ಸಿದ್ದರಾಮಯ್ಯ ಬ್ಯಾಲೆನ್ಸ್‌ ಕಳೆದುಕೊಂಡು ಏನೇನೋ ಮಾತನಾಡ್ತಿದ್ದಾರೆ: ಕೇಂದ್ರ ಸಚಿವ ಜೋಶಿ

By Kannadaprabha News  |  First Published Jan 8, 2023, 7:03 PM IST

ಕ್ಷೇತ್ರವಿಲ್ಲದೇ ಹತಾಶರಾಗಿರುವ ಸಿದ್ದರಾಮಯ್ಯ, ಸ್ಟ್ರಾಂಗ್‌ ಲೀಡರ್‌ ಎಂದು ತೋರಿಸಲು ಸಿದ್ದರಾಮಯ್ಯ ಬಾಲಿಶತನದ ಹೇಳಿಕೆ: ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ 


ಬೆಳಗಾವಿ(ಜ.08): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬ್ಯಾಲೆನ್ಸ್‌ ಕಳೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಒಂದು ಕ್ಷೇತ್ರ ಸಹ ಇಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಹತಾಶರಾಗಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿರುವ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರಕ್ಕೆ ಅರ್ಜಿ ಕೊಡಬೇಕು, ಸ್ಪರ್ಧೆ ಮಾಡಬೇಕೆಂಬ ಗೊಂದಲದಲ್ಲಿ ಇದ್ದಾರೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಅವರು ಚಾಮುಂಡಿಯಲ್ಲಿ ಸೋತರು. ಬಾದಾಮಿಯಲ್ಲಿ ಕೇವಲ ಒಂದೂವರೆ ಸಾವಿರ ಮತಗಳಿಂದ ಗೆದ್ದಿದ್ದರು. ಇದರ ಅರ್ಥ ಅವರು ಎಲ್ಲಿ ಹೋಗ್ತಾರೋ ಅಲ್ಲಿ ಸೋಲ್ತಾರೆ ಎಂದರು. ಸಿದ್ದರಾಮಯ್ಯಗೆ ಭಯ ಕಾಡುತ್ತಿದೆ. ಇಂದೇ ತೀರ್ಮಾನ ಮಾಡಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಶಿವಕುಮಾರ ಅವರಿಗೂ ಇದೇ ಬೇಕಾಗಿದ್ದು. ಎಲ್ಲೂ ಗೆಲ್ಲಲ್ಲ. ಯಾವುದನ್ನು ಹೇಳ್ತಾರೆ ಹೇಳಲಿ. ಇವರನ್ನು ಮೂಲೆ ಗುಂಪು ಮಾಡಬೇಕು ಎಂದು ಶಿವಕುಮಾರ ತೀರ್ಮಾನ ಮಾಡಿದ್ದಾರೆ. ಅದಕ್ಕೆ ಅರ್ಜಿ ಕೊಡಿ ಅಂತಾ ಹೇಳಿದ್ದಾರೆ. ಇವರು ಅರ್ಜಿ ಎಲ್ಲಿಂದ ಕೊಡಬೇಕು. ಅದಕ್ಕೆ ಹತಾಶರಾಗಿರುವ ಸಂದರ್ಭದಲ್ಲಿ ತಾನೇ ಅತ್ಯಂತ ಸ್ಟ್ರಾಂಗ್‌ ಲೀಡರ್‌ ಎಂದು ತೋರಿಸಿಕೊಳ್ಳಲು ಬಿಜೆಪಿ ವಿರುದ್ಧ ಹತಾಶ, ಬಾಲಿಶ, ಅಪ್ರಬುದ್ಧ, ಅತ್ಯಂತ ನಿಷ್ಪ್ರಯೋಜಕ ಹೇಳಿಕೆಗಳನ್ನು ಸಿದ್ದರಾಮಯ್ಯ ಕೊಡುತ್ತಾರೆ. ಸಿದ್ದರಾಮಯ್ಯ ಬಗ್ಗೆ ನನಗೆ ಕನಿಕರವಿದೆ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಸಿಎಂ ಆಗಿದ್ದವರು ಸ್ಪರ್ಧಿಸಿದರೆ ಗೆಲ್ತಾರೆ ಎನ್ನುವುದು ಭ್ರಮೆ: ಸಚಿವ ಮುನಿರತ್ನ

ಘನತೆಗೆ ತಕ್ಕಂತೆ ಮಾತಾಡಲಿ:

ಸಂವಿಧಾನದ ಪ್ರಕಾರ ಚುನಾವಣೆಗೆ ನಿಲ್ಲಲು 25 ವರ್ಷ ವಯಸ್ಸಾಗಬೇಕು. ಹುಚ್ಚರಿರಬಾರದು. ಚುನಾವಣೆ ನಿಲ್ಲಲು ಸಿದ್ದರಾಮಯ್ಯ ಅವರಿಗೆ ಅರ್ಹತೆ ಇದೆ. ಆದರೆ ಇಷ್ಟುವರ್ಷಗಳ ಕಾಲ ರಾಜಕಾರಣ ಮಾಡಿ ಸೋತವರು ಬ್ಯಾಲೆನ್ಸ್‌ ಮೆಂಟೈನ್‌ ಮಾಡಬೇಕು. ಅವರ ಘನತೆ ಗೌರವಕ್ಕೆ ತಕ್ಕ ಹಾಗೆ ಮಾತಾಡಲಿ. ಬಿಜೆಪಿ ನಾಯಕರು ನೀಡಿದ ಸಲಹೆ ಸೂಚನೆಗಳನ್ನು ಸಿಎಂ ಪಾಲಿಸುತ್ತಿಲ್ಲ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ… ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಯಾರಿಗೆ ಏನು ಸೂಚನೆ ಕೊಟ್ಟಿದ್ದಾರೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷರ ನಡುವೆ ಮಾತುಕತೆ ನಡೆದಿರುತ್ತದೆ. ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.

ತೊಂದರೆಯಾಗದಂತೆ ಮೀಸಲಾತಿ

ಪಂಚಮಸಾಲಿಗೆ ಮೀಸಲಾತಿ ಕೊಡದಿದ್ದರೆ ಹೋರಾಟ ಮಾಡುತ್ತೇವೆ ಎಂಬ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಬೊಮ್ಮಾಯಿ ಅವರು ಮಾತಾಡಿದ್ದಾರೆ. ಸೂಕ್ತವಾದ ವಿಚಾರ ಮಾಡಿ ಎಲ್ಲಿಯೂ ಯಾರಿಗೂ ತೊಂದರೆ ಆಗದಂತೆ ಕಾನೂನು, ಸಂವಿಧಾನದ ನಿಬಂಧನೆಯಲ್ಲಿ ಸರಿಯಾಗಿ ಮೀಸಲಾತಿ ನೀಡುತ್ತೇನೆ ಎಂದು ಸಿಎಂ ನನಗೂ ಕರೆ ಮಾಡಿ ತಿಳಿಸಿದ್ದಾರೆ ಎಂದರು. ಮುಖ್ಯಮಂತ್ರಿಗಳ ಮಾತನ್ನು ಒಪ್ಪಿಕೊಳ್ಳಿ. ಅವರು ನಾಲ್ಕಾರು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನೊಂದೆರಡು ಹೆಜ್ಜೆ ಇದೆ. ಅದನ್ನು ಮಾಡುತ್ತಾರೆ ಎನ್ನುವುದನ್ನು ಸ್ಪಷ್ಟವಾಗಿ ಭರವಸೆ ಕೊಟ್ಟಿದ್ದಾರೆ ದಯವಿಟ್ಟು ನಂಬಬೇಕು ಎಂದು ನಾನು ವಿನಂತಿ ಮಾಡುತ್ತೇನೆ ಎಂದು ಹೇಳಿದರು.

click me!