ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿ ಇದೆ ಮತ್ತು ಅದು ನನ್ನ ಸೌಭಾಗ್ಯವೂ ಹೌದು. ಅವರ ಸಾರಥ್ಯದಲ್ಲಿ ಭಾರತ ನಂಬರ್ ಒನ್ ಸ್ಥಾನದತ್ತ ದಾಪುಗಾಲು ಇಡುತ್ತಿದ್ದು, ಇಡೀ ವಿಶ್ವವೇ ಮೋದಿ ಅವರ ನಾಯಕತ್ವವನ್ನು ನಿಬ್ಬೆರಗಾಗಿ ನೋಡುತ್ತಿದೆ. ಇಂತಹ ವೇಳೆಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದ ಜೋಶಿ.
ಹುಬ್ಬಳ್ಳಿ(ಫೆ.19): ರಾಜ್ಯ ರಾಜಕಾರಣದಲ್ಲಿ ಬರುವ ವಿಚಾರ ನನಗಿಲ್ಲ. ಹೀಗಾಗಿ ಸಿಎಂ ಆಗುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು. ಇಲ್ಲಿಯ ಜಿಮ್‌ಖಾನ್ ಮೈದಾನದಲ್ಲಿ ಶಿವರಾತ್ರಿ ಅಂಗವಾಗಿ ನಿರ್ಮಿಸಲಾಗಿರುವ ಕೇದಾರನಾಥ ದೇಗುಲ ಮಾದರಿಯ ದೇಗುಲದಲ್ಲಿ ಶನಿವಾರ ಶಿವಲಿಂಗ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿ ಇದೆ ಮತ್ತು ಅದು ನನ್ನ ಸೌಭಾಗ್ಯವೂ ಹೌದು. ಅವರ ಸಾರಥ್ಯದಲ್ಲಿ ಭಾರತ ನಂಬರ್ ಒನ್ ಸ್ಥಾನದತ್ತ ದಾಪುಗಾಲು ಇಡುತ್ತಿದ್ದು, ಇಡೀ ವಿಶ್ವವೇ ಮೋದಿ ಅವರ ನಾಯಕತ್ವವನ್ನು ನಿಬ್ಬೆರಗಾಗಿ ನೋಡುತ್ತಿದೆ. ಇಂತಹ ವೇಳೆಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದರು.
ಪೇಶ್ವೆ ಮೂಲದವರನ್ನು ಸಿಎಂ ಮಾಡಲು ಬಿಜೆಪಿ ಹೊರಟಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ, ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದರು.
KARNATAKA BUDGET 2023: ಬಿಜೆಪಿ ಸರ್ಕಾರದ್ದು ಸುಳ್ಳಿನ ಬಜೆಟ್: ಸುರ್ಜೆವಾಲಾ
ಕಿವಿಮೇಲೆ ಹೂವು:
ಬಜೆಟ್ ಮಂಡನೆ ವೇಳೆ ಕಿವಿ ಮೇಲೆ ಹೂವಿಟ್ಟುಕೊಂಡು ಬಂದಿರುವ ಕಾಂಗ್ರೆಸ್ಸಿನವರಿಗೆ ರಾಜ್ಯದ ಜನರು ಈಗಾಗಲೇ ಕಿವಿಗೆ ಹೂವು ಇಟ್ಟಿದ್ದಾರೆ. ಹೀಗಾಗಿ ಮುಂದೆಯೂ ಅವರು ಹೂವು ಇಟ್ಟುಕೊಂಡೇ ಓಡಾಡಬೇಕಾಗುತ್ತದೆ ಎಂದು ಸಚಿವ ಜೋಶಿ ಲೇವಡಿ ಮಾಡಿದರು.
ನೆಹರು, ಇಂದಿರಾ ಗಾಂಧಿ ಸಾವಿನ ನಂತರ ಅವರ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತಾ ಬಂದಿರುವ ಕಾಂಗ್ರೆಸ್, ಇದುವರೆಗೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಈಗ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿದೆ ಎಂದರು.
ಸಚಿವ ಅಶ್ವತ್ಥ ನಾರಾಯಣ ತಮ್ಮ ಹೇಳಿಕೆಯ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಆ ಅರ್ಥದಲ್ಲಿ ಹೇಳಿಲ್ಲ ಅಂತ ತಿಳಿಸಿದ್ದಾರೆ. ಕಾಂಗ್ರೆಸ್ಸನ್ನು ಮುಗಿಸಬೇಕೆಂದು ಹೇಳಿದ್ದಾರೆ. ಹೀಗಾಗಿ ಅದನ್ನು ಬೆಳೆಸಿಕೊಂಡು ಹೋಗುವುದು ಸರಿಯಲ್ಲ. ಬಾಯಿತಪ್ಪಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದು ಜೋಶಿ ಹೇಳಿದರು.