ನಾನು ಕೇಂದ್ರ ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರುತ್ತಿಲ್ಲ ಮತ್ತು ಊಟಕ್ಕೆ ಕೂತರೆ ಅನ್ನ ಸೇರುತ್ತಿಲ್ಲ. ಆಗಲೂ ಅವರಿಗೆ ಕುಮಾರಸ್ವಾಮಿ ನೆನಪಿಗೆ ಬರುತ್ತಾರೆ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ಆ ಜಾಯಮಾನ ನನ್ನದಲ್ಲ: ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೋದ್ಯಮ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಜೂ.15): ಜೆಡಿಎಸ್ ಪಕ್ಷವನ್ನು ಮುಗಿಸಿದ್ದೇವೆಂಬ ದುರಹಂಕಾರದಲ್ಲಿ ಮಾತನಾಡಿದವರಿಗೆ ಉತ್ತರ ಕೊಡುವುದಿಲ್ಲ. ನನಗೆ ಬೇಕಾಗಿರುವುದು ರಾಜ್ಯದ ಅಭಿವೃದ್ಧಿಯೇ ಹೊರತು ರಾಜಕೀಯವಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೋದ್ಯಮ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇನ್ನು ಮುಂದೆ ನಾಲ್ಕು ದಿನ ದೆಹಲಿಯಲ್ಲಿ ಕೆಲಸ ಮಾಡಲಿದ್ದು, ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ. ಅದರಲ್ಲೂ ಒಂದು ದಿನ ಮಂಡ್ಯದಲ್ಲಿ ಇರುತ್ತೇನೆ ಎಂದಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಬಿಎಸ್‌ವೈ ಕುಟುಂಬ ನಾಶಕ್ಕೆ ಕಾಂಗ್ರೆಸ್ ಕುತಂತ್ರ: ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ -ಬಿಜೆಪಿ ಮೈತ್ರಿಯನ್ನು ಮುಗಿಸಲು ಕಾಂಗ್ರೆಸ್ ಹುನ್ನಾರ ನಡೆಸಿತು. ಆದರೆ, ಅದು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂಭತ್ತು ಸ್ಥಾನ ಗೆಲುವು ಸಾಧಿಸಿರುವುದು ಶ್ರಮದಿಂದಲ್ಲ, ಬದಲಿಗೆ ಮೈತ್ರಿ ಪಕ್ಷದವರು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಗೆದ್ದಾಯಿತು ಎಂದು ಶ್ರಮ ಸ್ವಲ್ಪ ಕಡಿಮೆ ಹಾಕಿದರ ಫಲವಾಗಿ ಕಾಂಗ್ರೆಸ್ ಜಯಗಳಿಸಿತು. ಇಲ್ಲದಿದ್ದರೆ ಮೈತ್ರಿ ಅಭ್ಯರ್ಥಿಗಳು ಜಯಗಳಿಸುತ್ತಿದ್ದರು ಎಂದರು.
ನಾನು ಕೇಂದ್ರ ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರುತ್ತಿಲ್ಲ ಮತ್ತು ಊಟಕ್ಕೆ ಕೂತರೆ ಅನ್ನ ಸೇರುತ್ತಿಲ್ಲ. ಆಗಲೂ ಅವರಿಗೆ ಕುಮಾರಸ್ವಾಮಿ ನೆನಪಿಗೆ ಬರುತ್ತಾರೆ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ಆ ಜಾಯಮಾನ ನನ್ನದಲ್ಲ. ಹಾಸನದಲ್ಲಿ ಜಯಗಳಿಸಲು ಪೆನ್ ಡ್ರೈವ್ ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದರು. ಪೆನ್ ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತೆಗೆದುಕೊಂಡರು? ಹೆಣ್ಣು ಮಕ್ಕಳ ಗೌರವ ಹಾಳು ಮಾಡಿದ ನೀಚರು. ಚುನಾವಣೆಯಲ್ಲಿ ಗೆಲ್ಲಲು ಹಲವು ಕುಟುಂಬಗಳನ್ನು ಹಾಳು ಮಾಡಿರುವ ನೀಚ ಸರ್ಕಾರ. ಸಿಡಿ ಶಿವ ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಕೇಂದ್ರ ಸಚಿವನಾಗಿ ಆ ಹುದ್ದೆಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಸೋಲನುಭವಿಸಿದ್ದಕ್ಕೆ ಜಿಲ್ಲೆಯ ಜನತೆಯನ್ನಾಗಲಿ, ಕಾರ್ಯಕರ್ತರನ್ನಾಗಲಿ ದೂಷಿಸುವುದಿಲ್ಲ. ಆ ಜಿಲ್ಲೆಯ ಜನತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಶಕ್ತಿ ನೀಡಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೆ ಕಾರ್ಯಕರ್ತರನ್ನು ಮರೆಯುವುದಿಲ್ಲ. ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಯಾಗಿದ್ದು, ಮುಂದಿನ ದಿನದಲ್ಲಿ ಒಳ್ಳೆಯ ಕಾಲ ಬರಲಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬ ಕುರಿತು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.
ರಾಜಕೀಯದಲ್ಲಿ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನೆರೆಯ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಹಿಂದಿನ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದಿದ್ದರು? ಕಡೆಗೆ ಅನೇಕ ಶಾಸಕರು ಅವರನ್ನು ಬಿಟ್ಟು ಹೋದರು. ಅವರನ್ನು ಜೈಲಿಗೂ ಕಳಿಸಿದರು. ಈಗ ಮತ್ತೆ ಎಷ್ಟು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರು ಎನ್ನುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿಯೂ ಇದು ನಡೆಯುತ್ತದೆ. ಒಂದು ಸಲ ಅವಕಾಶ ಕೊಡಿ ಎಂದು ಕೇಳಿದೆ. ನಾನು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದೆ. ಅದಕ್ಕೂ ಅವಹೇಳನ ಮಾಡಿದರು. ಚಕ್ರ ತಿರುಗುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಹೆಚ್‌ಡಿ ಕುಮಾರಸ್ವಾಮಿ ಮುಂದೆ ದೇಶದ ಪ್ರಧಾನಿ ಆಗಬಹುದು: ಜಿಟಿ ದೇವೇಗೌಡ
ಕೃಷಿ ಸಚಿವರಾಗಿ ಕೆಲಸ ಮಾಡಬೇಕೆಂಬ ಆಸೆ ರಾಜ್ಯದ ಜನತೆಯಲ್ಲಿತ್ತು. ಕೈಗಾರಿಕೆ ಸಚಿವ ಸ್ಥಾನ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದೊಡ್ಡ ಖಾತೆಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇನೆ. ಸಮಯ ವ್ಯರ್ಥ ಮಾಡುವುದಿಲ್ಲ. ಎಲ್ಲ ಇಲಾಖೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ. ಇಲಾಖೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡಲಾಗುವುದು. ರೈತರ ಕೃಷಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೆಗೌಡ, ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಶಾಸಕರಾದ ಎ.ಮಂಜು, ಸಮೃದ್ಧಿ ಮಂಜುನಾಥ್, ಸಿ.ಎನ್.ಬಾಲಕೃಷ್ಣ, ಕರೆಮ್ಮ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಇತರರು ಉಪಸ್ಥಿತರಿದ್ದರು.