ಆಡಳಿತ-ಪ್ರತಿಪಕ್ಷಗಳ ವಾದ-ಪ್ರತಿವಾದಗಳ ನಡುವೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಅನಾವರಣಗೊಂಡ ಮರುದಿನವೇ ಮತ್ತೊಂದು ಪ್ರತಿಮೆ ವಿವಾದ ಭುಗಿಲೆದ್ದಿದೆ.
ಬೆಂಗಳೂರು (ನ.13): ಆಡಳಿತ-ಪ್ರತಿಪಕ್ಷಗಳ ವಾದ-ಪ್ರತಿವಾದಗಳ ನಡುವೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಅನಾವರಣಗೊಂಡ ಮರುದಿನವೇ ಮತ್ತೊಂದು ಪ್ರತಿಮೆ ವಿವಾದ ಭುಗಿಲೆದ್ದಿದೆ. ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸುವುದಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನೀಡಿದ ಹೇಳಿಕೆ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ತನ್ವೀರ್ ಸೇಠ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್ ಬೆಂಬಲಿಸಿದ್ದರೆ, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧಿಸಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರೆ, ಯಾವ ಕಾರಣಕ್ಕೂ ಟಿಪ್ಪು ಪ್ರತಿಮೆ ನಿರ್ಮಿಸಲು ಬಿಡುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಯಾವ ಆಕಾರದಲ್ಲಿ ಟಿಪ್ಪು ಪ್ರತಿಮೆ ಮಾಡಬೇಕೆಂದು ನಿರ್ಧಾರವಾಗಿಲ್ಲ: ತನ್ವೀರ್ ಸೇಠ್
ಟಿಪ್ಪು ಸುಲ್ತಾನ್ ಕೊಡುಗೆ ಏನು?: ರಾಜ್ಯಕ್ಕೆ ಟಿಪ್ಪು ಸುಲ್ತಾನರ ಕೊಡುಗೆ ಏನಿದೆ ಎಂದು ಎಲ್ಲರಿಗೂ ಗೊತ್ತಿದೆ. ಯಾವ ಕಾರಣಕ್ಕೆ ಅವರ ಪ್ರತಿಮೆ ಸ್ಥಾಪಿಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ಅವರು ಶನಿವಾರ ನಗರದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂರ್ತಿ ಪ್ರತಿಷ್ಠಾಪನೆ ಮಾಡಲಿಕ್ಕೆ ಹಲವಾರು ನಿಯಮಗಳಿವೆ ಅದನ್ನು ಗಮನಿಸಬೇಕು. ನಾಡಪ್ರಭು ಕೆಂಪೇಗೌಡ ಅವರ ಮೂರ್ತಿ ಮಾಡಿದ್ದೀವಿ ಅಂತಾ ಟಿಪ್ಪು ಮೂರ್ತಿ ಮಾಡುತ್ತೇವೆ ಎನ್ನುವುದು ಎಷ್ಟು ಸರಿ.
ಮತಾಂಧತೆ, ಬರ್ಬರ ಹತ್ಯೆ, ಇದನ್ನ ಬಿಟ್ಟು ಟಿಪ್ಪು ಕೊಡುಗೆ ಏನು?, ಟಿಪ್ಪುಗೆ ಕೆಂಪೇಗೌಡ ಅವರನ್ನ ಹೋಲಿಸುತ್ತಾರೆ ಅಂದರೆ ಅವರ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತೆ. ಈ ಬಗ್ಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮಾಡಿರುವ ಟೀಕೆಗೂ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರ ವೋಟ್ ಸಲುವಾಗಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡುತ್ತಾರಾ?, ಇವರ ಲೆಕ್ಕ ನೋಡಿದರೆ ಯಾವ ಮೂರ್ತಿಗಳನ್ನ ಮಾಡಲೇ ಬಾರದು, ಇದ್ದ ಮೂರ್ತಿಗಳನ್ನ ತೆಗೆಯಬೇಕಾ, ಹೇಳುವುದಕ್ಕೆ ಇವರಿಗೆ ಏನು ನೈತಿಕತೆ ಇದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಅಧಿಕಾರ ಇಲ್ಲದವರು ಕಿರುಚಾಡುತ್ತಾರೆ ಅನ್ನುತ್ತಾರೆ. ಆದರೆ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಅಧಿಕಾರ ಮಾಡಿದವರಿದ್ದಾರೆ. ಬೆಂಗಳೂರು ಕಟ್ಟಿದ ಕೆಂಪೇಗೌಡ ಅವರಿಗೆ ಆವಾಗಲೇ ಯಾಕೆ ನೆನಪಾಗಲಿಲ್ಲ. ನಾವು ಮಾಡಿದಾಗ ಇವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಅಭೂತಪೂರ್ವ ಜನಬೆಂಬಲ ನೋಡಿ ಹೊಟ್ಟೆಯಲ್ಲಿ ಮೆಣಸಿನಕಾಯಿ ಕಲಸಿದಂತಾಗಿದೆ. ಸರ್ಕಾರದ ದುಡ್ಡಿನಲ್ಲಿ ಪ್ರತಿಮೆ ಮಾಡಿದ್ದೀರಿ ಅಂತಾರೆ, ಮಾಡಿದ್ದರೆ ತಪ್ಪೇನಿದೆ. ಯಾರು ಸ್ವಂತಕ್ಕೆ ಮಾಡಿಲ್ಲ, ನಾಳೆ ಅದು ಆಕರ್ಷಣೀಯ ಸ್ಥಳವಾಗುತ್ತೆ.
ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್ ಮುತಾಲಿಕ್
ಎಲ್ಲ ರಾಜಕಾರಣಿಗಳಿಗೆ ಕೆಂಪೇಗೌಡರು ಮಾದರಿಯಾಗಿದ್ದಾರೆ. ಅವರ ದೂರದೃಷ್ಟಿಯಂತೆ ನಮ್ಮ ಕ್ಷೇತ್ರ, ಊರು ಅಭಿವೃದ್ಧಿ ಮಾಡಬೇಕು ಎನ್ನಿಸುತ್ತೆ. ಇದನ್ನೆಲ್ಲ ಏಕೆ ಕ್ರೀಡಾ ಮನೋಭಾವನೆಯಿಂದ ತೆಗೆದುಕೊಳ್ಳಬಾರದು. ಮಾಜಿ ಪ್ರಧಾನಿ ದೇವೇಗೌಡರನ್ನು ದೂರವಾಣಿಯ ಮೂಲಕ ಸಿಎಂ ಆಹ್ವಾನಿಸಿದ್ದಾರೆ. ಪತ್ರ ಬರೆದಿದ್ದಾರೆ. ಆದರೆ, ಕರೆದಿಲ್ಲ ಅಂತಾ ಸುಳ್ಳು ಹೇಳುತ್ತಿದ್ದಾರೆ. ಪ್ರತಿಯೊಂದರಲ್ಲಿ ರಾಜಕೀಯ ಮಾಡುವುದು ಇವರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.