ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವುದರ ಹಿಂದೆ ಆಡಳಿತ ಪಕ್ಷದ ಷಡ್ಯಂತ್ರವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಹುಬ್ಬಳ್ಳಿ (ಮಾ.16): ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವುದರ ಹಿಂದೆ ಆಡಳಿತ ಪಕ್ಷದ ಷಡ್ಯಂತ್ರವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಸರ್ಕಾರದ ಷಡ್ಯಂತ್ರ ಇದು ಎಂದು ಆರೋಪಿಸಿದರು. ಯಡಿಯೂರಪ್ಪ ಅವರ ವಯಸ್ಸೇನು? ಅವರ ಹಿರಿತನವೇನು? ಅವರ ಸ್ಟೇಟಸ್ ಏನು? ಅವರ ವಿರುದ್ಧ ಈ ರೀತಿ ಷಡ್ಯಂತ್ರ ಮಾಡುವುದು ಎಂದರೆ ಎಂಥಾ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಒಬ್ಬ ಪ್ರಭಾವಿ, ಹಿರಿಯ ರಾಜಕಾರಣಿ ಮೇಲೆ ಈ ರೀತಿ ಸುಳ್ಳು ದೂರು ದಾಖಲಿಸುವುದು ನಿಜಕ್ಕೂ ಅಕ್ಷಮ್ಯ ಎಂದ ಜೋಶಿ, ಕಾನೂನು ರೀತಿ ತನಿಖೆ ಆಗುತ್ತದೆ. ಅವರು ಇದರಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶಾದ್ಯಂತ ಯುವ ಮತದಾರರೆಲ್ಲ ಮೋದಿ ಅಭಿಮಾನಿಗಳಾಗಿ ಪರಿವರ್ತನೆ ಹೊಂದಿದ್ದು, ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದ ಅವರು, ಶೇ. 90ರಷ್ಟು ಹೊಸ ಮತದಾರರು ಮೋದಿ ಅವರನ್ನು ಬೆಂಬಲಿಸಲಿದ್ದಾರೆ. ಹಾಗಾಗಿ ಈ ಬಾರಿಯೂ ಬಿಜೆಪಿ ದೊಡ್ಡ ಪ್ರಮಾಣದ ಗೆಲುವು ದಾಖಲಿಸಲಿದೆ ಎಂದರು. ಯುವ ಮತದಾರರು ಮೋದಿ ಅವರ ಕಾರ್ಯಗಳನ್ನು ನೋಡಿ ಪ್ರಭಾವಿತರಾಗಿದ್ದಾರೆ. ದೇಶದಲ್ಲಾದ ಬದಲಾವಣೆ ಕಂಡು ಮೋದಿ ಪರ ನಿಂತಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವನ್ನು ತಂದುಕೊಡಲು ಸಿದ್ಧರಾಗಿದ್ದಾರೆ ಎಂದರು.
ಸಿಆರ್‌ಎಫ್ ಯೋಜನೆ: ₹ 110ಕೋಟಿ ಬಿಡುಗಡೆ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ ಹೆಚ್ಚುವರಿಯಾಗಿ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್‌ನಿಂದ ಕಲಘಟಗಿ ಪಟ್ಟಣದ 25 ಕಿಮಿ ರಸ್ತೆ ಅಭಿವೃದ್ಧಿಗೆ ₹ 50 ಕೋಟಿ ಹಾಗೂ ಧಾರವಾಡ ನಗರದ ನುಗ್ಗಿಕೇರಿಯಿಂದ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ವರೆಗಿನ 28 ಕಿಮೀ ರಸ್ತೆ ಅಭಿವೃದ್ಧಿಗೆ ₹ 60 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಂಎಸ್‌ಪಿ ನಿಗದಿ ನೆನಪಾಗಲಿಲ್ಲವೇಕೆ?: ಮಾಜಿ ಸಿಎಂ ಬೊಮ್ಮಾಯಿ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಈ ಅನುದಾನ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಈ ಯೋಜನೆಯು ರಾಜ್ಯದಲ್ಲಿ ಮೂಲಸೌಲಭ್ಯವನ್ನು ನವೀಕರಿಸುತ್ತದೆ. ಸಂಪರ್ಕವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.