ವಿಶ್ವಾಸಮತಕ್ಕೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ರಾಜೀನಾಮೆ!

Published : Jun 29, 2022, 09:44 PM ISTUpdated : Jul 01, 2022, 09:07 AM IST
ವಿಶ್ವಾಸಮತಕ್ಕೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ರಾಜೀನಾಮೆ!

ಸಾರಾಂಶ

ವಿಶ್ವಾಸಮತ ಯಾಚನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾದ ಬೆನ್ನಲ್ಲಿಯೇ ಮಹಾ ವಿಕಾಸ್‌ ಅಘಾಡಿ ಸರ್ಕಾರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಫೇಸ್‌ಬುಕ್‌ ಲೈವ್‌ ಬರುವ ಮೂಲಕ ಉದ್ಧವ್‌ ಠಾಕ್ರೆ ಈ ಘೋಷಣೆ ಮಾಡಿದ್ದಾರೆ.

ಮುಂಬೈ (ಜೂನ್‌ 29): ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್‌ ಠಾಕ್ರೆ ರಾಜೀನಾಮೆ ಸಲ್ಲಿಸಿದ್ದಾರೆ. ರಾತ್ರಿ 9 ಗಂಟೆಯ ವೇಳೆಗೆ ಸುಪ್ರೀಂ ಕೋರ್ಟ್‌ ಗುರುವಾರವೇ ವಿಶ್ವಾಸಮತ ನಡೆಸಿ ಎಂದು ಹೇಳಿದ ಬೆನ್ನಲ್ಲಿಯೇ ರಾತ್ರಿ 9.30ರ ವೇಳೆಗೆ ಫೇಸ್‌ ಬುಕ್‌ ಲೈವ್‌ ಬಂದ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು.

ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಗುರುವಾರ ಸಂಜೆ 5 ಗಂಟೆಯ ಒಳಗಾಗಿ ಮಹಾರಾಷ್ಟ್ರ ವಿಧಾನಸಭೆಯ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಆದೇಶ ನೀಡಿತ್ತು. ಜೈಲಿನಲ್ಲಿರುವ ಮಹಾರಾಷ್ಟ್ರದ ಸಚಿವರಾದ ನವಾಬ್ ಮಲೀಕ್‌ ಹಾಗೂ ಅನಿಲ್‌ ದೇಶ್‌ಮುಖ್‌ ಅವರಿಗೂ ವಿಶ್ವಾಸಮತ ವೇಳೆ ಮತ ಹಾಕಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು.

ಆದರೆ, ಇದಾವುದಕ್ಕೂ ಕಾಯದ ಉದ್ಧವ್‌ ಠಾಕ್ರೆ ಫೇಸ್‌ ಬುಕ್‌ ಲೈವ್‌ ಮೂಲಕ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅದರೊಂದಿಗೆ ಬಿಜೆಪಿ ಹಾಗೂ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಬಣದ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರ ಸ್ಥಾಪಿಸಲು ತನ್ನ ಕೆಲಸ ಆರಂಭಿಸಿದೆ.

ಸಂಜೆ 7 ಗಂಟೆಗೆ ರಾಜೀನಾಮೆ ಪತ್ರ ಸಲ್ಲಿಸಿದ್ದ ಉದ್ಧವ್‌ ಠಾಕ್ರೆ: ಸಂಜೆ ಕ್ಯಾಬಿನೆಟ್‌ ಸಭೆ ಮುಗಿದ ಬೆನ್ನಲ್ಲಿಯೇ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ರಾಜೀನಾಮೆ ಪತ್ರವನ್ನುರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರಿಗೆ ನೀಡಿದ್ದರು. ಆದರೆ, ಸುಪ್ರೀಂ ಕೋರ್ಟ್‌ ವಿಶ್ವಾಸಮತ ಯಾಚನೆ ವಿಚಾರದಲ್ಲಿ ತನ್ನ ತೀರ್ಪನ್ನು 9 ಗಂಟೆಗೆ ನೀಡಿದ ಬಳಿಕ, ಫೇಸ್‌ ಬುಕ್‌ ಲೈವ್‌ಗೆ ಬಂದ ಉದ್ಧವ್‌ ಠಾಕ್ರೆ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು.

ಉದ್ಧವ್‌ ಠಾಕ್ರೆ ಈ ಘೋಷಣೆ ಮಾಡಿದ ಬೆನ್ನಲ್ಲಿಯೇ, ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡಿದ್ದಾರೆ. ಇದರಿಂದಾಗಿ ಗುರುವಾರ ನಡೆಯಬೇಕಿರುವ ಮಹಾರಾಷ್ಟ್ರ ವಿಧಾನಸಭೆಯ ವಿಶ್ವಾಸಮತ ಯಾಚನೆ ನಡೆಯುವುದಿಲ್ಲ.

"ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಜನರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಶಿವಸೇನೆ ಕಡೆಯಿಂದ ಅನಿಲ್ ಪರಬ್, ಸುಭಾಷ್ ದೇಸಾಯಿ ಮತ್ತು ಆದಿತ್ಯ ಠಾಕ್ರೆ  ಮಾತ್ರವೇ ಪ್ರಸ್ತಾಪವನ್ನು ಅಂಗೀಕರಿಸಿದಾಗ ಮಾತ್ರ ಹಾಜರಿದ್ದರು ಮತ್ತು ಎನ್‌ಸಿಪಿ ಮತ್ತು ಕಾಂಗ್ರೆಸ್ ಜನರು ಸಹ ಪ್ರಸ್ತಾಪವನ್ನು ಬೆಂಬಲಿಸಿದರು. ನಾನು ಅನಿರೀಕ್ಷಿತ ರೀತಿಯಲ್ಲಿ ಅಧಿಕಾರಕ್ಕೆ ಬಂದಿದ್ದೆ. ಈಗ ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ. ನಾನು ಶಾಶ್ವತವಾಗಿ ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ ಮತ್ತು ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳುತ್ತೇನೆ. ನನ್ನ ಎಲ್ಲಾ ಜನರನ್ನು ನಾನು ಒಟ್ಟುಗೂಡಿಸುವೆನು. ನಾನು ಸಿಎಂ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

ಸಿಎಂ ಉದ್ಧವ್ ಠಾಕ್ರೆಗೆ ಮತ್ತೆ ಹಿನ್ನಡೆ, ವಿಶ್ವಾಸಮತ ಯಾಚೆನೆಗೆ ಸುಪ್ರೀಂ ಕೋರ್ಟ್ ಸಮ್ಮತಿ!

31 ತಿಂಗಳ ಅಧಿಕಾರ: ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಉದ್ಧವ್‌ ಠಾಕ್ರೆ, ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಬಿಜೆಪಿ ನಿರಾಕರಿಸಿದ್ದ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜೊತೆ ಸೇರಿ, ಮಹಾ ವಿಕಾಸ್‌ ಅಘಾಡಿ ಎನ್ನುವ ಹೆಸರಲ್ಲಿ ಮೈತ್ರಿ ಮಾಡಿಕೊಂಡಿದ್ದರು. ಇದೇ ಹೆಸರಲ್ಲಿ ನಿರ್ಮಾಣವಾದ ಸರ್ಕಾರದಲ್ಲಿ ಉದ್ಧವ್‌ ಠಾಕ್ರೆ 2 ವರ್ಷ 8 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

ರಾಜೀನಾಮೆಗೂ ಮುನ್ನ ಮಹತ್ವದ ನಿರ್ಧಾರ, ಔರಂಗಬಾದ್ ನಗರ ಹೆಸರು ಬದಲಾಯಿಸಿದ ಠಾಕ್ರೆ!

ಶಿಂಧೆ ಬಣ-ಬಿಜೆಪಿ ಸಂಭ್ರಮ: ಭಾವನಾತ್ಮಕ ಭಾಷಣದೊಂದಿಗೆ ಉದ್ಧವ್‌ ಠಾಕ್ರೆ ರಾಜೀನಾಮೆ ಬೆನ್ನಲ್ಲಿಯೇ ಖಾಸಗಿ ಹೋಟೆಲ್‌ನಲ್ಲಿದ್ದ ಏಕನಾಥ್‌ ಶಿಂಧೆ ಬಣದ ಶಾಸಕರು ಹಾಗೂ ಬಿಜೆಪಿ ಶಾಸಕರು ಸಂಭ್ರಮಾಚರಣೆ ಮಾಡಿದರು. ಬಿಜೆಪಿ ಶಾಸಕರು ದೇವೇಂದ್ರ ಫಡ್ನವಿಸ್‌ಗೆ ಘೋಷಣೆ ಕೂಗಿ ಸಂಭ್ರಮಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!