
ಬೆಂಗಳೂರು(ಮಾ.29): ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರ ಅಸಮಾಧಾನಕ್ಕೆ ಮದ್ದು ಹುಡುಕಿರುವ ಆಡಳಿತಾರೂಢ ಬಿಜೆಪಿಯು, ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರನ್ನು ಪಕ್ಷದ ತುಮಕೂರು ಜಿಲ್ಲಾ ಘಟಕ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಈ ಸಂಬಂಧ ಮಂಗಳವಾರ ರಾತ್ರಿ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ರವಿ ಹೆಬ್ಬಾಕ ಅವರು ಆದೇಶ ಹೊರಡಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ನೇಮಕ ಮಾಡಲಾಗಿದೆ ಎಂಬ ಅಂಶವನ್ನೂ ಅವರು ಪ್ರಸ್ತಾಪಿಸಿದ್ದಾರೆ.
ಇದರ ಬೆನ್ನಲ್ಲೇ ಅರುಣ್ ಸೋಮಣ್ಣ ಅವರಿಗೆ ಇದೇ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವರೋ ಎಂಬ ಕುತೂಹಲವೂ ಮೂಡಿದೆ. ಜತೆಗೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು ಎಂಬ ಮಾತೂ ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.
ಬಿಜೆಪಿ ಸರ್ಕಾರದಿಂದ ಯಶಸ್ವಿ ಆಡಳಿತ: ಸಚಿವ ಸೋಮಣ್ಣ
ಕಳೆದ ಹಲವು ದಿನಗಳ ಹಿಂದೆ ಸಚಿವ ಸೋಮಣ್ಣ ಅವರು ತಾವು ಉಸ್ತುವಾರಿಯಾಗಿರುವ ಚಾಮರಾಜನಗರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತಿಯಲ್ಲಿ ಆರಂಭಗೊಂಡ ಪಕ್ಷದ ವಿಜಯ ಸಂಕಲ್ಪ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ತಮ್ಮ ಪುತ್ರನಿಗೆ ಪಕ್ಷದ ರಾಜ್ಯ ಘಟಕದಲ್ಲಿ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನೂ ಪಕ್ಷದ ನಾಯಕರ ಬಳಿ ಇಟ್ಟಿದ್ದರು. ಅಂತಿಮವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮಣ್ಣ ಅವರನ್ನು ದೆಹಲಿಗೆ ಕರೆಸಿಕೊಂಡು ಸಂಧಾನ ಮಾತುಕತೆ ನಡೆಸಿದ ವೇಳೆ ಪುತ್ರನಿಗೆ ಸ್ಥಾನಮಾನ ನೀಡುವ ಭರವಸೆ ನೀಡಲಾಗಿತ್ತು. ಅದೀಗ ಭಾಗಶಃ ಕಾರ್ಯಗತವಾಗಿದೆ. ರಾಜ್ಯ ಘಟಕದ ಬದಲು ಜಿಲ್ಲಾ ಘಟಕದಲ್ಲಿ ಸ್ಥಾನ ನೀಡಲಾಗಿದೆ.
ಆದರೆ, ಈ ನೇಮಕದಿಂದ ಸಚಿವ ಸೋಮಣ್ಣ ಅವರು ಸಂತಸಗೊಂಡಿದ್ದಾರೆ. ಇದಕ್ಕಾಗಿ ಪಕ್ಷದ ವರಿಷ್ಠರು ಹಾಗೂ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.