ಡಿಕೆಶಿಗೆ ಮತ್ತೊಂದು ಸಂಕಷ್ಟ: ಬಿಜೆಪಿ ಭ್ರಷ್ಟಾಚಾರ ರೇಟ್‌ ಕಾರ್ಡ್‌ಗೆ ಸಾಕ್ಷಿ ಕೇಳಿದ ಆಯೋಗ

By Sathish Kumar KH  |  First Published May 6, 2023, 9:51 PM IST

ಬಿಜೆಪಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಬಿಡುಗಡೆ ಮಾಡಿದ ಕಾಂಗ್ರೆಸ್‌ ನಾಯಕರಿಗೆ, ಸಾಕ್ಷಿ ಕೊಡುವಂತೆ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿದೆ.


ಬೆಂಗಳೂರು (ಮೇ 06): ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಮಾಡಿಕೊಂಡಿರುವ ಎಡವಟ್ಟಿನಿಂದಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಕೇಂದ್ರ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಗೊಳಿಸಲಾಗಿದೆ. 

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಆರಂಭಕ್ಕೂ ಮುನ್ನವೇ ಕಾಂಗ್ರೆಸ್‌ನಿಂದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಪರ್ಸೆಂಟ್‌ ಭ್ರಷ್ಟಾಚಾರದ (40 persent corruption) ಆರೋಪವನ್ನು ಮಾಡಿಕೊಂಡು ಬರುತ್ತಿತ್ತು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇಸಿಎಂ (Pay CM)ಎಂದು ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್‌ ಪ್ರಚಾರ ತೆಗೆದುಕೊಂಡಿತ್ತು. ಆದರೆ, ಚುನಾವಣಾ ಮತದಾನ ದಿನಕ್ಕೆ ಇನ್ನು ಮೂರು ದಿನ ಬಾಕಿ ಇರುವ ವೇಳೆಯಲ್ಲಿ ಕಾಂಗ್ರೆಸ್‌ ಬಿಜೆಪಿಯ ಭ್ರಷ್ಟಾಚಾರದ ರೇಟ್‌ ಕಾರ್ಡ್‌ (Rate Card) ಅನ್ನು ಬಿಡುಗಡೆ ಮಾಡಿದೆ. ಆದರೆ, ಈಗ ಬಿಜೆಪಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ತಯಾರಿಸಿದ್ದ ಕಾಂಗ್ರೆಸ್‌ಗೆ ಸಂಕಷ್ಟ ಎದುರಾಗಿದೆ.

Tap to resize

Latest Videos

ಬೆಂಗಳೂರಿನಲ್ಲಿ ಕಾಂಗ್ರೆಸ್‌- ಬಿಜೆಪಿ ಗಲಾಟೆ! ಡಿ.ಕೆ.ರವಿ ಪತ್ನಿ ಕುಸುಮಾಗೆ ಡಿಸಿಪಿಯೇ ಕ್ಷಮೆ ಕೇಳಬೇಕಂತೆ!

ಬಿಜೆಪಿಯ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಬಿಡುಗಡೆ:  ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್‌ ನಾಯಕರು ಬಿಜೆಪಿಯ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಬಿಡುಗಡೆ ಮಾಡಿದ್ದರು. ಜೊತೆಗೆ, ಇದನ್ನು ಜಾಹಿರಾತು ಕೂಡ ನೀಡಿದ್ದರು. ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು. ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಪ್ರಚಾರ ಮಾಡಿದ್ದರು. ಇದರಿಂದ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮಾಡಿದ ಕಾಂಗ್ರೆಸ್‌ ವಿರುದ್ಧ ಕೇಂದ್ರ ಚುನಾವಣಾ ಆಯೋಗವೇ ನೋಟಿಸ್‌ ಜಾರಿಗೊಳಿಸಿದೆ.

ಜಾಹೀರಾತು ನೀಡಿ ಅಪಪ್ರಚಾರ:  ಕಾಂಗ್ರೆಸ್ ನಾಯಕರಿಗೆ ಕೇಂದ್ರ ಚುನಾವಣಾ ಆಯೋಗ ನೋಟೀಸ್ ಜಾರಿಗೊಳಿಸಿದೆ. ಜಾಹೀರಾತು ಮತ್ತು ವಿವಿಧ ಹೇಳಿಕೆ ವಿಚಾರವಾಗಿ ನೋಟೀಸ್ ಜಾರಿಗೊಳಿಸಲಾಗಿದ್ದು, ಕೂಡಲೇ ಸ್ಪಷ್ಟೀಕರಣ ಮತ್ತು ಸಾಕ್ಷಿ ನೀಡುವಂತೆ ಸೂಚನೆ ನಿಡಿದೆ. ಆದರೆ, ಕಾಂಗ್ರೆಸ್‌ ಮಾದರಿ ನೀತಿ ಸಂಹಿತೆ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳದೇ ಉಲ್ಲಂಘನೆ ಮಾಡಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಜೊತೆಗೆ, ಬಿಜೆಪಿ ವಿರುದ್ಧ ಭ್ರಷ್ಟಾಚಾರ ಹಾಗೂ ಶೇ.40 ಆರೋಪ ಹೊರಿಸಿ ಜಾಹೀರಾತು ಕೂಡ ಪ್ರಕಟಣೆ ಮಾಡಿದೆ. ಹೀಗಾಗಿ, ಚುನಾವಣಾ ಆಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಕಾರಣ ಕೇಳಿ ನೋಟೀಸ್ ನೀಡಿದೆ.

ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸ್ಕೆಚ್‌ ಹಾಕಿದ ಬಿಜೆಪಿ ಅಭ್ಯರ್ಥಿ ಬಂಧಿಸಿ: ಸಿದ್ದರಾಮಯ್ಯ ಆಗ್ರಹ

ನಾಳೆ ಸಂಜೆಯೊಳಗೆ ಸಾಕ್ಷಿ ಸಲ್ಲಿಸಬೇಕು: ಕಾಂಗ್ರೆಸ್ ಆರೋಪ ಮಾಡಿರೋ ಜಾಹೀರಾತಿನ ಬಗ್ಗೆ ಸಾಕ್ಷಿ ನೀಡುವಂತೆ ಸೂಚನೆ ನೀಡಿದೆ. ನಾಳೆ (ಮೇ 7) ಸಂಜೆ 7 ಗಂಟೆಯೊಳಗೆ ಸಾರ್ವಜನಿಕವಾಗಿ ಬಿಜೆಪಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಸಲ್ಲಿಕೆ ಮಾಡಬೇಕು. ಒಂದು ವೇಳೆ ಸಾಕ್ಷಿ ನೀಡಲು ವಿಫಲವಾದರೆ, ಆರ್‌ಪಿ ಕಾಯಿದೆ ಮತ್ತು IPC ಅಡಿಯಲ್ಲಿ ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ನಿಗದಿತ ಸಮಯದೊಳಗೆ ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದಲ್ಲಿ, ನೀವು ಏನೂ ಹೇಳಲು ಸಾಕ್ಷಿ ಇಲ್ಲ ಎಂದು ಭಾವಿಸಲಾಗುವುದು. ಜೊತೆಗೆ, ಚುನಾವಣಾ ಆಯೋಗವು ಯಾವುದೇ ಹೆಚ್ಚಿನ ಉಲ್ಲೇಖವನ್ನು ಮಾಡದೆ ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

click me!