ಕಮಿಷನ್‌ ಆರೋಪ ಮಾಡಿದ ಗುತ್ತಿಗೆದಾರರಿಗೆ ಸರ್ಕಾರದಿಂದ ಬೆದರಿಕೆ: ಪ್ರಲ್ಹಾದ್‌ ಜೋಶಿ

By Kannadaprabha News  |  First Published Aug 19, 2023, 6:12 PM IST

ಭಾರತೀಯ ಜನತಾಪಕ್ಷ ಬಿಟ್ಟು ಯಾವೊಬ್ಬ ಶಾಸಕರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಇದೆಲ್ಲವೂ ಊಹಾಪೋಹ. ಪಕ್ಷದ ಸಂಘಟನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.


ಹುಬ್ಬಳ್ಳಿ (ಆ.19): ಭಾರತೀಯ ಜನತಾಪಕ್ಷ ಬಿಟ್ಟು ಯಾವೊಬ್ಬ ಶಾಸಕರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಇದೆಲ್ಲವೂ ಊಹಾಪೋಹ. ಪಕ್ಷದ ಸಂಘಟನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ ಎಂದಿದ್ದಾರೆ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ನಾಳೆ ಏನಾಗುತ್ತೆ ಅಂತ ಹೇಳಲು ನಾನು ಭವಿಷ್ಯಗಾರನಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. 

ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಬಂಡೆಗಲ್ಲಿನಂತೆ ಗಟ್ಟಿಯಾಗಿದೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತನಾಡಿದ್ದು, ಅವರು ಪಕ್ಷ ತೊರೆಯಲ್ಲ ಅಂದಿದ್ದಾರೆ ಎಂದರು. ಲೋಕಸಭೆಗೆ ಧಾರವಾಡದಿಂದಲೇ ನಾನು ಸ್ಪರ್ಧಿಸುವೆ ಎಂದು ಸ್ಪಷ್ಟಪಡಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಮೋದಿಯವರ ನಾಯಕತ್ವ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಭ್ರಷ್ಟಾಚಾರ, ಗುತ್ತಿಗೆದಾರರ ಪರ್ಸೇಂಟೇಜ್‌ ಆರೋಪ, ಕಾವೇರಿ ವಿಷಯ ಡೈವರ್ಚ್‌ ಮಾಡಲು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಸ್ಟಾಲಿನ್-ಡಿಕೆಶಿ ಒಳಒಪ್ಪಂದದಿಂದ ತಮಿಳುನಾಡಿಗೆ ನೀರು: ಅಶ್ವಥ್ ನಾರಾಯಣ್ ಆರೋಪ

ಗುತ್ತಿಗೆದಾರರಿಗೆ ಬೆದರಿಕೆ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿ ಬಂದಿವೆ. ದೂರು ಕೊಟ್ಟಗುತ್ತಿಗೆದಾರರನ್ನು ಪೊಲೀಸ್‌ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ. ಗುತ್ತಿಗೆದಾರರನ್ನು ಹೆದರಿಸಿ, ಬೆದರಿಸಿ ಕೇಸ್‌ ಉಲ್ಟಾಹೊಡೆಯುವ ಹಾಗೆ ಮಾಡಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು. ಭ್ರಷ್ಟಾಚಾರ ಹೆಚ್ಚಾಗಿದೆ ಅಂತಾ ಕಾಂಗ್ರೆಸ್‌ ಪಾರ್ಟಿಯವರೇ ಹೇಳಿದ್ದಾರೆ. 

ಗುತ್ತಿಗೆದಾರರೂ ಸಹ ಇದೇ ರೀತಿಯ ಆರೋಪ ಮಾಡುತ್ತಿದ್ದಾರೆ. ಜನ ಸಾಮಾನ್ಯರಿಗೂ ಇದರ ಅನುಭವವಾಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ದೂರು ಕೊಟ್ಟಗುತ್ತಿಗೆದಾರರನ್ನು ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಮೂಲಕ ಬೆದರಿಸಲಾಗುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್‌ಗೆ ನೇತೃತ್ವ ಮತ್ತು ನಿಯತ್ತಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಹಿನ್ನಡೆ, ಗ್ಯಾರಂಟಿಗಳ ಗೊಂದಲವಿದೆ. ಇದೇ ಕಾರಣಕ್ಕೆ ವಿಷಯ ಬೇರೆಡೆಗೆ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಾವೇರಿ, ಗಟ್ಟಿ ನಿರ್ಧಾರ ಕೈಗೊಳ್ಳಿ: ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಗಟ್ಟಿನಿಲುವು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಕಾವೇರಿ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಮೈತ್ರಿ ಉಳಿಸಿಕೊಳ್ಳಲು ಕಾಂಗ್ರೆಸ್‌ ಹೊರಟಿದೆ. ಬರುವ ಸೀಟ್‌ಗಳು ಕಡಿಮೆ ಆಗುತ್ತದೆ ಅನ್ನುವ ಭಯ ಕಾಂಗ್ರೆಸ್‌ನಲ್ಲಿದೆ. ಅನೇಕ ಪಕ್ಷಗಳ ಜೊತೆ ಮಾಡಿಕೊಂಡಿರುವ ಮೈತ್ರಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ವಿಫಲವಾಗಿದೆ ಎಂದರು.

ಮಣಿಪುರ ಗಲಭೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಇತಿಹಾಸ ತಿಳಿದುಕೊಳ್ಳಲಿ. ಈ ಹಿಂದೆ ಮಣಿಪುರ ಸೇರಿದಂತೆ ಈಶಾನ್ಯ ಭಾರತದಲ್ಲಿ ಸಾಕಷ್ಟುಗಲಭೆಗಳಾಗಿವೆ. ಒಂದೇ ಗಲಭೆಯಲ್ಲಿ ಏಳು ನೂರು ಜನರು ಸಾವನ್ನಪ್ಪಿರುವ ಇತಿಹಾಸವಿದೆ. ಒಬ್ಬರು ಸತ್ತರೂ ನಾವು ಸಂವೇದನಾಶೀಲವಾಗಿ ನೋಡುತ್ತೇವೆ. ಅವರ ಸರ್ಕಾರವಿದ್ದಾಗ ಪಿಎಂ, ಹೋಂ ಮಿನಿಸ್ಟರ್‌ ಯಾರೂ ಹೋಗಿರಲಿಲ್ಲ. ನಮ್ಮ ಗೃಹಮಂತ್ರಿ ಮೂರು ದಿನ ಮಣಿಪುರದಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಅಲ್ಲಿ ಅಹಾರ ಕೊರತೆಯಾಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಯತ್ನಿಸಲಾಗುತ್ತಿದೆ ಎಂದರು.

ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಗರಂ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಿ: ಗಣೇಶ ಹಬ್ಬ ನಮ್ಮ ಭಾಗದಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆ. ಡಿಜೆ ಸೇರಿದಂತೆ ಯಾವುದೇ ನಿರ್ಬಂಧ ಹೇರಬಾರದು. ಹುಬ್ಬಳ್ಳಿಯ ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ, ಕಳೆದ ಬಾರಿ ಗಣೇಶ ಕೂರಿಸಿದ್ದೇವೆ. ಈ ಬಾರಿ ರಾಜ್ಯ ಸರ್ಕಾರ ಯಾವುದೇ ಗೊಂದಲ ಮಾಡಬಾರದು. ಮಹಾನಗರ ಪಾಲಿಕೆ ಸೂಕ್ತ ತೀರ್ಮಾನ ಮಾಡಬೇಕು. ಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ, ಅವರು ವಿವಾದ ಮಾಡಬಾರದು. ಅವರಿಗೂ ವರ್ಷದಲ್ಲಿ ಎರಡು ಬಾರಿ ನಮಾಜ್‌ಗೆ ಅವಕಾಶವಿದೆ. ಅನಗತ್ಯ ವಿವಾದವನ್ನು ಸರ್ಕಾರ ಮೈಮೇಲೆ ಎಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

click me!