ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ನೀಡಿದ ಅಶ್ಲೀಲ ಹೇಳಿಕೆಯು ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು.
ಬೆಂಗಳೂರು [ಮಾ.11]: ಅನರ್ಹತೆ ಕುರಿತ ತೀರ್ಪಿನ ಬಗ್ಗೆ ಪ್ರಸ್ತಾಪ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ನೀಡಿದ ಅಶ್ಲೀಲ ಹೇಳಿಕೆಯು ಮಂಗಳವಾರ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು.
ರಮೇಶ್‌ಕುಮಾರ್ ಮತ್ತು ಡಾ.ಕೆ.ಸುಧಾಕರ್ ನಡುವೆ ಏಕವಚನದಲ್ಲಿ ವೈಯಕ್ತಿಕ ನಿಂದನೆ ಹಾಗೂ ಜಟಾಪಟಿಯಿಂದ ತೀವ್ರ ಕೋಲಾಹಲ ಸೃಷ್ಟಿಯಾಯಿತು.ಸಭಾಧ್ಯಕ್ಷರಾಗಿದ್ದ ವೇಳೆ ಪಕ್ಷಾಂತರಗೊಂಡ ಶಾಸಕರ ಬಗ್ಗೆ ನೀಡಿದ ತೀರ್ಪಿನ ಪ್ರಸ್ತಾಪಕ್ಕೆ ಆವೇಶಭರಿತರಾಗಿ ರಮೇಶ್‌ಕುಮಾರ್ ಸದನದಲ್ಲಿ ನೀಡಿದ ಅಶ್ಲೀಲ ಹೇಳಿಕೆಯು ಸುಧಾಕರ್ ಅವರನ್ನು ಕೆರಳಿಸಿತು.
ಇಬ್ಬರ ನಡುವೆ ವೈಯಕ್ತಿಕವಾಗಿ ಏಕವಚನದಲ್ಲಿ ನಿಂದನೆ ನಡೆದಾಗ ಆಕ್ರೋಶಗೊಂಡ ರಮೇಶ್ ಕುಮಾರ್ ಅವರು ಸಭಾಧ್ಯಕ್ಷರ ಪೀಠದ ಮುಂದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಮಿತಿಮೀರಿದ ಪರಿಣಾಮ ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು ಆದರೆ, ಐದು ನಿಮಿಷಗಳ ಬಳಿಕ ಆರಂಭವಾಗಬೇಕಿದ್ದ ಕಲಾಪವು ಒಂದು ತಾಸಿಗಿಂತ ಹೆಚ್ಚಿನ ಅವಧಿಯ ಬಳಿಕ ಕಲಾಪ ಆರಂಭಗೊಂಡಾಗ ವಾಕ್ಸಮರ ಮುಂದುವರಿಯಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಕುರಿತು ಚರ್ಚಿಸಲು ಮುಂದಾದರು. ಸಿದ್ದರಾಮಯ್ಯ ಮಾತಿಗೂ ಅವಕಾಶ ನೀಡದ ಬಿಜೆಪಿ ಸದಸ್ಯರು, ರಮೇಶ್ ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ಬುಧವಾರ ಮುಂದೂಡಿದರು.
ಸಂಘರ್ಷಕ್ಕೆ ಕಾರಣ ಏನು: ಸಂವಿಧಾನ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಒಂದು ಹಂತದಲ್ಲಿ ಪಕ್ಷಾಂತರಗೊಂಡ ವೇಳೆ ತಮ್ಮ ಶಾಸಕತ್ವವನ್ನು ಅನರ್ಹತೆಗೊಳಿಸಿದ ವಿಚಾರವನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಹಲವು ಸಂವಿಧಾನಬದ್ಧ ಪೀಠಗಳಿವೆ. ಈ ಪೈಕಿ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಪೀಠವು ಸೇರಿದೆ. ಆ ಪೀಠದಿಂದ ಅನ್ಯಾಯವಾಗಿದ್ದು, ಅನ್ಯಾಯಕ್ಕೊಳಗಾ ದವರಲ್ಲಿ ನಾನೂ ಒಬ್ಬ ಎಂದು ಹೇಳಿದರು. ಈ ವೇಳೆ ಸಭಾಧ್ಯಕ್ಷ ಪೀಠದಲ್ಲಿದ್ದ ಶಿವಾನಂದ ಪಾಟೀಲ್ ಅವರು ಪೀಠದ ವಿಷಯಕ್ಕೆ ಯಾಕೆ ಹೋಗುತ್ತೀರಿ, ನ್ಯಾಯಾಲಯಕ್ಕೆ ಹೋಗಿದ್ದೀರಲ್ಲ. ಆ ವಿಚಾರದ ಚರ್ಚೆ ಬೇಡ ಎಂದು ಕಿವಿಮಾತು ಹೇಳಿದರು.
ಆದರೂ ಅದನ್ನು ಪರಿಗಣಿಸದೆ ಮಾತು ಮುಂದುವರಿಸಿದ ಸುಧಾಕರ್ ಅವರು, ಸುಪ್ರೀಂಕೋರ್ಟ್‌ನ ತೀರ್ಪುನ್ನು ಪ್ರಸ್ತಾಪಿಸಿದರು. ನ್ಯಾಯಾಲಯವು ತಮ್ಮ ಪರ ತೀರ್ಪು ನೀಡದಿದ್ದರೆ 17 ಮಂದಿಯ ಜೀವನ ಹಾಳಾಗುತ್ತಿತ್ತು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇತ್ತು. 8 ತಿಂಗಳು ಅಜ್ಞಾತವಾಸ ಅನುಭವಿಸಿದ್ದೇವೆ ಎಂದು ಹೇಳಿದರು.
ಮಾಜಿ ಸ್ಪೀಕರ್‌ಗೆ ತಲೆ ಕೆಟ್ಟಿದೆ, ಒದ್ದು ಜೈಲಿಗೆ ಹಾಕಿ ಎಂದ ಹಳ್ಳಿಹಕ್ಕಿ...
ಇದಕ್ಕೆ ಕಾಂಗ್ರೆಸ್ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್ ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಪಕ್ಷದ ಮೊಗಸಾಲೆಗೆ ತೆರಳಿದ್ದ ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್ ಅವರು ತಾವು ನೀಡಿರುವ ತೀರ್ಪಿನ ಬಗ್ಗೆ ಚರ್ಚೆಯಾಗುತ್ತಿರುವುದನ್ನು ಆಲಿಸಿ ಸದನಗೊಳಗೆ ಬಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಹಿಂದೆ ನೀಡಿದ ತೀರ್ಪಿನ ಬಗ್ಗೆ ಚರ್ಚೆಯಾಗಬೇಕೇ? ಕಾನೂನು ಸಚಿವರೇ ಹೇಳಿ ಚರ್ಚೆ ನಡೆಯಬೇಕಾ ಎಂದು ಸರ್ಕಾರ ಮತ್ತು ಸುಧಾಕರ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸುಧಾರಕರ್ ಅವರು ಸಹ ಪ್ರತಿಯಾಗಿ ಏಕವಚನದಲ್ಲಿ ಕಿಡಿಕಾರಿದರು. ಈ ವೇಳೆ ಆವೇಶಕ್ಕೊಳಗಾದ ರಮೇಶ್‌ಕುಮಾರ್ ಅವರು ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಶ್ಲೀಲ ಪದ ಬಳಕೆ ಮಾಡಿದರು. ಇದರಿಂದ ಕುಪಿತಗೊಂಡ ಸುಧಾಕರ್ ಅವರು ‘ನೀನೊಬ್ಬ ನಾಟಕಕಾರ.. ನಿನ್ನಂಥವನನ್ನು ನೋಡಿದ್ದೇನೆ..’ ಎಂದು ವಾಗ್ದಾಳಿ ನಡೆಸಿದರು. ಸುಧಾಕರ್ ವರ್ತನೆಗೆ ಕೋಪಗೊಂಡ ರಮೇಶ್ ಕುಮಾರ್ ಧರಣಿಗಿಳಿದರು. ಈ ಸಂಬಂಧ ಕೋಲಾಹಲ ತೀವ್ರಗೊಂಡಾಗ ಸದನ ಮುಂದೂಡಲಾಯಿತು.