Ticket fight: ಅನಂತ್‌ ಸುತ್ತಲೇ ಗಿರಕಿ ಹೊಡೆಯುತ್ತಿರುವ ಬಿಜೆಪಿ ಟಿಕೆಟ್!

By Kannadaprabha News  |  First Published Jan 18, 2024, 3:38 PM IST

ನಾಲ್ಕೂವರೆ ವರ್ಷಗಳ ಕಾಲ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಸಂಸದ ಅನಂತಕುಮಾರ ಹೆಗಡೆ ಈಚೆಗೆ ಹಠಾತ್ತಾಗಿ ಕಾಣಿಸಿಕೊಂಡು ಎಲ್ಲೆಡೆ ಮಿಂಚಿನಂತೆ ಸಂಚರಿಸುತ್ತಿರುವುದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ. ಬಿಜೆಪಿಯ ಟಿಕೆಟ್ ಹಂಚಿಕೆ ಅನಂತಕುಮಾರ ಹೆಗಡೆ ಸುತ್ತಲೇ ಗಿರಕಿ ಹೊಡೆಯುತ್ತಿದೆ.


ವಸಂತಕುಮಾರ್ ಕತಗಾಲ

ಕಾರವಾರ (ಜ.18): ನಾಲ್ಕೂವರೆ ವರ್ಷಗಳ ಕಾಲ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಸಂಸದ ಅನಂತಕುಮಾರ ಹೆಗಡೆ ಈಚೆಗೆ ಹಠಾತ್ತಾಗಿ ಕಾಣಿಸಿಕೊಂಡು ಎಲ್ಲೆಡೆ ಮಿಂಚಿನಂತೆ ಸಂಚರಿಸುತ್ತಿರುವುದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ. ಬಿಜೆಪಿಯ ಟಿಕೆಟ್ ಹಂಚಿಕೆ ಅನಂತಕುಮಾರ ಹೆಗಡೆ ಸುತ್ತಲೇ ಗಿರಕಿ ಹೊಡೆಯುತ್ತಿದೆ.

Latest Videos

undefined

ಹೆಗಡೆಯವರು ರಾಜಕೀಯದ ಬಗ್ಗೆ ನಿರಾಸಕ್ತಿ ವಹಿಸಿ ಅಂತರ ಕಾಯ್ದುಕೊಂಡಿದ್ದರು. ರಾಜಕಾರಣದ ಬಗ್ಗೆ ನಿರ್ಲಿಪ್ತರಾಗಿ ರಾಜಕೀಯದಿಂದಲೇ ನಿವೃತ್ತಿ ಹೊಂದುವ ಮಾತುಗಳನ್ನು ಆತ್ಮೀಯರ ಬಳಿ ಹೇಳಿಕೊಂಡಿದ್ದರು. ಇದರಿಂದ ಬಿಜೆಪಿಯಲ್ಲಿ ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆ ಚಿಗುರಿತು. ಅನಂತಕುಮಾರ ಹೆಗಡೆ ಸ್ಪರ್ಧಿಸದೆ ಇದ್ದರೆ ಆಕಾಂಕ್ಷಿಗಳ ಸಂಖ್ಯೆ ದೊಡ್ಡದೇ ಇದೆ. ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ರೂಪಾಲಿ ನಾಯ್ಕ, ಡಾ.ಜಿ.ಜಿ.ಹೆಗಡೆ, ಅನಂತಮೂರ್ತಿ ಹೆಗಡೆ, ನಾಗರಾಜ ನಾಯಕ.....ಹೀಗೆ ಟಿಕೆಟ್ ರೇಸ್‌ನಲ್ಲಿ ಹಲವರಿದ್ದಾರೆ.

 

ಲೋಕಸಭೆ ಚುನಾವಣೆ ಟಿಕೆಟ್‌ ಫೈಟ್‌: ಕೋಲಾರ ಟಿಕೆಟ್‌ ಮುನಿಯಪ್ಪಗೋ ಅಥವಾ ಪುತ್ರ, ಅಳಿಯ

ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಆಗಿರುವುದರಿಂದ ಜೆಡಿಎಸ್‌ಗೆ ಏನಾದರೂ ಉತ್ತರ ಕನ್ನಡ ಕ್ಷೇತ್ರ ಬಿಟ್ಟುಕೊಟ್ಟಲ್ಲಿ ಮಾಜಿ ಸಚಿವ ಆನಂದ ಅಸ್ನೋಟಿಕರ್, ಸೂರಜ್ ನಾಯ್ಕ ಸೋನಿ ಚುನಾವಣಾ ಕಣಕ್ಕಿಳಿಯಲು ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ, ಬಿಜೆಪಿ ಪ್ರಬಲವಾಗಿರುವ ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇಲ್ಲ.

ಅನಂತಕುಮಾರ ಹೆಗಡೆ ಈಗ ಪ್ರತಿ ತಾಲೂಕಿಗೆ ಹೋಗಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಈ ಮಧ್ಯೆ, ಹಠಾತ್ತಾಗಿ ಮುನ್ನೆಲೆಗೆ ಬಂದ ಹೆಗಡೆ ಅವರನ್ನು ಇಷ್ಟು ದಿನ ಯಾವುದೇ ಆಗು-ಹೋಗುಗಳಿಗೆ ಸ್ಪಂದಿಸದೆ ಈಗ ಏಕಾಏಕಿ ಚುನಾವಣೆ ಸಂದರ್ಭದಲ್ಲಿ ಚುರುಕಾಗಿದ್ದನ್ನು ಕೆಲವರು ಪ್ರಶ್ನಿಸಿದ ಘಟನೆಯೂ ನಡೆದಿದೆ. ಅದಾಗಿ, ಅವರು ಮಸೀದಿಗಳನ್ನು ಒಡೆಯುವ ಬಗ್ಗೆ ವಿವಾದಿತ ಹೇಳಿಕೆ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪಕ್ಷ ಟಿಕೆಟ್ ನೀಡಲಿದೆಯೇ, ಇಲ್ಲವೇ ಎನ್ನುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹೆಗಡೆ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಬಿಜೆಪಿಯಲ್ಲಿ ಪರ-ವಿರೋಧ ಎರಡೂ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನು, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಅಂತಹ ಪೈಪೋಟಿಯೇ ಕಾಣಿಸುತ್ತಿಲ್ಲ. ಹಾಲಿ ಶಾಸಕರು ಸ್ಪರ್ಧೆಗೆ ಉತ್ಸುಕರಾಗಿಲ್ಲ. ವರಿಷ್ಠರು ಹೇಳಿದರೆ ಲೋಕಸಭೆಗೆ ಸ್ಪರ್ಧಿಸಲು ಸಿದ್ಧ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರಾದರೂ, ಅವರಲ್ಲಿ ಅಂತಹ ಉತ್ಸಾಹ ಕಂಡುಬರುತ್ತಿಲ್ಲ. ಇನ್ನು, ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಎ.ರವೀಂದ್ರ ನಾಯ್ಕ, ನ್ಯಾಯವಾದಿ ಜಿ.ಟಿ.ನಾಯ್ಕ ಹೆಸರು ಮುಂಚೂಣಿಯಲ್ಲಿದೆ. ಬೆಳಗಾವಿಯ ಅಂಜಲಿ ನಿಂಬಾಳ್ಕರ್ ಹೆಸರು ಕೇಳಿಬಂದರೂ ಅವರು ಕ್ಷೇತ್ರದಲ್ಲಿ ಪರಿಚಿತರಲ್ಲದೆ ಇರುವುದರಿಂದ ಜಿಲ್ಲೆಯ ಬಹುಸಂಖ್ಯಾತರಾದ ನಾಮಧಾರಿ ಸಮಾಜಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಬಿಜೆಪಿಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಇದ್ದರೂ ಅದಕ್ಕಿನ್ನೂ ರೆಕ್ಕೆಪುಕ್ಕ ಬಂದಿಲ್ಲ.

 

ಮಂಡ್ಯ ಲೋಕಸಭೆ ಜೆಡಿಎಸ್ ಪಾಲು? ಬಿಜೆಪಿ ನಿರ್ಧಾರಕ್ಕೆ ಸುಮಲತಾ ಕಂಗಾಲು!

ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರಿದ್ದಾರೆ. ಬಿಜೆಪಿಯಿಂದ ಇಬ್ಬರು ಶಾಸಕರಿದ್ದರೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ.

click me!