ಅಸ್ಸಾಂನ ದಿಬ್ರುಗಢ ಕ್ಷೇತ್ರ ಕದನ: ಚಹಾತೋಟದಲ್ಲಿ ಸೋನೋವಾಲ್‌ಗೆ ಸವಾಲ್‌..!

By Kannadaprabha NewsFirst Published Apr 18, 2024, 9:07 AM IST
Highlights

ಕೇಂದ್ರ ಸಚಿವ ರಾಮೇಶ್ವರ್‌ ತೇಲಿಗೆ ಕೊಕ್‌ ನೀಡಿ ಪ್ರಭಾವಿ ನಾಯಕ ಸರ್ಬಾನಂದ ಸೋನೋವಾಲ್‌ಗೆ ಟಿಕೆಟ್‌ ನೀಡಿದೆ. ಇದರ ಜೊತೆಗೆ ಕಾಂಗ್ರೆಸ್‌ ಕೂಡ ಮಾಜಿ ಮುಖ್ಯಮಂತ್ರಿ ಪುತ್ರ ಲುರಿನ್‌ಜ್ಯೋತಿ ಗೊಗೋಯ್‌ಗೆ ಟಿಕೆಟ್‌ ನೀಡಿದ್ದರೆ ಕಾಂಗ್ರೆಸ್‌ನಿಂದ ಆಪ್‌ಗೆ ಜಿಗಿದಿರುವ ಮಾಜಿ ಮಂತ್ರಿ ಪುತ್ರ ಮನೋಜ್‌ ಧನೋವಾರ್‌ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ದಿಬ್ರುಗಢ(ಏ.18):  ಚಹಾತೋಟಗಳಿಂದ ಸಮೃದ್ಧವಾಗಿರುವ ಅಸ್ಸಾಂನ ದಿಬ್ರುಗಢ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಎರಡು ಬಾರಿಯ ಸಂಸದ, ಕೇಂದ್ರ ಸಚಿವ ರಾಮೇಶ್ವರ್‌ ತೇಲಿಗೆ ಕೊಕ್‌ ನೀಡಿ ಪ್ರಭಾವಿ ನಾಯಕ ಸರ್ಬಾನಂದ ಸೋನೋವಾಲ್‌ಗೆ ಟಿಕೆಟ್‌ ನೀಡಿದೆ. ಇದರ ಜೊತೆಗೆ ಕಾಂಗ್ರೆಸ್‌ ಕೂಡ ಮಾಜಿ ಮುಖ್ಯಮಂತ್ರಿ ಪುತ್ರ ಲುರಿನ್‌ಜ್ಯೋತಿ ಗೊಗೋಯ್‌ಗೆ ಟಿಕೆಟ್‌ ನೀಡಿದ್ದರೆ ಕಾಂಗ್ರೆಸ್‌ನಿಂದ ಆಪ್‌ಗೆ ಜಿಗಿದಿರುವ ಮಾಜಿ ಮಂತ್ರಿ ಪುತ್ರ ಮನೋಜ್‌ ಧನೋವಾರ್‌ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹೇಗಿದೆ ಸೋನೋವಾಲ್ ತಯಾರಿ?

ಸರ್ಬಾನಂದ ಸೋನೋವಾಲ್‌ ಬಿಜೆಪಿ ಸೇರಿದ ಬಳಿಕ ಸ್ಪರ್ಧಿಸುತ್ತಿರುವ ಮೊದಲ ಲೋಕಸಭಾ ಚುನಾವಣೆಯಾದರೂ ಇದಕ್ಕೂ ಮೊದಲು ಅಸ್ಸಾಂ ಗಣ ಪರಿಷತ್‌ ನಾಯಕರಾಗಿದ್ದ ಸಂದರ್ಭದಲ್ಲಿ ದಿಬ್ರುಗಢ ಕ್ಷೇತ್ರದಿಂದಲೇ 2004ರಲ್ಲಿ ಸಂಸದರಾಗಿ ಆಯ್ಕೆಯಾದ ಅನುಭವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಮೇಶ್ವರ್‌ ತೇಲಿ ಬದಲಿಗೆ ಟಿಕೆಟ್‌ ನೀಡಿರುವುದು ಬಿಜೆಪಿ ಪಾಲಿಗೆ ಅಷ್ಟು ಸಂಕಷ್ಟ ತರದು ಎನ್ನಲಾಗಿದೆ. ಸೋನೋವಾಲ್‌ ಅವರು ಕ್ಷೇತ್ರದಲ್ಲಿ ನಾಲ್ಕು ಸ್ತರದ ಸಾರಿಗೆಯಲ್ಲಿ ಮಾಡಿರುವ ಅಭಿವೃದ್ಧಿಯಿಂದ ಉಂಟಾಗಿರುವ ಶಾಶ್ವತ ಬದಲಾವಣೆಯನ್ನು ಜನತೆಯ ಮುಂದಿಟ್ಟು ಮತ ಕೇಳುತ್ತಿದ್ದಾರೆ. ಅಲ್ಲದೆ ಅವರನ್ನು ಗೆಲ್ಲಿಸಿದಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರದಲ್ಲಿ ಪ್ರಬಲ ಮಂತ್ರಿಯಾಗುವುದು ಖಚಿತವಾಗಿರುವುದರಿಂದ ಕ್ಷೇತ್ರದಲ್ಲಿ ಅವರ ಪರ ಒಲವು ಹೆಚ್ಚಿದೆ. ಅಲ್ಲದೆ ಕ್ಷೇತ್ರದಲ್ಲಿ ಶೇ.75ರಷ್ಟು ಸಾಕ್ಷರ ಮತದಾರರಿದ್ದು, ಪತ್ರಿಕೋದ್ಯಮ ಮತ್ತು ಕಾನೂನು ಪದವಿ ಪಡೆದಿರುವ ಸರ್ಬಾನಂದ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ.

2014ರಲ್ಲಿ ಭರವಸೆ ಹುಸಿ, 2019ರಲ್ಲಿ ನಂಬಿಕೆಗೆ ದ್ರೋಹ, 2024ರಲ್ಲಿ ನಿರ್ಗಮನ ಗ್ಯಾರಂಟಿ: ಬಿಜೆಪಿ ವಿರುದ್ಧ 'ಕೈ' ಕಿಡಿ

ಕಾಂಗ್ರೆಸ್‌ ಕಾರ್ಯ ವೈಖರಿ:

ಕಾಂಗ್ರೆಸ್‌ ಪಕ್ಷವು ಮಾಜಿ ಮುಖ್ಯಮಂತ್ರಿ ಪುತ್ರರಾಗಿರುವ ಲುರಿನ್‌ಜ್ಯೋತಿ ಗೊಗೋಯ್‌ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅವರು ಸ್ಥಳೀಯ ಚಹಾ ಬೆಳೆಗಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಪ್ರಮುಖವಾಗಿ ಚಹಾ ಬೆಳೆಗಾರರ ದಿನಗೂಲಿಯನ್ನು ಬಿಜೆಪಿಯು ವಾಗ್ದಾನ ನೀಡಿದ್ದಂತೆ 350 ರು.ಗೆ ಏರಿಸದಿರುವ ಕುರಿತು ಬಿಜೆಪಿಯನ್ನು ಟೀಕಿಸುತ್ತಾ ಅದರ ಲಾಭವನ್ನು ಪಡೆಯುವ ಯತ್ನ ನಡೆಸುತ್ತಿದೆ. ಜೊತೆಗೆ ಇತ್ತೀಚೆಗೆ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸ್ಥಳೀಯ ಬುಡಕಟ್ಟು ಸಮುದಾಯವನ್ನು ಹೊರಗಿಟ್ಟಿರುವ ಕುರಿತು ಧ್ವನಿ ಎತ್ತುತ್ತಿದೆ.

ಆಪ್‌ ಪ್ರವೇಶ:

ಆಮ್‌ ಅದ್ಮಿ ಪಕ್ಷವು ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಎಂಟು ಬಾರಿ ಶಾಸಕರಾಗಿ ಮಂತ್ರಿಯಾಗಿದ್ದ ಧನೋವಾರ್‌ ಪುತ್ರನನ್ನು ಕಾಂಗ್ರೆಸ್‌ನಿಂದ ಸೆಳೆದು ಟಿಕೆಟ್‌ ನೀಡಿದೆ. ಇವರು ಚಹಾ ಕೂಲಿಕಾರರ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಅವರ ಪರ ಧ್ವನಿ ಎತ್ತುತ್ತಾ ಅವರ ಮತಗಳನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಈ ಬಾರಿ ಕ್ಷೇತ್ರದಲ್ಲಿ ಕೇಂದ್ರ ಸಚಿವರೊಬ್ಬರಿಗೆ ಟಿಕೆಟ್‌ ನಿರಾಕರಿಸಿರುವ ಪರಿಣಾಮವನ್ನು ಯಾವ ರೀತಿ ಚುನಾವಣೆಯಲ್ಲಿ ಅನುಭವಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

2014ರಲ್ಲಿ ಭರವಸೆ, 2019ರಲ್ಲಿ ವಿಶ್ವಾಸ, 2024ರಲ್ಲಿ ಗ್ಯಾರಂಟಿ: ಪ್ರಧಾನಿ ಮೋದಿ

ಕ್ಷೇತ್ರ: ದಿಬ್ರುಗಢ
ರಾಜ್ಯ: ಅಸ್ಸಾಂ
ಮತದಾನದ ದಿನ: ಏ.19

ಪ್ರಮುಖ ಅಭ್ಯರ್ಥಿಗಳು:

ಬಿಜೆಪಿ- ಸರ್ಬಾನಂದ ಸೋನೋವಾಲ್‌
ಕಾಂಗ್ರೆಸ್‌- ಲುರಿನ್‌ಜ್ಯೋತಿ ಗೊಗೋಯ್‌
ಆಪ್‌- ಮನೋಜ್‌ ಧನೋವಾರ್‌

2019ರ ಫಲಿತಾಂಶ

ಗೆಲುವು: ಬಿಜೆಪಿ- ರಾಮೇಶ್ವರ ತೇಲಿ
ಸೋಲು: ಕಾಂಗ್ರೆಸ್‌ - ಪಾಬನ್‌ಸಿಂಗ್‌ ಘಟೋವಾರ್‌

click me!