌ಗಳನ್ನು ಬಿಟ್ಟುಕೊಡದಿದ್ದರೆ ಅಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಉಳಿದ ಕಡೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಅಠಾವಳೆ ತಿಳಿಸಿದರು.

75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲ: ಬಿಎಸ್‌ವೈಗೆ ವಿನಾಯ್ತಿ ಸಿಗುತ್ತಾ?

ಮದುವೆಗೆ ಮತಾಂತರ ಏಕೆ: ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಗೋಹತ್ಯೆ ಮಸೂದೆಯನ್ನು ಅಠಾವಳೆ ಸಮರ್ಥಿಸಿಕೊಂಡರು. ಹಾಗೆಯೇ ಮುದಿ ಗೋವುಗಳ ಯೋಗಕ್ಷೇಮ ನೋಡಿಕೊಳ್ಳಲು ಸಾಕಷ್ಟುಗೋಶಾಲೆಗಳನ್ನು ತೆರೆಯಬೇಕು ಎಂದು ಅವರು ಸಲಹೆ ನೀಡಿದರು. ಲವ್‌ ಜಿಹಾದ್‌ ನಿಷೇಧಿಸುವುದನ್ನು ಸಮರ್ಥಿಸಿಕೊಂಡ ಅಠಾವಳೆ, ಹಿಂದೂ - ಮುಸ್ಲಿಮ್‌ ಹುಡುಗ, ಹುಡುಗಿ ಪ್ರೀತಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಮದುವೆ ಆಗಲು ಅಥವಾ ಮದುವೆ ಆದ ಮೇಲೆ ಮತಾಂತರ ಏಕೆ ಆಗಬೇಕು. ಅವರು ಅವರ ಧರ್ಮದಲ್ಲೇ ಮುಂದುವರಿಯಬಹುದಲ್ಲವೇ ಎಂದು ಅವರು ಪ್ರಶ್ನಿಸಿದರು. ದಲಿತರ ಮೇಲಿನ ದೌರ್ಜನ್ಯಕ್ಕೂ ರಾಜಕೀಯ ಪಕ್ಷಗಳಿಗೂ ಸಂಬಂಧವಿಲ್ಲ. ಜಾತಿ ಪದ್ಧತಿಯ ಕಾರಣದಿಂದ ದಲಿತರ ಶೋಷಣೆ ಆಗುತ್ತಿದೆ ಎಂದು ಹೇಳಿದರು.

ಕೃಷಿ ಕಾಯ್ದೆ ವಾಪಸಿಲ್ಲ: 

ಕೃಷಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ರಾಜಕೀಯವಿದೆ. ಅಗತ್ಯ ಕಂಡರೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಕಾಯ್ದೆಯನ್ನು ವಾಪಾಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಕಾಯ್ದೆಯನ್ನು ವಾಪಾಸ್‌ ಪಡೆದುಕೊಂಡರೆ ನಾಳೆ ಎಲ್ಲ ಕಾಯ್ದೆಗಳಿಗೂ ಇದೇ ಸಮಸ್ಯೆ ಆಗಬಹುದು. ಇದರಿಂದ ಸಂಸತ್ತಿನ ಘನತೆಗೆ, ಸಂವಿಧಾನಕ್ಕೆ ಚ್ಯುತಿ ಆಗುತ್ತದೆ ಎಂದು ತಿಳಿಸಿದರು.
 

click me!