ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಾಕಿ ಉಳಿಸಿಕೊಂಡಿದ್ದ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರದ ಟಿಕೆಟ್ ಅನ್ನು ಇಂದು 4ನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ.
ಬೆಂಗಳೂರು (ಏ.19): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಾಕಿ ಉಳಿಸಿಕೊಂಡಿದ್ದ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರದ ಟಿಕೆಟ್ ಅನ್ನು ಇಂದು 4ನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ಈ ಮೂಲಕ 224 ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಮೊದಲ ಪಕ್ಷವಾಗಿದೆ.
ಶಿವಮೊಗ್ಗ - ಚನ್ನಬಸಪ್ಪ
ಮಾನ್ವಿ (ಎಸ್‌ಟಿ) - ಬಿ.ವಿ. ನಾಯಕ
ಶಿವಮೊಗ್ಗದಲ್ಲಿ ಹೊಸ ಅಭ್ಯರ್ಥಿಗೆ ಬಿಜೆಪಿ ಮಣೆ: ಪಾಲಿಕೆ ಸದಸ್ಯ ಚೆನ್ನಬಸಪ್ಪಗೆ ಟಿಕೆಟ್
ಕಾಂಗ್ರೆಸ್ ಅಭ್ಯರ್ಥಿಗೆ ಮಣೆ ಹಾಕಿ ಬಿಜೆಪಿ ಟಿಕೆಟ್: ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತ್ತೊಂದೆಡೆ ಪಕ್ಷಾಂತರ ಪರ್ವ ಸಹ ಜೋರಾಗಿದೆ. ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಂಸದ ಬಿವಿ ನಾಯಕ್ ನಿನ್ನೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿ.ವಿ. ನಾಯಕ್ ಅವರು ಇಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷ ಸೇರಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಟಿಕೆಟ್ ನೀಡದೇ ಕೊನೆ ಘಳಿಗೆಯಲ್ಲಿ ಘೋಷಣೆ: ಬಿಜೆಪಿ ಮಾನ್ವಿಯಲ್ಲಿ ಬಿವಿ ನಾಯಕ್‌ಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇತ್ತು. ಇದೇ ಕಾರಣಕ್ಕಾಗಿ ಬಿಜೆಪಿ ಈ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆ ಮಾಡಿರಲಿಲ್ಲ ಎನ್ನಲಾಗುತ್ತಿತ್ತು. ಆದರೆ, ಕೊನೆಗೂ ಇಂದು ರಾತ್ರಿ ಟಿಕೆಟ್ ಘೋಷಣೆ ಮಾಡಲಾಗಿದ್ದು, ಅಂತಿಮ ದಿನವಾದ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈಗ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಗೆಲುವಿನ ನಗೆ ಬೀರುವರೇ ಎನ್ನುವುದನ್ನು ಕಾದು ನೋಡಬೇಕಿದೆ.
ಹೊಸ ಮುಖ ಚನ್ನಬಸಪ್ಪಗೆ ಬಿಜೆಪಿ ಮಣೆ: ರಾಜ್ಯದಲ್ಲಿ ಬಿಜೆಪಿ ಕ್ಷೇತ್ರದ ಟಿಕೆಟ್ ಬಾಕಿ ಉಳಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸೊಸೆಗೆ ಟಿಕೆಟ್ ಕೊಡುವುದಾಗಿ ಹೇಳಿತ್ತು. ಆದರೆ, ನನ್ನ ಮಗನಿಗೇ ಟಿಕೆಟ್ ನೀಡಬೇಕು ಎಂದು ಕೆ.ಎಸ್. ಈಶ್ವರಪ್ಪ ಪಟ್ಟು ಹಿಡಿದಿದ್ದರು. ಜೊತೆಗೆ, ಈಗಾಗಲೇ ರಾಜ್ಯದಲ್ಲಿ ಸುಬ್ರಹ್ಮಣ್ಯ ಅವರ ಪುತ್ರ ಕಟ್ಟಾ ಜಗದೀಶ್, ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ, ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಸಿಂಗ್ ಸೇರಿ ಹಲವು ನಾಯಕರ ಪುತ್ರನಿಗೆ ಟಿಕೆಟ್ ಕೊಟ್ಟಿದ್ದೀರಿ. ನನ್ನ ಪುತ್ರನಿಗೂ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದರು. ಆದರೆ, ಈಶ್ವರಪ್ಪ ಕುಟುಂಬದ ಯಾರೊಬ್ಬರಿಗೂ ಟಿಕೆಟ್ ಕೊಡದೇ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪಗೆ ಟಿಕೆಟ್ ನೀಡಿದೆ.
ಬಿಎಸ್‌ವೈ ಮನೆಯಲ್ಲಿ ಲಿಂಗಾಯತ ನಾಯಕರ ಸಭೆ: ಲಿಂಗಾಯತ ಸಿಎಂ ಎಂದೇ ಪ್ರಚಾರ ಮಾಡಲು ತೀರ್ಮಾನ
ಚನ್ನಬಸಪ್ಪ ಕೂಡ ಈಶ್ವರಪ್ಪನ ಆಪ್ತ: ಇನ್ನು ಈಗ ಟಿಕೆಟ್ ಘೋಷಣೆ ಮಾಡಿರುವ ಅಭ್ಯರ್ಥಿ ಕೂಡ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಈಶ್ವರಪ್ಪ ಅತ್ಯಾಪ್ತ ಎಸ್. ಎನ್. ಚನ್ನಬಸಪ್ಪ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಟಿಕೆಟ್ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ಸ್ವತಃ ಚನ್ನಬಸಪ್ಪ ಮಾಹಿತಿ ನೀಡಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೆ ಪಕ್ಷ ಸಿದ್ದತೆ ನಡೆಸಿ ಪ್ರಕಟಣೆಯನ್ನೂ ಹೊರಡಿಸಿದೆ. ನಾಳೆ ಬೆಳಗ್ಗೆ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ತೆರಳಿ, ರಾಮಣ್ಣ ಶೆಟ್ಟಿ ಪಾರ್ಕ್, ಗಾಂಧಿಬಜಾರ್, ನೆಹರು ರಸ್ತೆ ಮೂಲಕ ಸಾಗಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಬಿಜೆಪಿಯ ಎಲ್ಲ ಕಾರ್ಯಕರ್ತರೂ ಬಂದು ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.