
ದಾವಣಗೆರೆ (ಏ.06): ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ 'ಉತ್ತರ-ದಕ್ಷಿಣ ರಾಜ್ಯಗಳು' ಎನ್ನುತ್ತ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಟಿ ಬೀಸಿದರು.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, 'ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಬಿಜೆಪಿ ಪ್ರಾಬಲ್ಯದ ಉತ್ತರ ರಾಜ್ಯಗಳಲ್ಲಿ ಕ್ಷೇತ್ರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ' ಎಂಬ ಸಿಎಂ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿ ಹಾಕಿದರು.
ಪ್ರತಿ ರಾಜ್ಯ, ಲೋಕಸಭೆ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ 40 - 50 ಲಕ್ಷ ಹೆಚ್ಚಿದೆ. ಕೇಂದ್ರ ಸರ್ಕಾರ ಶೇಕಡಾವಾರು ಜನಸಂಖ್ಯೆ ಆಧಾರಿತವಾಗಿ ಕ್ಷೇತ್ರ ಪುನರ್ವಿಂಗಡಣೆಗೆ ಕ್ರಮ ಕೈಗೊಂಡಿದೆ. ಅದರ ಪ್ರಕಾರ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ. ಅದರಂತೆ ಕರ್ನಾಟಕದಲ್ಲೂ ಹೆಚ್ಚಾಗಬಹುದು ಎಂದು ಸೂಚ್ಯವಾಗಿ ಹೇಳಿದ ಸಚಿವರು, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರದ್ದು ವೃಥಾ ಆರೋಪ ಎಂದು ದೂರಿದರು.
ಹಿಂದೆಲ್ಲಾ ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ ಜನಸಂಖ್ಯೆ ಆಧಾರಿತವಾಗೇ ನಡೆದಿದೆ. 2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಯಾರಿದ್ದರು? ತಪ್ಪಿದ್ದರೆ ಅಗೇಕೆ ಸರಿಪಡಿಸಲಿಲ್ಲ? ಎಂದು ಪ್ರಶ್ನಿಸಿದರು. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೂ ಎಲ್ಲಾ ರಿಮೋಟ್ ಕಂಟ್ರೋಲ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರದ್ದಾಗಿತ್ತು. ಶರದ್ ಪವಾರ್, ಪ್ರಣವ್ ಮುಖರ್ಜಿ, ಮನಮೋಹನ್ ಸಿಂಗ್ ಪ್ರಮುಖರಿದ್ದಂತಹ ಕ್ಯಾಬಿನೆಟ್ ಡಿಸಿಷನ್ ಪ್ರತಿಯನ್ನೇ ಹರಿದು ಹಾಕಿ ಅಹಂಕಾರ ಪ್ರದರ್ಶಿಸಿದ ರಾಹುಲ್ ಗಾಂಧಿ ನಮಗೆ ಪಾಠ ಮಾಡಲು ಬರುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದರು.
1952, 1963, 1971 ಮತ್ತು 2001ರಲ್ಲೂ ಕ್ಷೇತ್ರ ವಿಂಗಡಣೆ ಶೇ.24ರ ಆಧಾರಿತವಾಗಿಯೇ ಆಗಿತ್ತು ಎಂದ ಸಚಿವರು, ಕಾಂಗ್ರೆಸ್ ಪಕ್ಷ ಸಮಗ್ರ ಭಾರತದ ದೃಷ್ಟಿಕೋನ ತೋರದೆ, ಉತ್ತರ ಭಾರತ, ದಕ್ಷಿಣ ಭಾರತ ಎಂಬ ಪರಿಕಲ್ಪನೆಯೊಂದಿಗೆ ಜನರಲ್ಲಿ ಜಗಳ ಹಚ್ಚಲು ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಭಾರತ, ದಕ್ಷಿಣ ಭಾರತ ಎನ್ನುತ್ತ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ವೇಳೆ ಜನರ ಭಾವನೆ ಕೆರಳಿಸುತ್ತಿದ್ದು, ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದ ಸಚಿವರು, ಸಿದ್ದರಾಮಯ್ಯ ಅವರ ಹೇಳಿಕೆ ನೋಡಿದರೆ 'ಉತ್ತರ ಭಾರತ ಕಾಂಗ್ರೆಸ್ ಗೆ ವೋಟ್ ಹಾಕುವುದಿಲ್ಲ ಎಂಬುದನ್ನು ಒಪ್ಪಿಕೊಂಡಂತಿದೆ'ಯೇ ಎಂದು ಪ್ರಶ್ನಿಸಿದರು.
ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾದರೂ ಸರಿ, ಹೆಚ್ಚಾದರೂ ಸರಿ. ಬಿಜೆಪಿಗೆ ನಷ್ಟವಿಲ್ಲ. ಜನ ಬಿಜೆಪಿ ಮೇಲೆ ವಿಶ್ವಾಸ ಇರಿಸಿದ್ದು, ಮತ ಹಾಕುತ್ತಾರೆ. ಕಾಂಗ್ರೆಸ್ ದೇಶದಲ್ಲಿ ಕ್ಷೀಣಿಸುತ್ತಿರುವುದರಿಂದ ವೃಥಾ ಆರೋಪ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಇದ್ದಾಗ ರಾಹುಲ್ ವಿದೇಶಕ್ಕೆ: ದೇಶದಲ್ಲಿ ಚುನಾವಣೆಗಳಿದ್ದಾಗ ರಾಹುಲ್ ಗಾಂಧಿ ವಿದೇಶಕ್ಕೆ ಓಡಿ ಹೋಗುತ್ತಾರೆ. ಕ್ಷೇತ್ರಗಳಲ್ಲಿ ಓಡಾಡಿ ಜನರ ವಿಶ್ವಾಸ ಗಳಿಸಬೇಕು ಎಂಬುದಿಲ್ಲ. ಪರಿಣಾಮ ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದು ಪ್ರಲ್ಹಾದ ಜೋಶಿ ಚಾಟಿ ಬೀಸಿದರು.
ದೇಶದಲ್ಲಿಲ್ಲ ಗ್ಯಾಸ್ ಸಮಸ್ಯೆ: ಮಧ್ಯಪ್ರಾಚ್ಯ ಸಂಘರ್ಷದ ವೇಳೆ ವಿವಿಧ ರಾಷ್ಟ್ರಗಳಲ್ಲಿ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಇದ್ದರೂ ಭಾರತದಲ್ಲಿ ಇಂದಿಗೂ ಸಮಸ್ಯೆಯಾಗಿಲ್ಲ. ಶೇ.70ರಷ್ಟು ದಾಸ್ತಾನು ಸಂಗ್ರಹ ನಮ್ಮಲ್ಲಿದೆ. ಗೃಹಬಳಕೆ ಗ್ಯಾಸ್ ಗೆ ಏನೂ ಸಮಸ್ಯೆಯಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.
ಆಟೋ LPG ಸ್ವಲ್ಪ ಸಮಸ್ಯೆ ಆಗಿರಬಹುದು. ಆದರೆ ಕೊರತೆ ಉಂಟಾಗಿಲ್ಲ. ನಮ್ಮ ರಾಜ್ಯದಲ್ಲಿ 372 ಆಟೋ LPG ಕೇಂದ್ರಗಳಿವೆ. ಅದರಲ್ಲಿ 72 ಸರ್ಕಾರದ್ದಿವೆ. ಖಾಸಗಿ ಕೇಂದ್ರಗಳು ಹೆಚ್ಚಿದ್ದು, ಆಟೋ ಗ್ಯಾಸ್ ಇಂಪೋರ್ಟ್ ಮಾಡಿಕೊಳ್ಳುತ್ತಿವೆ ಎಂದ ಸಚಿವರು, ಕೇಂದ್ರ ಸರ್ಕಾರ ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸುತ್ತದೆ. ಆಟೋಗಳು ತಾತ್ಕಾಲಿಕವಾಗಿ ಪೆಟ್ರೋಲ್ ಗೆ ಬದಲಾಯಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿಗಳನ್ನು ಘೋಷಿಸಿ ಒಂದನ್ನೂ ಸರಿಯಾಗಿ ಕೊಡುತ್ತಿಲ್ಲ. ಯುವನಿಧಿಯಂತೂ ಇಲ್ಲವೇ ಇಲ್ಲ. ಕೇಂದ್ರ ಕೊಟ್ಟ ಅಕ್ಕಿಯನ್ನೇ ಅನ್ನಭಾಗ್ಯ ಎಂದು ಕೊಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.