
ಬೆಂಗಳೂರು (ನ.15): ಕೇಂದ್ರ ಸರ್ಕಾರ ಹಾಗೂ ತುಂಗಭದ್ರಾ ಜಲಾಶಯ ಮಂಡಳಿ ನಿರ್ಧಾರದಂತೆ ಡಿಸೆಂಬರ್ ತಿಂಗಳಿನಿಂದ ತುಂಗಭದ್ರಾ ಅಣೆಕಟ್ಟಿನ 33 ಗೇಟ್‌ಗಳನ್ನು ಹೊಸದಾಗಿ ಅಳವಡಿಕೆ ಕಾಮಗಾರಿ ಆರಂಭವಾಗಲಿದ್ದು, ಆ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ನೀರು ಪೂರೈಕೆ ಸಾಧ್ಯವಿಲ್ಲ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು. ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಂಗಡಗಿ, ಸರ್ಕಾರಕ್ಕೆ ರೈತರ ಹಿತ ಮುಖ್ಯ. ಜತೆಗೆ ಅಣೆಕಟ್ಟಿನ ರಕ್ಷಣೆ ನಮ್ಮ ಕರ್ತವ್ಯ.
ಆ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ರೈತರ ಜತೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಒಕ್ಕೊರಲಿನಿಂದ 2ನೇ ಬೆಳೆಗೆ ನೀರು ಪೂರೈಸುವ ಬದಲು ಅಣೆಕಟ್ಟು ದುರಸ್ಥಿಗೆ ಮೊದಲು ಒತ್ತು ನೀಡಲು ನಿರ್ಧರಿಸಲಾಗಿದೆ ಎಂದರು. ಡಿಸೆಂಬರ್ 2ನೇ ವಾರದಿಂದ 33 ಗೇಟ್‌ಗಳ ಬದಲಾವಣೆ ಕಾರ್ಯ ಆರಂಭವಾಗಲಿದೆ. 2026ರ ಜೂನ್ ಅಂತ್ಯಕ್ಕೆ ಆ ಕಾರ್ಯ ಪೂರ್ಣಗೊಳ್ಳಲಿದೆ. ಟೆಂಡರ್‌ನಲ್ಲಿ ಅರ್ಹತೆ ಪಡೆದ ಗುಜರಾತ್ ಮೂಲದ ಸಂಸ್ಥೆಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಅಣೆಕಟ್ಟಿನ ಗೇಟ್‌ಗಳ ಬದಲಾವಣೆ ಜತೆಗೆ ಕೆಲ ಕಾಲುವೆಗಳ ದುರಸ್ತಿ ಮತ್ತು ಅಣೆಕಟ್ಟಿನ ಸಣ್ಣಪುಟ್ಟ ದುರಸ್ತಿಗಳನ್ನು ಇದೇ ವೇಳೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದ ಪಾಲು ಉಳಿಯಲಿದೆ: ಕೇಂದ್ರ ಸರ್ಕಾರ ಮತ್ತು ತುಂಗಭದ್ರಾ ಜಲಾಶಯ ಮಂಡಳಿ ನೀಡಿದ ಸಲಹೆಯಂತೆ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಾಗಿದೆ. ಎರಡನೇ ಬೆಳೆಗೆ ಕನಿಷ್ಠ 60 ಟಿಎಂಸಿ ನೀರು ಬೇಕಾಗುತ್ತದೆ. ಅದರಲ್ಲಿ ಅಣೆಕಟ್ಟಿನಲ್ಲಿ ಕರ್ನಾಟಕದ ಪಾಲು 33.01 ಟಿಎಂಸಿ ನೀರು ಉಳಿಯಲಿದೆ. ಆದರೆ, ಗೇಟ್ ಬದಲಾವಣೆ ಕಾಮಗಾರಿ ನಡೆಸುವುದರಿಂದ ಆ ನೀರನ್ನು ರೈತರಿಗೆ ಒದಗಿಸಲು ಸಾಧ್ಯವಿಲ್ಲ ಎಂದು ತಂಗಡಗಿ ಹೇಳಿದರು.
ರಾಜಕೀಯ ಮಾಡಬೇಡಿ: ನಮಗೆ ರೈತರ ಹಿತಮುಖ್ಯ. ಭವಿಷ್ಯದ ದೃಷ್ಟಿಯಿಂದ ಅಣೆಕಟ್ಟಿನ ರಕ್ಷಣೆ ಕೂಡ ಮುಖ್ಯ. ಕೆಲ ಬಿಜೆಪಿ ನಾಯಕರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರ ಒಪ್ಪಿಗೆ ಪಡೆದೇ ಎಲ್ಲ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಜಲಾಶಯದ ಕ್ರಸ್ಟ್ ಗೇಟ್ ಮುರಿದಾಗ, ರಾಜ್ಯ ಸರ್ಕಾರದಿಂದಲೇ ಗೇಟ್ ಅಳವಡಿಕೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಆಗ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಗೇಟ್‌ಗಳ ಬದಲಾವಣೆ ಸಂದರ್ಭದಲ್ಲಿ ರೈತರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಾ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಿವರಾಜ ತಂಗಡಗಿ ಆಗ್ರಹಿಸಿದರು. ಎರಡನೇ ಬೆಳೆಗೆ ರೈತರಿಗೆ ನೀರು ಕೊಡದಿದ್ದರೆ, ನದಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ಶ್ರೀರಾಮುಲು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ, ಶ್ರೀರಾಮುಲು ಅವರು ನನ್ನ ಸಹೋದರ ಇದ್ದಂತೆ. ಹೀಗಾಗಿ ನೀರಿಗೆ ಹಾರುವುದು ಬೇಡ ಎಂದುರು.
ಹಾಲಿ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ. 10ರವರೆಗೆ ನೀರು ಹರಿಸಲಾಗುವುದು. ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರ ಉಪಯೋಗಕ್ಕೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಗೆ ಡಿ. 1ರಿಂದ ಜ. 10ರವರೆಗೆ ಬೆಳೆಗಳಿಗೆ 3 ಸಾವಿರ ಕ್ಯುಸೆಕ್ಸ್, ಎಡದಂಡೆ ವಿಜಯನಗರ ಕಾಲುವೆಯ 1ರಿಂದ 11ಎವರೆಗಿನ ವಿತರಣಾ ಕಾಲುವೆಗೆ ಜ. 1ರಿಂದ ಮೇ 10ರವರೆಗೆ 150 ಕ್ಯುಸೆಕ್ಸ್ ನೀರು ಹರಿಸುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ ಜ. 10ರವರೆಗೆ 1,300 ಕ್ಯುಸೆಕ್ಸ್‌ನಂತೆ ಬೆಳೆಗಳಿಗೆ ನೀರು ಪೂರೈಸುವುದು. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 1ರಿಂದ ಜ. 10ರವರೆಗೆ 750 ಕ್ಯುಸೆಕ್ಸ್ ನೀರು ಪೂರೈಕೆ. ರಾಯಬಸವಣ್ಣ ಕಾಲುವೆಗೆ ಜ. 1ರಿಂದ ಮೇ 31ರವರೆಗೆ ಸರಾಸರಿ 250 ಕ್ಯುಸೆಕ್ಸ್‌ನಂತೆ ಅಥವಾ ಕಾಲುವೆಯಡಿ ನೀರು ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ 25 ಕ್ಯುಸೆಕ್ಸ್‌ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1,585 ಅಡಿವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುವುದು ಹಾಗೂ 150 ಕ್ಯುಸೆಕ್ಸ್‌ನಂತೆ ನದಿ ಪೂರಕ ಕಾರ್ಖಾನೆಗಳಿಗೆ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ತುಂಗಭದ್ರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 33 ಗೇಟ್‌ಗಳ ಬದಲಾವಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ 2ನೇ ವಾರದಿಂದ ಜೂನ್‌ವರೆಗೆ ಕಾಮಗಾರಿ ನಡೆಯಲಿದೆ. ನಾಲ್ಕು ಜಿಲ್ಲೆಯ ರೈತ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗಿದೆ.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.