ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯುತ್ತಲೆ ಇರುತ್ತಾರೆ. ಬಹುಶಃ ಮೋದಿ ಅವರನ್ನು ಬೈದರೆ ತಾವು ಫೇಮಸ್ ಆಗಬಹುದೆಂದು ಭಾವಿಸಿದಂತಿದೆ. ಇದು ಅವರ ಭ್ರಮೆಯೇ ಸರಿ ಎಂದು ಚಾಟಿ ಬೀಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ನ.13): ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದರೆ ಫೇಮಸ್ ಆಗುತ್ತೇನೆಂಬ ಭ್ರಮೆಯಲ್ಲಿದ್ದಾರೆ ಸಿಎಂ ಸಿದ್ದರಾಮಯ್ಯ. ಅದಕ್ಕೆ ಮೈಸೂರು ಜನ ಅವರನ್ನು ಎತ್ತೊಗೆದದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ರಾಜ್ಯ ಸರ್ಕಾರದ ಮೇಲೆ 700 ಕೋಟಿ ಅಬಕಾರಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟರು. ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯುತ್ತಲೆ ಇರುತ್ತಾರೆ. ಬಹುಶಃ ಮೋದಿ ಅವರನ್ನು ಬೈದರೆ ತಾವು ಫೇಮಸ್ ಆಗಬಹುದೆಂದು ಭಾವಿಸಿದಂತಿದೆ. ಇದು ಅವರ ಭ್ರಮೆಯೇ ಸರಿ ಎಂದು ಚಾಟಿ ಬೀಸಿದರು. ರಾಜ್ಯ ಅಬಕಾರಿ ಸಚಿವರು ಮತ್ತು ಸರ್ಕಾರದ ಮೇಲೆ ಈ 700 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿದವರು ಮೋದಿ ಅಲ್ಲ. ಬಿಜೆಪಿಯವರೂ ಅಲ್ಲ; ಅಬಕಾರಿ ಡೀಲರ್ಸ್ ಎಂಬುದನ್ನು ಮೊದಲು ಮನನ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಅಬಕಾರಿ ಡೀಲರ್ಸ್ ತಮ್ಮ ಸರ್ಕಾರದ ಒಂದು ಭಾಗ. ಈ ಹಂಚಿಕೆದಾರರೇ ತಮ್ಮ ಸಚಿವ ಆರ್.ಬಿ. ತಿಮ್ಮಾಪುರ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಮೋದಿ ಅವರು ಈ ಹಗರಣವನ್ನು ಉಲ್ಲೇಖಿಸಿ ಮಾತಾಡಿದ್ದಾರೆ. ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮೋದಿ ಸೋಲೇ ಕಂಡಿಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷದ ರಾಜಕಾರಣದಲ್ಲಿ ಸೋಲೇ ಕಂಡಿಲ್ಲ. ಗುಜರಾತ್ ಅಲ್ಲಿ ಸತತ ಗೆಲುವು ಕಂಡಿದ್ದಾರೆ. ರಾಜಕೀಯ ಜೀವನದಲ್ಲಿ ಸೋಲು ಕಾಣದ ಪ್ರಬುದ್ಧ ರಾಜಕಾರಣಿ. ಅಂಥವರ ಬಗ್ಗೆ ಮಾತಾಡುತ್ತೀರಾ? ಎಂದು ಹರಿಹಾಯ್ದರು. 2013ರಿಂದ 18ರ ವರೆಗೆ ಸಿಎಂ ಆಗಿದ್ದ ನಿಮ್ಮನ್ನೇ ಮೈಸೂರು ಜನ 2018ರ ಚುನಾವಣೆಯಲ್ಲಿ ಎತ್ತೊಗೆದರು. ಆದರೆ, ಮೋದಿ ಅವರನ್ನು ಜನ ಯಾವತ್ತೂ ಕೈ ಬಿಟ್ಟಿಲ್ಲ ಎಂದರು. ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಗರಣಗಳು ಒಂದೊಂದೇ ಬಯಲಿಗೆ ಬರುತ್ತಿದ್ದರಿಂದ ಸಿಎಂ ಹತಾಶರಾಗಿದ್ದಾರೆ. ಮೂಡಾ ಹಗರಣದಲ್ಲಿ ತಹಸೀಲ್ದಾರರೇ ಸಿಎಂ ಪರ ಮುದ್ರಾಂಕ ಶುಲ್ಕ ಪಾವತಿಸಿರುವುದು ಬೆಳಕಿಗೆ ಬಂದಿದ್ದರಿಂದ ದಿಕ್ಕೆಟ್ಟಿದ್ದಾರೆ ಎಂದರು.
ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿರುವ ನೀವು ಚಾಲೆಂಜ್ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರಿಗಲ್ಲ ಎಂದ ಅವರು, ತಾಕತ್ತಿದ್ದರೆ ಅಬಕಾರಿ ಡೀಲರ್ಸ್‌ಗೆ ಚಾಲೆಂಜ್ ಮಾಡಿ ಎಂದು ಸವಾಲು ಹಾಕಿದರು.