ರೈತರ ಕೃಷಿ ಸಾಲದ ಕುರಿತು ಕೇಂದ್ರ ಸರ್ಕಾರವೇ ನಿರ್ಧರಿಸಬೇಕು: ಸಚಿವ ಕೆ.ಎನ್‌.ರಾಜಣ್ಣ

By Kannadaprabha NewsFirst Published Oct 12, 2023, 9:23 PM IST
Highlights

ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಾಲದ ಬಗ್ಗೆ ಕೇಂದ್ರ ಬರ ಅಧ್ಯಯನ ತಂಡದ ಜತೆ ಚರ್ಚಿಸಲಾಗಿದೆ. ಕೃಷಿ ಸಾಲ ಮರುಪಾವತಿ ಅವಧಿ ವಿಸ್ತರಣೆ, ಹೊಸ ಸಾಲ ವಿತರಣೆ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ. 

ಬೆಂಗಳೂರು (ಅ.12): ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಾಲದ ಬಗ್ಗೆ ಕೇಂದ್ರ ಬರ ಅಧ್ಯಯನ ತಂಡದ ಜತೆ ಚರ್ಚಿಸಲಾಗಿದೆ. ಕೃಷಿ ಸಾಲ ಮರುಪಾವತಿ ಅವಧಿ ವಿಸ್ತರಣೆ, ಹೊಸ ಸಾಲ ವಿತರಣೆ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಾಲ ಮನ್ನಾ ಮಾಡಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ಕೃಷಿ ಸಾಲ ವಿಚಾರದ ಬಗ್ಗೆಯೂ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಚರ್ಚಿಸಲಾಗಿದೆ. ಬರ ಅಧ್ಯಯನ ತಂಡ ಸಲ್ಲಿಸುವ ವರದಿ ಆಧರಿಸಿ ಕೇಂದ್ರ ತೆಗೆದುಕೊಳ್ಳುವ ನಿರ್ಧಾರದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದಷ್ಟೇ ಹೇಳಿದರು. ಸುಮಾರು 45,000 ಹೆಚ್ಚು ಸಂಸ್ಥೆಗಳಿದ್ದು, ಇದರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಜತೆಗೆ ಕೆಟ್ಟ ಸ್ಥಿತಿಯಲ್ಲಿರುವ ಸಂಸ್ಥೆಗಳೂ ಇವೆ. ಹಾಗಾಗಿ ಎಲ್ಲವೂ ಸರಿಯಿಲ್ಲ ಎನ್ನಲಾಗದು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಠೇವಣಿದಾರರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. 

ಡಿಸಿಎಂ ಹುದ್ದೆ ಆಸೆ ಪಡೋರಿಗೆ ನಾನು ಉತ್ತರ ಕೊಡೋದಿಲ್ಲ: ಡಿಕೆಶಿ

50 ಲಕ್ಷ ರೂ. ಠೇವಣಿ ಇಟ್ಟಿದ್ದವರು ಮಾತ್ರೆಗೆ 500 ರು. ಪಡೆಯಲು ಪರದಾಡುವಂತಹ ಸ್ಥಿತಿ ಇರುವ ಬಗ್ಗೆ ಸಭೆಯಲ್ಲೂ ಚರ್ಚಿಸಲಾಯಿತು ಎಂದು ತಿಳಿಸಿದರು. ಇನ್ನೂ ಕೆಲ ಪ್ರಕರಣಗಳು ಹೈಕೋರ್ಟ್ ಸೇರಿದಂತೆ ಇತರೆ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಹೀಗಾಗಿ ನಿಯಮ ಉಲ್ಲಂಘಿಸಿರುವ ಸಹಕಾರಿ ಬ್ಯಾಂಕ್‌ಗಳ ಬಗ್ಗೆಯೂ ಕ್ರಮ ಕೈಗೊಳ್ಳಲು ಅಡ್ಡಿಯಾಗುತ್ತಿದೆ.

ಇನ್ನು ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡಿಜಿಟಲೀಕರಣ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗಳ ಕಚೇರಿಗಳ ಡಿಜಿಟಲೀಕರಣ ಕಾರ್ಯಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದ್ದು, ಅದಕ್ಕೆ ತಗಲುವ ವೆಚ್ಚ ಹಂಚಿಕೆ ಪ್ರಮಾಣದ ಬಗ್ಗೆ ಕೇಂದ್ರ ಸರಕಾರದ ಸಲಹೆ, ಸೂಚನೆಯಂತೆ ಮುಂದುವರಿಯಲಾಗುವುದು. ಇದರಿಂದ ವಂಚನೆ, ದಾಖಲೆಗಳ ತಿರುಚುವಿಕೆ ಸೇರಿದಂತೆ ಇತರೆ ಅಕ್ರಮಗಳ ತಡೆಗೆ ನೆರವಾಗಲಿದೆ ಎಂದರು.

3 ಡಿಸಿಎಂ ಬೇಕೆಂಬ ಹೇಳಿಕೆಗೆ ಬದ್ಧ, ನಾನು ಡಿಸಿಎಂ ಆಗಲ್ಲ: ಸಚಿವ ರಾಜಣ್ಣ

ಸವದಿ ವರದಿ ಪ್ರಕಾರ ಬಿಗಿ ಕ್ರಮ: ಕೃಷಿಯೇತರ ಪತ್ತಿನ ವಿವಿಧೋದ್ದೇಶಗಳ ಸಹಕಾರಿ ಸೌಹಾರ್ದ ಸಂಘಗಳನ್ನು ಉಳಿಸುವ ಸಂಬಂಧ ರಚನೆಯಾಗಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯ ಸಮಿತಿ 15-20 ದಿನಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆಯಿದೆ. ಅದರ ಆಧಾರದ ಮೇಲೆ ಠೇವಣಿದಾರರ ಹಿತ ಕಾಪಾಡಲು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

click me!