
ಬೆಂಗಳೂರು (ಮೇ.10): ಪ್ರಸಕ್ತ 2025-26ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಇದೇ 15ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಇದೇ 15 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜೂ14ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿ ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದವರಿಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಧಿಕಾರ ವಹಿಸಲಾಗುವುದು. ವರ್ಗಾವಣೆ ಅವಧಿ ವಿಸ್ತರಿಸುವುದು ಮತ್ತು ವರ್ಗಾವಣೆ ಮಾರ್ಗಸೂಚಿ ಪರಿಷ್ಕರಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ ಎಂದರು.
ಕೌನ್ಸೆಲಿಂಗ್ ಮೂಲಕ ವರ್ಗಾವಣೆ: ಇನ್ನು ಇದೇ ಮೊದಲ ಬಾರಿಗೆ ಅಬಕಾರಿ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಆರೋಗ್ಯ, ಶಿಕ್ಷಣ ಇಲಾಖೆ ಸೇರಿ ಕೆಲವು ಇಲಾಖೆಯಲ್ಲಿ ಮಾತ್ರ ಕೌನ್ಸೆಲಿಂಗ್ ವರ್ಗಾವಣೆ ವ್ಯವಸ್ಥೆ ಇದ್ದು, ಇದೀಗ ಅಬಕಾರಿ ಇಲಾಖೆಯಲ್ಲಿಯೂ ಕೌನ್ಸೆಲಿಂಗ್ ಮೂಲಕ ಮಾಡಲಾಗುತ್ತದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ: ಸಚಿವ ಎಚ್.ಕೆ.ಪಾಟೀಲ್
ಅಭಿವೃದ್ಧಿಗೆ ಕೇಂದ್ರ ಅಸ್ತು: ಕರ್ನಾಟಕದ ಧಾರವಾಡದಲ್ಲಿರುವ ಐಐಟಿ ಸೇರಿದಂತೆ ಹೊಸದಾಗಿ ಸ್ಥಾಪಿಸಲಾದ 5 ಐಐಟಿಗಳ ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ 4 ವರ್ಷಗಳ ಅವಧಿಗೆ 11.8 ಸಾವಿರ ಕೋಟಿ ರು. ಮೀಸಲಿರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಕೇಂದ್ರವು ಕರ್ನಾಟಕದ ಧಾರವಾಡ, ಆಂಧ್ರ ಪ್ರದೇಶದ ತಿರುಪತಿ, ಕೇರಳದ ಪಾಲಕ್ಕಡ್ , ಛತ್ತೀಸ್‌ಗಢದ ಭಿಲಾಯಿ, ಜಮ್ಮು ಕಾಶ್ಮೀರದ ಜುಮ್ಮು ಐಐಟಿ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಮೀಸಲಿಡಲು ಮುಂದಾಗಿದೆ.
ಈ ಬಗ್ಗೆ ಕೇಂದ್ರ ಅಧಿಕೃತ ಮಾಹಿತಿ ನೀಡಿದ್ದು, ಒಟ್ಟು 11,828 .7 ಕೋಟಿ ರು ಹಣವನ್ನು 2025 -26 ರ ಅವಧಿಯಿಂದ 2028-29ರ ನಾಲ್ಕು ವರ್ಷಗಳ ಅವಧಿಗೆ ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಅಭಿವದ್ಧಿ ವೆಚ್ಚಕ್ಕೆ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದಿದೆ. ಇದರ ಜೊತೆಗೆ ಸಚಿವ ಸಂಪುಟವು ಪ್ರಾಧ್ಯಾಪಕರ ಮಟ್ಟದಲ್ಲಿ 130 ಹೊಸ ಬೋಧಕ ಸಿಬ್ಬಂದಿ ನೇಮಕಕ್ಕೂ ಸಮ್ಮತಿಸಿದೆ. ಇದರ ಜೊತೆಗೆ ಕೇಂದ್ರವು ಮುಂದಿನ ನಾಲ್ಕು ವರ್ಷಗಳಲ್ಲಿ ಈ ಐಐಟಿಗಳಲ್ಲಿ 6500 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಬಗ್ಗೆಯೂ ಗಮನ ವಹಿಸುವುದಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.