
ಬಳ್ಳಾರಿ(ಜ.29): ಕೋರ್ ಕಮಿಟಿ ಸಭೆಯಲ್ಲಿನ ಆರೋಪ ಮತ್ತು ಶಾಸಕ ಜನಾ ರ್ದನ ರೆಡ್ಡಿ ಜತೆ ಮುನಿಸಿಕೊಂಡು ಕ್ರುದ್ಧರಾಗಿರುವ ಮಾಜಿ ಸಚಿವ ಬಿ. ಶ್ರೀರಾಮುಲುಗೆ ಬೆಳವಣಿಗೆಯೊಂದರಲ್ಲಿ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಹೀಗಾಗಿ ಶ್ರೀರಾಮುಲು ಅವರು ದೆಹಲಿಗೆ ಯಾವಾಗ ತೆರಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಭೆಯಲ್ಲಿ ಸಂಡೂರು ಉಪ ಚುನಾವಣೆ ಸೋಲಿಗೆ ಕಾರಣರೆಂದು ನೇರ ಬೊಟ್ಟು ಮಾಡಿದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ವಿರುದ್ದ ತೀವ್ರ ಕೋಪ ಹೊರ ಹಾಕಿದ್ದರು. ಸಭೆಯಿಂದ ಹೊರ ನಡೆದಿದ್ದಲ್ಲದೆ ರಾಜ್ಯ ಬಿಜೆಪಿ ಅಧ್ಯಕ್ಷರ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಅಸಮಾಧಾನ ಸ್ಫೋಟಗೊಂಡಿತ್ತು. ಏತನ್ಮಧ್ಯೆ ಶ್ರೀರಾಮುಲು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿದ್ದಲ್ಲದೆ, ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರು.
ನಾನು ನಿಮ್ಮ ಜೊತೆ ಇರುತ್ತೇನೆ: ಯತ್ನಾಳ್‌ಗೆ ರಾಮುಲು ಭರವಸೆ!
ಇದೀಗ ಕೇಂದ್ರ ಗೃಹ ಸಚಿವರೇ ಶ್ರೀರಾಮುಲುಗೆ ದೆಹಲಿಗೆ ಬರುವಂತೆ ತಿಳಿಸಿದ್ದು ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ವಿಮಾನ ಮೂಲಕ ದೆಹಲಿಗೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಕೋರ್‌ಕಮಿಟಿ ಸಭೆಯಲ್ಲಾದ ಬೆಳವಣಿಗೆ, ಸಂಡೂರು ಉಪ ಚುನಾವಣೆಯಲ್ಲಿ ತಾನು ವಹಿಸಿದ ಪಾತ್ರ, ಸದ್ಯ ಜಿಲ್ಲೆಯ ರಾಜಕೀಯ ಚಿತ್ರಣ ಕುರಿತು ಅಮಿತ್ ಶಾ ಅವರಿಗೆ ವಿವರಿಸಲಿದ್ದಾರೆ. ಇದೇ ವೇಳೆ ಪಕ್ಷ ಸಂಘಟನೆ ಕುರಿತಂತೆಯೂ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.