Latest Videos

ಯಡಿಯೂರಪ್ಪ ಬಂಧಿಸಲು ಹೊರಟಿದ್ದ ಸಿಐಡಿಗೆ ಹಿನ್ನಡೆ!

By Kannadaprabha NewsFirst Published Jun 15, 2024, 4:26 AM IST
Highlights

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಐಡಿ ಪೊಲೀಸರು ಎರಡನೇ ನೋಟಿಸ್‌ ಜಾರಿ ಮಾಡಿದ ಮತ್ತು ನಗರದ 1ನೇ ತ್ವರಿತಗತಿ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ) ಜಾಮೀನುರಹಿತ ಬಂಧನ ವಾರಂಟ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಂಧನ ಭೀತಿ ಎದುರಾಗಿತ್ತು. 

ಬೆಂಗಳೂರು (ಜೂ.15): ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಿಐಡಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಪ್ರಕರಣ ಸಂಬಂಧ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸಿಐಡಿ ಪೊಲೀಸರಿಗೆ ನಿರ್ದೇಶಿಸಿ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ಆದೇಶ ಮಾಡಿದೆ. ಇದರಿಂದ ಬಂಧನ ಭೀತಿಯಿಂದ ಯಡಿಯೂರಪ್ಪ ಅವರು ಪಾರಾಗಿದ್ದಾರೆ. 

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಐಡಿ ಪೊಲೀಸರು ಎರಡನೇ ನೋಟಿಸ್‌ ಜಾರಿ ಮಾಡಿದ ಮತ್ತು ನಗರದ 1ನೇ ತ್ವರಿತಗತಿ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ) ಜಾಮೀನುರಹಿತ ಬಂಧನ ವಾರಂಟ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಂಧನ ಭೀತಿ ಎದುರಾಗಿತ್ತು. ಹೀಗಾಗಿ ನಿರೀಕ್ಷಣಾ ಜಾಮೀನು ಕೋರಿ ಅವರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನ್ಯಾಯಪೀಠ, ನೋಟಿಸ್‌ ನೀಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗದೆ ದೆಹಲಿಗೆ ಟಿಕೆಟ್‌ ಬುಕ್‌ ಮಾಡಿ ಬೆಂಗಳೂರು ಬಿಟ್ಟು ತೆರಳಿದ್ದಾರೆ. 

ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್‌ ಸೇಡು: ಬಿಜೆಪಿ ನಾಯಕರ ಆಕ್ರೋಶ

ಹೀಗಾಗಿ, ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂಬ ಸಿಐಡಿ ಪೊಲೀಸರ ಪ್ರಬಲ ವಾದವನ್ನು ತಳ್ಳಿಹಾಕಿತು. ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಯಡಿಯೂರಪ್ಪ ಅವರ ಬಂಧನವನ್ನು ಅಮಾನತ್ತಿನಲ್ಲಿ ಇರಿಸಲಾಗುತ್ತಿದೆ ಎಂದು ತಿಳಿಸಿ ಮಧ್ಯಂತರ ಆದೇಶ ಮಾಡಿತು. ಅಲ್ಲದೆ, ಯಡಿಯೂರಪ್ಪ ಅವರನ್ನು ಬಂಧಿಸಬಾರದು. ಸಿಐಡಿ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ಜೂ.17ರಂದು ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು. ಜತೆಗೆ, ಅರ್ಜಿ ಕುರಿತು ಸಿಐಡಿ ಪೊಲೀಸರು ಮತ್ತು ಪ್ರಕರಣದ ದೂರುದಾರ ಮಹಿಳೆಯ ಪುತ್ರನಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜು.28ಕ್ಕೆ ಮುಂದೂಡಿತು.

ಬಂಧಿಸಲು ಹಟಕ್ಕೆ ಬಿದ್ದಂತಿದೆ: ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಬಂಧನದ ಅವಶ್ಯಕತೆಯಿದೆ ಎಂದು ವಿಚಾರಣೆ ವೇಳೆ ಸಿಐಡಿ ಪೊಲೀಸರ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ವಾದಿಸಿದರು. ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಸಿಐಡಿ ನೀಡಿದ್ದ ಮೊದಲನೇ ನೋಟಿಸ್‌ ಅನ್ನು ಮಾನ್ಯ ಮಾಡಿ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿದ್ದರು. ಎರಡನೇ ನೋಟಿಸ್‌ಗೆ ಪ್ರತ್ಯುತ್ತರಿಸಲು ಸಮಯ ಕೇಳಿದ್ದಾರೆ. ಇದೇ 17ಕ್ಕೆ ಖುದ್ದು ಹಾಜರಾಗುವುದಾಗಿ ಅವರೇ ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಬಂಧಿಸುವ ಅಗತ್ಯವೇನಿದೆ? ಯಡಿಯೂರಪ್ಪ ಅವರು ದೇಶಬಿಟ್ಟು ಪರಾರಿಯಾಗುವ ಭಯ ನಿಮ್ಮಲ್ಲಿದೆಯೇ? ಅವರು ದೇಶ ಬಿಟ್ಟು ಪರಾರಿಯಾಗುವುದಿಲ್ಲ ಬಿಡಿ. ಯಾರನ್ನು ಸಂತುಷ್ಟಗೊಳಿಸಲು ಯಡಿಯೂರಪ್ಪ ಅವರನ್ನು ಬಂಧಿಸಲು ಸಿಐಡಿ ಬಯಸುತ್ತಿದೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿತು.

ಅಲ್ಲದೆ, ವಿಚಾರಣೆಗೆ ಸಮಾಯವಕಾಶ ಕೋರಿದ್ದರೂ, ಅದನ್ನು ಪರಿಗಣಿಸದೆ ತನಿಖಾಧಿಕಾರಿ ಅಧೀನ ನ್ಯಾಯಾಲಯದ ಮೆಟ್ಟಿಲೇರಿ ವಾರಂಟ್ ಪಡೆದಿದ್ದಾರೆ. ಹೈಕೋರ್ಟ್‌ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅನುಮತಿಸುವಂತೆ ಕೋರಲಾಗಿದೆ. ಇದೆಲ್ಲಾ ನೋಡುತ್ತಿದ್ದರೆ ವ್ಯವಸ್ಥಿತವಾಗಿ ಯಡಿಯೂರಪ್ಪ ಅವರನ್ನು ಬಂಧಿಸಲೇಬೇಕೆಂಬ ಹಟಕ್ಕೆ ಬಿದ್ದಂತಿದೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದವರು. ಅವರು ಈ ಹಿಂದೆ ಶಾಸನ ರೂಪಕರಾಗಿದ್ದರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಆರೋಗ್ಯದ ಸಮಸ್ಯೆಗಳಿರುತ್ತವೆ. ಇಂತಹ ವ್ಯಕ್ತಿಯ ಬಗ್ಗೆ ತನಿಖೆ ನಡೆಸುವಾಗ ಪೊಲೀಸರ ನಡೆಯ ಬಗ್ಗೆ ಸಂಶಯ ಬಾರದಂತೆ ಮುಂದುವರಿಯಬೇಕು. ಪ್ರತೀಕಾರದ ಮೇಲೆ ನಡೆದುಕೊಳ್ಳಲಾಗುತ್ತಿದೆ ಎಂಬ ಭಾವನೆ ಕೋರ್ಟ್‌ಗೆ ಮೂಡಬಾರದು ಎಂದು ಕಟುವಾಗಿ ನುಡಿಯಿತು.

ಆರೋಪಿಯನ್ನು ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸಬೇಕೆಂಬ ನಿಮ್ಮ ಹಟ ಪ್ರಾಮಾಣಿಕ ನಡೆಯಿಂದ ಕೂಡಿಲ್ಲ. ಅಷ್ಟಕ್ಕೂ ನೀವು ಯಾರನ್ನು ತೃಪ್ತಿಪಡಿಸಲು ಯಡಿಯೂರಪ್ಪ ಅವರನ್ನು ಬಂಧಿಸಲು ತವಕಿಸುತ್ತಿದ್ದೀರಿ? ಅರ್ಜಿದಾರರು ಈಗಾಗಲೇ ಒಮ್ಮೆ ನೋಟಿಸ್‌ಗೆ ಉತ್ತರಿಸಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿರುವಾಗ ಅದನ್ನು ಗೌರವಿಸಬೇಕು. ಅವರೇನು ತಪ್ಪಿಸಿಕೊಂಡು ಹೋಗುವ ವ್ಯಕ್ತಿಯಲ್ಲ. ಅಷ್ಟಕ್ಕೂ ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸಬೇಕಾದ ಅನಿವಾರ್ಯತೆ ಆರೋಪದಲ್ಲಿ ಅರ್ಜಿದಾರರ ಮೇಲಿದೆಯೇ? ಒಬ್ಬ ಮಾಜಿ ಮುಖ್ಯಮಂತ್ರಿಗೇ ಈ ರೀತಿಯ ಭೀತಿ ಆವರಿಸಿದರೆ ಇನ್ನೂ ಜನ ಸಾಮಾನ್ಯರ ಗತಿಯೇನು? ಎಂದು ನ್ಯಾಯಪೀಠ ನುಡಿಯಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಯಡಿಯೂರಪ್ಪ ಪರ ವಕೀಲರು, ಅರ್ಜಿದಾರರ ವಿರುದ್ಧ ದೂರು ದಾಖಲಿಸಿರುವ ದೂರುದಾರ ಮಹಿಳೆ (ಸದ್ಯ ಬದುಕಿಲ್ಲ) ತನ್ನ ಪತಿ, ಪುತ್ರ, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಒಟ್ಟು 53 ದೂರುಗಳನ್ನು ದಾಖಲಿಸಿದ್ದಾರೆ. ದೂರು ದಾಖಲಿಸುವುದೇ ಅವರ ಪ್ರವೃತ್ತಿ. ಸಮಾಜದಲ್ಲಿರುವ ದೊಡ್ಡವರು-ಅಧಿಕಾರಸ್ಥರನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಇನ್ನು ಘಟನೆ ನಡೆದು ಒಂದೂವರೆ ತಿಂಗಳ ನಂತರ ದೂರು ದಾಖಲಿಸಲಾಗಿದೆ. ಇದರಿಂದ ದೂರಿನ ಬಗ್ಗೆ ಅಪ್ರಾಮಾಣಿಕತೆ ಎದ್ದು ಕಾಣುತ್ತಿದೆ ಆಕ್ಷೇಪಿಸಿದರು. ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಹೀಗಿದ್ದರೂ ಸಿಐಡಿ ಪೊಲೀಸರು ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಮೊದಲ ಬಾರಿ ನೀಡಿದ ನೋಟಿಸ್‌ಗೆ ಒಪ್ಪಿಗೆ ವಿಚಾರಣೆಗೆ ಯಡಿಯೂರಪ್ಪ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಜೂ.10ರಂದು ಎರಡನೇ ಬಾರಿಗೆ ನೋಟಿಸ್‌ ನೀಡಿದ್ದು, ಜೂ.17ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದರೂ ಬಂಧನಕ್ಕೆ ಅಧೀನ ನ್ಯಾಯಾಲಯದಿಂದ ವಾರಂಟ್‌ ಪಡೆಯಲಾಗಿದೆ. ಸರ್ಕಾರ ರಾಜಕೀಯ ಪ್ರತೀಕಾರದ ಧೋರಣೆಯಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ ಎನ್ನುವುದು ತೋರಿಸುತ್ತದೆ ಎಂದು ಆರೋಪಿಸಿದರು. ಈ ವಾದವನ್ನು ಅಲ್ಲಗೆಳೆದ ರಾಜ್ಯ ಅಡ್ವೋಕೇಟ್‌ ಜನರಲ್‌, ಜೂ.11ರಂದು ಬೆಳಗ್ಗೆ ನೋಟಿಸ್‌ ನೀಡಿದರೆ ಯಡಿಯೂರಪ್ಪ ಅವರು ಸಂಜೆ 5 ಗಂಟೆಗೆ ದೆಹಲಿಗೆ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದಾರೆ. ರಾತ್ರಿ 9.55ಕ್ಕೆ ದೆಹಲಿಗೆ ಹೋಗಿದ್ದಾರೆ. ಸಭೆ ಇರುವುದರಿಂದ ದೆಹಲಿಗೆ ಹೋಗಿದ್ದು, ಜೂ.17ರಂದು ವಿಚಾರಣೆಗೆ ಹಾಜರಾಗುವುದಾಗಿ ಮರು ದಿನ ಮಧ್ಯಾಹ್ನ ತಿಳಿಸಿದ್ದಾರೆ. ವಾಸ್ತವವಾಗಿ ದೆಹಲಿಯಲ್ಲಿ ಅವರಿಗೆ ಸಭೆಯೇ ಇರಲಿಲ್ಲ. 

ಅವರು ಸಾಕ್ಷ್ಯ ನಾಶ ಮಾಡಬಹುದು ಎಂಬುದಷ್ಟೇ ತನಿಖಾಧಿಕಾರಿಗಳ ಆತಂಕ. ಅದರಿಂದಲೇ ವಿಚಾರಣಾ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ. ಅದು ಬಿಟ್ಟು ಸರ್ಕಾರ ಯಾವುದೇ ದುರ್ಭಾವನೆಯಿಂದ ನಡೆದುಕೊಳ್ಳುತ್ತಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯೂ ಬಂದಿದೆ. ದೂರುದಾರೆ ಚಿತ್ರೀಕರಿಸಿರುವ ವಿಡಿಯೋ ನೈಜತೆ ಪರೀಕ್ಷೆಯನ್ನೂ ಮಾಡಲಾಗಿದೆ. ಹಾಗಾಗಿ, ಆರೋಪಿಯನ್ನು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು. ಸಂತ್ರಸ್ತ ಬಾಲಕಿಯ ಸಹೋದರನ ಪರ ಹಾಜರಾಗಿದ್ದ ವಕೀಲ ಎಸ್.ಬಾಲನ್‌, ದೂರು ದಾಖಲಾಗಿ ಮೂರು ತಿಂಗಳು ಕಳೆದರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಇದೊಂದು ಗಂಭೀರ ಪ್ರಕರಣ. ಆದ್ದರಿಂದ, ಆರೋಪಿಯನ್ನು ಬಂಧಿಸಲು ನಿರ್ದೇಶಿಸಬೇಕು ಎಂದು ಕೋರಿದರು.

ಪೋಕ್ಸೋ ಕೇಸ್‌ನಲ್ಲಿ ಅಗತ್ಯ ಬಿದ್ದರೆ ಬಿಎಸ್‌ವೈ ಬಂಧನ: ಗೃಹ ಸಚಿವ ಪರಮೇಶ್ವರ್‌

ಬಿಜೆಪಿ ವಿರುದ್ಧ ಮುಯ್ಯಿ ತೀರಿಸಲು ಕೇಸ್‌: ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ಅವರು, ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಆರೋಪಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜೂ.1ರಂದು ಮತ್ತು ಸಂಸದ ರಾಹುಲ್‌ ಗಾಂಧಿ ಅವರು ಜೂ.7ರಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಅದಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬಿಜೆಪಿ ಮುಖಂಡರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಲ್ಲಿ ಕ್ರಮ ಜರುಗಿಸಲು ರಾಜ್ಯ ಸರ್ಕಾರ ಮುಂದಾಗಿರುವಂತಿದೆ. ಅದಕ್ಕಾಗಿಯೇ ಕೋರ್ಟ್‌ ಅನ್ನು ಆಶ್ರಯಿಸಿ ಯಡಿಯೂರಪ್ಪ ವಿರುದ್ಧ ವಾರಂಟ್ ಪಡೆಯಲಾಗಿದೆ ಎಂದು ಬಲವಾಗಿ ಆಕ್ಷೇಪಿಸಿದರು.

click me!