ಪುಟ್ಟಜಿಲ್ಲೆ ಕೊಡಗಿನಲ್ಲಿ ಮುಂದಿನ ವಿಧಾನಸಭಾ ಚುನಾವಣಾ ತಯಾರಿ ತುಸು ಜೋರಾಗಿಯೇ ನಡೆಯುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು
ಕೊಡಗು (ಡಿ.09): ಪುಟ್ಟಜಿಲ್ಲೆ ಕೊಡಗಿನಲ್ಲಿ ಮುಂದಿನ ವಿಧಾನಸಭಾ ಚುನಾವಣಾ ತಯಾರಿ ತುಸು ಜೋರಾಗಿಯೇ ನಡೆಯುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಜಿಲ್ಲೆಯಲ್ಲಿ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರವಿದ್ದು, ಈ ಎರಡೂ ಕ್ಷೇತ್ರದಲ್ಲೂ ಬಿಜೆಪಿಯ ಶಾಸಕರೇ ಇದ್ದಾರೆ. ಜಿಲ್ಲೆಯಲ್ಲಿ ಐದು ಲಕ್ಷ ಜನಸಂಖ್ಯೆಯಿದೆ. ಆರಂಭದಲ್ಲಿ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಮೂರು ವಿಧಾನಸಭಾ ಕ್ಷೇತ್ರಗಳಿದ್ದವು. ಆದರೆ 2008ರಲ್ಲಿ ಪುನರ್ ವಿಂಗಡಣೆ ಬಳಿಕ ಮಡಿಕೇರಿ ಹಾಗೂ ವಿರಾಜಪೇಟೆ ಎರಡು ವಿಧಾನಸಭಾ ಕ್ಷೇತ್ರಗಳಾಗಿವೆ.
undefined
1.ಮಡಿಕೇರಿ ಕ್ಷೇತ್ರ: ಟಿಕೆಟ್‌ಗೆ ಭಾರೀ ಪೈಪೋಟಿ
ಮಡಿಕೇರಿ ವಿಧಾನಸಭಾ ಕ್ಷೇತ್ರ ಕಳೆದ ಮೂರು ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯನ್ನೇ ಆರಿಸಿ ಕಳುಹಿಸಿದೆ. ಕ್ಷೇತ್ರದಿಂದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸತತ ಮೂರು ಬಾರಿ ಗೆಲವು ಸಾಧಿಸಿದ್ದಾರೆ. ಈ ಬಾರಿಯೂ ಅಪ್ಪಚ್ಚು ರಂಜನ್ ಸ್ಪರ್ಧಿಸಲು ಉತ್ಸುಕತೆ ತೋರಿದ್ದಾರೆ. ಇನ್ನು ಜಿ.ಪಂ. ಮಾಜಿ ಸದಸ್ಯ ಭಾರತೀಶ್, ದೀಪಕ್ ಕೂಡ ಈ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ದೊಡ್ಡಪಟ್ಟಿಯೇ ಇದೆ. ಮಾಜಿ ಸಚಿವ ಹಾಗೂ ಈ ಹಿಂದೆ ಜೆಡಿಎಸ್‌ನಲ್ಲಿದ್ದ ಬಿ.ಎ.ಜೀವಿಜಯ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಟಿಕೆಟ್ ಆಕಾಂಕ್ಷಿ.
Ticket Fight: ಬೀದರ್ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್
ಮಾಜಿ ಸಚಿವ ಹಾಸನದ ಎ.ಮಂಜು ಅವರ ಪುತ್ರ ಮಂತರ್ ಗೌಡ ಕೂಡ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದು, ತಮ್ಮ ಕ್ಷೇತ್ರದಲ್ಲಿ ಈಗಾಗಲೇ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ನಡೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ಹಿರಿಯ ವಕೀಲ ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಕೂಡ ಕಾಂಗ್ರೆಸ್ ಆಕಾಂಕ್ಷಿ. ಜೆಡಿಎಸ್ ಪಕ್ಷದಲ್ಲಿ ನಾಪಂಡ ಮುತ್ತಪ್ಪ ಈಗಾಗಲೇ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಇದರ ನಡುವೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ಕೂಡ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಮತದಾರರು ನಿರ್ಣಾಯಕರು.
2.ವಿರಾಜಪೇಟೆ: ಹೊಸಮುಖದ ಕೂಗು
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಕೂಡ ಬಿಜೆಪಿಯ ಭದ್ರಕೋಟೆ. ಕ್ಷೇತ್ರದಿಂದ 2008ರಿಂದ ಸತತವಾಗಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಹೊಸಬರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಬಿಜೆಪಿಯಲ್ಲೇ ಕೇಳಿ ಬರುತ್ತಿವೆ. ಬಿಜೆಪಿಯಿಂದ ಹಲವು ಮಂದಿ ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳಿದ್ದು, ಟಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ. ಪಶ್ಚಿಮಘಟ್ಟಸಂರಕ್ಷಣೆ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಆರೆಸ್ಸೆಸ್ ಹಿನ್ನೆಲೆಯುಳ್ಳವರಾಗಿದ್ದು, ತಾನು ವಿರಾಜಪೇಟೆ ಟಿಕೆಟ್ ಆಕಾಂಕ್ಷಿ ಎಂಬುದನ್ನು ಈಗಾಗಲೇ ಹೇಳಿಕೊಂಡಿದ್ದಾರೆ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಸೇರಿ ಪ್ರಮುಖರಾದ ರೀನಾ ಪ್ರಕಾಶ್, ಮನು ಮುತ್ತಪ್ಪ, ಮಾಚಿಮಾಡ ರವೀಂದ್ರ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ.
ಹೈಕಮಾಂಡ್ ಹಾಲಿ ಶಾಸಕರಿಗೆ ಮಣೆ ಹಾಕುತ್ತದೆಯೋ ಅಥವಾ ಹೊಸಬರಿಗೆ ಅವಕಾಶ ನೀಡುತ್ತದೆಯೇ ಎಂಬುದು ಮಾತ್ರ ಇನ್ನೂ ಗೌಪ್ಯ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಪ್ರಬಲ ಆಕಾಂಕ್ಷಿ. ಕೆ.ಪಿ.ಸಿ.ಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಮಾಜಿ ಸಚಿವ ಸೀತಾರಾಂ ಅವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಕೂಡ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಸಂಕೇತ್ ಪೂವಯ್ಯ ಈ ಬಾರಿ ಅಭ್ಯರ್ಥಿಯಾಗಲು ಉತ್ಸಾಹ ತೋರುತ್ತಿಲ್ಲ. ಜೆಡಿಎಸ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಗಣೇಶ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವರ ಮತಗಳೇ ನಿರ್ಣಾಯಕ.
Ticket Fight: ಕುತೂಹಲ ಮೂಡಿಸಿರುವ ಯಾದಗಿರಿ ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿ
ಹಾಲಿ ಬಲಾಬಲ
ಕ್ಷೇತ್ರ 2
ಬಿಜೆಪಿ 2
ಕಾಂಗ್ರೆಸ್ 0
ಜೆಡಿಎಸ್ 0