ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಂತಹ ಹುದ್ದೆಯನ್ನು ನಿಭಾಯಿಸಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಪಕ್ಷದಲ್ಲಿ ಭಾರಿ ಅಸಮಾಧಾನ ಇದ್ದರೂ ಅವರನ್ನೇ ಮುಂದುವರಿಸುವ ಬಗ್ಗೆ ಪಕ್ಷ ವರಿಷ್ಠರು ತೀರ್ಮಾನಿಸಿದ್ದರು. ಆದರೆ ಜಿಲ್ಲೆಯಲ್ಲಿ ಪಕ್ಷ ಹಾಗೂ ಸಂಘಪರಿವಾರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಅಂತಿಮವಾಗಿ ಯುವ ನಾಯಕತ್ವಕ್ಕೆ ಮಣೆ ಹಾಕಿದ್ದರು. ಇದು ಕಾಂಗ್ರೆಸ್ ಪಾಳಯಕ್ಕೆ ಅನಿರೀಕ್ಷಿತ ಶಾಕ್ ನೀಡಿದರೆ, ಪಕ್ಷದ ವಿರುದ್ಧದ ಅಸಮಾಧಾನ ಶಮನಕ್ಕೆ ತಂತ್ರಗಾರಿಕೆಯಾಗಿಯೂ ರೂಪಿಸಲಾಗಿದೆ.
ಆತ್ಮಭೂಷಣ್
ಮಂಗಳೂರು(ಮಾ.17): ದ.ಕ. ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಹೊಸ ಅಭ್ಯರ್ಥಿಯನ್ನು ಘೋಷಿಸುವ ಮೂಲಕ ಬಿಜೆಪಿ ವರಿಷ್ಠರು ಕಾಂಗ್ರೆಸ್‌ಗೆ ಶಾಕ್ ನೀಡಿದರೆ, ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವಂತೆ ಬಿಜೆಪಿ ವಿರುದ್ಧದ ಅಸಮಾಧಾನ ಶಮನಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಂತಹ ಹುದ್ದೆಯನ್ನು ನಿಭಾಯಿಸಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಪಕ್ಷದಲ್ಲಿ ಭಾರಿ ಅಸಮಾಧಾನ ಇದ್ದರೂ ಅವರನ್ನೇ ಮುಂದುವರಿಸುವ ಬಗ್ಗೆ ಪಕ್ಷ ವರಿಷ್ಠರು ತೀರ್ಮಾನಿಸಿದ್ದರು. ಆದರೆ ಜಿಲ್ಲೆಯಲ್ಲಿ ಪಕ್ಷ ಹಾಗೂ ಸಂಘಪರಿವಾರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಅಂತಿಮವಾಗಿ ಯುವ ನಾಯಕತ್ವಕ್ಕೆ ಮಣೆ ಹಾಕಿದ್ದರು. ಇದು ಕಾಂಗ್ರೆಸ್ ಪಾಳಯಕ್ಕೆ ಅನಿರೀಕ್ಷಿತ ಶಾಕ್ ನೀಡಿದರೆ, ಪಕ್ಷದ ವಿರುದ್ಧದ ಅಸಮಾಧಾನ ಶಮನಕ್ಕೆ ತಂತ್ರಗಾರಿಕೆಯಾಗಿಯೂ ರೂಪಿಸಲಾಗಿದೆ.
ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್:
ನಾಲ್ಕನೇ ಬಾರಿಗೆ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಸಿಗುವ ನಿರೀಕ್ಷೆ ಕಾಂಗ್ರೆಸ್‌ನಲ್ಲಿತ್ತು. ರಾಜ್ಯಾಧ್ಯಕ್ಷನಾಗಿ ಪ್ರಧಾನಿ, ಅಮಿತ್ ಶಾ, ನಡ್ಡಾ ಸಹಿತ ಕೇಂದ್ರ ನಾಯಕರ ಜತೆ ನಿಕಟ ಸಂಪರ್ಕ ನಳಿನ್ ಕುಮಾರ್ ಅವರಿಗೇ ಟಿಕೆಟ್ ಲಭಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿತ್ತು. ಮುಖ್ಯವಾಗಿ ಜಿಲ್ಲಾ ಬಿಜೆಪಿಯಲ್ಲಿ ಕಾಣಿಸಿದ ಅಸಮಾಧಾನ, ಅದರಲ್ಲೂ ಪುತ್ತೂರಲ್ಲಿದ್ದ ಪುತ್ತಿಲ ಬಿಕ್ಕಟ್ಟು, ಮಂಗಳೂರಲ್ಲಿ ಸತ್ಯಜಿತ್ ಸುರತ್ಕಲ್ ಪಕ್ಷೇತರ ಸ್ಪರ್ಧೆಯ ಬೆದರಿಕೆ ಇತ್ಯಾದಿ ಎಲ್ಲವೂ ಕಾಂಗ್ರೆಸ್‌ಗೆ ಈ ಬಾರಿ ಗೆಲುವಿನ ಕನಸು ಕಾಣುವಂತೆ ಮಾಡಿತ್ತು. ಆದರೆ ಬಿಜೆಪಿ ನಾಯಕರು ಅಭ್ಯರ್ಥಿ ಬದಲಾವಣೆ ಮಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ತಣ್ಣೀರು ಎರಚಿದಂತೆ ಆಗಿದೆ.
ಕಾಂಗ್ರೆಸ್‌ನಿಂದ ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಅಲ್ಲದೆ ಎಐಸಿಸಿ ಕಾರ್ಯದರ್ಶಿ ಪದ್ಮರಾಜ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು, ಬಿಜೆಪಿ ಹೊಸ ಮುಖವನ್ನು ಕಣಕ್ಕೆ ಇಳಿಸಿದ ಬಳಿಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹುಮ್ಮಸ್ಸು ಮೊದಲಿನಂತೆ ಇಲ್ಲ ಎಂದೇ ಹೇಳಲಾಗುತ್ತಿದೆ.
ಬಿಜೆಪಿ ಅತೃಪ್ತಿಯೂ ಶಮನದತ್ತ:
ಲೋಕಸಭಾ ಅಭ್ಯರ್ಥಿ ಬದಲಾವಣೆ ಬೆನ್ನಿಗೆ ಪುತ್ತೂರಿನಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ಗುರುವಾರ ದಿಢೀರನೆ ಶಮನಗೊಂಡಿದೆ. ಪುತ್ತಿಲ ಬೇಷರತ್ ಆಗಿ ಬಿಜೆಪಿ ಸೇರಿದ್ದಾರೆ. ನಳಿನ್ ಕುಮಾರ್ ಕಟೀಲ್‌ಗೆ ಮತ್ತೆ ಟಿಕೆಟ್ ನೀಡಿದರೆ ನಾನು ಕೂಡ ಸ್ಪರ್ಧಿ ಎಂದು ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿಕೆ ನೀಡಿದ್ದರು. ಅಲ್ಲದೆ ತನ್ನದೇ ಬಿಲ್ಲವ ಬಳಗವನ್ನು ಕಟ್ಟಿಕೊಂಡು ಪುತ್ತೂರು ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು. ಈ ಎಲ್ಲ ಬಿಕ್ಕಟ್ಟು ಶಮನಕ್ಕೆ ಬಿಜೆಪಿ ಹೂಡಿದ ಹೊಸ ಅಭ್ಯರ್ಥಿ ಅಸ್ತ್ರ ಸುಗಮ ಹಾದಿ ಕಲ್ಪಿಸುವ ನಿರೀಕ್ಷೆಯನ್ನು ಪಕ್ಷ ಮುಖಂಡರು ಹೊಂದಿದ್ದಾರೆ.
ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!
ಮರು ಸೇರ್ಪಡೆ ಸಾಧ್ಯತೆ:
ಬಿಜೆಪಿಯಿಂದ ದೂರ ಇರುವ, ಅಂತರ ಕಾಯ್ದುಕೊಂಡಿರುವ ಹಾಗೂ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವವರನ್ನೂ ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುವ ಸಾಧ್ಯತೆ ಇದೆ. ಬಿಜೆಪಿಯಿಂದ ದೂರ ಸರಿದಿರುವ ಸತ್ಯಜಿತ್ ಸುರತ್ಕಲ್, ಮಂಗಳೂರು ಬಿಜೆಪಿ ಅಧ್ಯಕ್ಷರಾಗಿ, ಜಿಲ್ಲಾ ಪದಾಧಿಕಾರಿಯಾಗಿದ್ದ ಶ್ರೀಕರ ಪ್ರಭು ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಸತೀಶ್ ಪ್ರಭು ಮುಂತಾದವರನ್ನು ಮರಳಿ ಪಕ್ಷಕ್ಕೆ ಕರೆತರುವ ಬಗ್ಗೆ ಚಿಂತನೆಗಳು ನಡೆಯುವ ಬಗ್ಗೆ ಮೂಲಗಳು ಹೇಳುತ್ತಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಒಟ್ಟಾಗಿಸಿ ಬಿಜೆಪಿ ಭರ್ಜರಿ ಜಯ ದಾಖಲಿಸುವ ಬಗ್ಗೆ ಸಮಾಲೋಚನೆಗೆ ಅಭ್ಯರ್ಥಿ ಬದಲಾವಣೆ ವೇದಿಕೆ ಕಲ್ಪಿಸಿದೆ.
ಬಿಜೆಪಿಗೆ ಯುವ ಸೆಳೆತ!
ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಕಣಕ್ಕೆ ಇಳಿಸುವ ಮೂಲಕ ಯುವ ಮತದಾರರ ಸೆಳೆಯುವ ತಂತ್ರಗಾರಿಕೆಯನ್ನು ಪಕ್ಷ ನಡೆಸಿದೆ. ಹೊಸ ಮುಖ, ನಿವೃತ್ತ ಸೇನಾಯೋಧ, ಸಮಾಜ ಸೇವಕ ಹಾಗೂ ಸ್ನೇಹ ಜೀವಿಯಾಗಿರುವ ಕ್ಯಾ.ಬ್ರಿಜೇಶ್ ಚೌಟ ಸದ್ಯ ಯುವಕರ ಪಾಲಿಗೆ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.