
ಬೆಂಗಳೂರು[ಮಾ.11]: ಸಮಾಜದ ಎಲ್ಲ ಕ್ಷೇತ್ರಗಳು ಕಲುಷಿತಗೊಂಡಿವೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ತಮ್ಮ ವ್ಯಾಪ್ತಿ ಅರಿತುಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶಾಸಕಾಂಗ (ಜನಪ್ರತಿನಿಧಿಗಳು)ದ ಮೇಲೆ ಯಾರು ಬೇಕಾದರೂ ಟೀಕೆ, ಪ್ರಹಾರ ಮಾಡುವಂತಹ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಕಾನೂನು, ನಿಯಮದ ಪ್ರಕಾರ ಕೆಲಸ ಮಾಡಬೇಕಾದ ಕಾರ್ಯಾಂಗವನ್ನು ಸಹ ನಾವು ಹೇಳಿದಂತೆ ಕೇಳುವ ಸ್ಥಿತಿಗೆ ತಂದುಬಿಟ್ಟಿದ್ದೇವೆ. ಕಾರ್ಯಾಂಗ ಸಹ ನಮ್ಮ ತಾಳಕ್ಕೆ ತಕ್ಕಂತೆ ಕುಣಿಯತ್ತಿದೆ. ನ್ಯಾಯಾಂಗ ಸಹ ಅಧಿಕಾರ ಚಲಾಯಿಸುವ, ಪರಿಶೀಲಿಸುವ ಕಾರ್ಯಾಂಗದ ಕೆಲಸವನ್ನು ಮಾಡುವಂತಹ ಸ್ಥಿತಿಗೆ ಬಂದಿದೆ ಎಂದು ವಿಷಾದಿಸಿದರು.
ಬಜೆಟ್ ಅಧಿವೇಶನದಲ್ಲಿ ಏನೇನು ನಡೀತಿದೆ? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಂವಿಧಾನದ ಮೇಲೆ ಮಂಗಳವಾರದಿಂದ ಆರಂಭವಾದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಾವೆಲ್ಲರೂ ಆತ್ಮಾವಲೋಕನÜ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಸಂವಿಧಾನದ ಆಶಯ, ಹಕ್ಕು, ಕರ್ತವ್ಯ, ಸಮಾಜದ ಕಟ್ಟಕಡೆಯ ಮನುಷ್ಯನ ಬಗ್ಗೆ ಕಾಳಜಿ ಇಟ್ಟುಕೊಂಡು ನಾವೆಲ್ಲ ಹೋಗುತ್ತಿದ್ದೇವೆಯೇ ಎಂದು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಕಾನೂನು ಮಾಡುವವರು ನಾವು (ಶಾಸಕಾಂಗ). ಅಂತಹ ಕಾನೂನು ಮಾಡುವಾಗ ಅದು ರಾಷ್ಟ್ರದ ಹಿತಾಸಕ್ತಿ, ಮಹಿಳೆ, ಮಕ್ಕಳ ಅಭಿವೃದ್ಧಿಯ ದೃಷ್ಟಿಯಿಂದ ಕೂಡಿರಬೇಕು. ಅಬಲರನ್ನು ಮೇಲಕ್ಕೆ ತರುವ ಕೆಲಸ ಆಗಬೇಕು. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಮೇಲಕ್ಕೆ ತರುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಾವು ರೂಪಿಸುವ ಕಾನೂನು ಕೊನೆಯ ಹಂತಕ್ಕೆ ತಲುಪದಿದ್ದರೆ, ಸಂವಿಧಾನದ ಆಶಯಕ್ಕೆ ಧಕ್ಕೆ ತಂದಂತಾಗುತ್ತದೆ ಎಂದರು.
ಇಂದು ಎಲ್ಲರೂ ಅಧಿಕಾರ ಚಲಾಯಿಸಲು ಹೊರಟಿದ್ದಾರೆ, ದೇಶದ ಅಥವಾ ರಾಜ್ಯದ ನಾಯಕತ್ವವನ್ನೇ ಟೊಳ್ಳು ಮಾಡಲು ಹೊರಟಿದ್ದೇವೆ. ಜನಪ್ರತಿನಿಧಿಗಳ ವಿರುದ್ಧ ಎಲ್ಲರೂ ಟೀಕೆ, ಪ್ರಹಾರ ಮಾಡುವವರೇ. ನಾವೇನು ಪಾಪ ಮಾಡಿ ಇಲ್ಲಿಗೆ ಬಂದಿದ್ದೇವೆ ಎಂದು ಅನಿಸುತ್ತಿದೆ. 60ರ ದಶಕದಲ್ಲಿ ರಾಜಕಾರಣಕ್ಕೆ ಬರುವುದು ಗೌರವದ ವಿಷಯವಾಗಿತ್ತು. ಆದರೆ ಈಗ ಸ್ವಜನ ಪಕ್ಷಪಾತ, ಬೇಗ ಮೇಲಕ್ಕೆ ಬರಬೇಕು ಎಂಬ ದುರಾಸೆ ಜಾಸ್ತಿಯಾಗಿದೆ ಎಂದರು.
ನ್ಯಾಯಾಂಗ ಕೂಡಾ ಇತ್ತೀಚೆಗೆ ಅನೇಕ ಸಂದರ್ಭದಲ್ಲಿ ಅಧಿಕಾರ ಚಲಾಯಿಸತೊಡಗಿದೆ. ಕಾನೂನು ವಿಶ್ಲೇಷಣೆ ಮಾಡುವ ಬದಲು, ನ್ಯಾಯಾಧೀಶರೇ ಸಮೀಕ್ಷೆ ಮಾಡುವಂತಹ ಸ್ಥಿತಿ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮೂರು ಅಂಗಗಳ ಬಗ್ಗೆ ಚರ್ಚಿಸುವ ಜೊತೆಗೆ ಕಟ್ಟಕಡೆಯ ಮನುಷ್ಯನಿಗೂ ಎಲ್ಲ ಸೌಲಭ್ಯ ಸಿಗಲು ನಾವೇನು ಮಾಡಬೇಕು ಎಂಬ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು ಎಂದರು.
(ಬಾಕ್ಸ್)
ನ್ಯಾಯಾಂಗದ ಕಾರ್ಯವೈಖರಿ ಬಗ್ಗೆ ಟೀಕೆ
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನ್ಯಾಯಾಂಗದ ಬಗ್ಗೆ ಮಾತನಾಡುವಾಗ ಪಕ್ಷಭೇದ ಮರೆತು ಸದಸ್ಯರು ನ್ಯಾಯಾಂಗವೂ ಕಾರ್ಯಾಂಗ ಹಾಗೂ ಶಾಸಕಾಂಗದ ಮೇಲೆ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದರು. ಜೆಡಿಎಸ್ ಸದಸ್ಯ ಬೋಜೇಗೌಡ ಅವರು, ಇತ್ತೀಚೆಗೆ ಕೋರ್ಟ್ ಬಿಬಿಎಂಪಿಗೆ 24 ಗಂಟೆಗಳಲ್ಲಿ ರಸ್ತೆಯ ಎಲ್ಲ ಗುಂಡಿಗಳನ್ನು ಮುಚ್ಚಬೇಕೆಂದು ಆದೇಶಿಸುತ್ತದೆ. ಇದು ಸಾಧ್ಯವೇ? ಅವರು ಸಹ ಅಷ್ಟೇ ತ್ವರಿತವಾಗಿ ನ್ಯಾಯ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು. ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಕಾನೂನು ಮಾಡುವವರು ಕೆಂಪು ಕಟ್ಟಡದವರಾ, ಕಲ್ಲಿನ ಕಟ್ಟಡದವರಾ ಎಂಬ ಅನುಮಾನ ಶುರುವಾಗಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ 15 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ. ಹೀಗಿರುವಾಗ ನ್ಯಾಯಾಂಗ ತನ್ನ ಕೆಲಸವನ್ನು ಮಾಡುತ್ತಿದೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ ಎಂದರು.
ಕಾಂಗ್ರೆಸ್‌ನ ರಘು ಆಚಾರ್, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ನೇತೃತ್ವದ ಅರೆ ನ್ಯಾಯ ವ್ಯವಸ್ಥೆಗಳ ಮುಂದೆ ಇರುವ ಪ್ರಕರಣಗಳು ಐದಾರು ವರ್ಷವಾದರೂ ಇತ್ಯರ್ಥವಾಗುವುದಿಲ್ಲ, ದುಡ್ಡು ಕೊಟ್ಟರೆ ಬೇಗ ಇತ್ಯರ್ಥವಾಗುತ್ತದೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.