ಇದು ನನ್ನ ನಾಯಕತ್ವ ರೂಪಿಸುವ ಪ್ರವಾಸ ಅಲ್ಲ: ನಿಖಿಲ್ ಕುಮಾರಸ್ವಾಮಿ ಮುಖಾಮುಖಿ ಸಂದರ್ಶನ

Kannadaprabha News   | Kannada Prabha
Published : Jun 19, 2025, 05:20 AM IST
Nikhil kumaraswamy

ಸಾರಾಂಶ

ನಿಖಿಲ್‌ ಈಗಾಗಲೇ ಮೂರು ಚುನಾವಣೆ ಎದುರಿಸಿ ಸೋಲುಂಡಿದ್ದರೂ ಎದೆಗುಂದದೆ ಪಕ್ಷ ಸಂಘಟನೆ ಬಗ್ಗೆ ತಮ್ಮದೇ ಆದ ಕನಸು, ಕಲ್ಪನೆ ಹೊಂದಿದ್ದಾರೆ. ಅದನ್ನು ಸಾಕಾರಗೊಳಿಸುವತ್ತ ದೃಢ ಹೆಜ್ಜೆಯನ್ನೂ ಇಟ್ಟಿದ್ದಾರೆ.

ವಿಜಯ್ ಮಲಗಿಹಾಳ

ಬೆಂಗಳೂರು (ಜೂ.19): ರಾಜ್ಯ ರಾಜಕಾರಣದಲ್ಲಿ ತೃತೀಯ ಶಕ್ತಿಯಾಗಿ ಗುರುತಿಸಿಕೊಂಡಿರುವ ಜೆಡಿಎಸ್‌ನ ಚುಕ್ಕಾಣಿ ಹಿಡಿಯಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರು ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಎಂಬಂತೆ ಹಾಲಿ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಸುದೀರ್ಘ 58 ದಿನಗಳ ಸಂಘಟನಾ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ನಿಖಿಲ್‌ ಈಗಾಗಲೇ ಮೂರು ಚುನಾವಣೆ ಎದುರಿಸಿ ಸೋಲುಂಡಿದ್ದರೂ ಎದೆಗುಂದದೆ ಪಕ್ಷ ಸಂಘಟನೆ ಬಗ್ಗೆ ತಮ್ಮದೇ ಆದ ಕನಸು, ಕಲ್ಪನೆ ಹೊಂದಿದ್ದಾರೆ. ಅದನ್ನು ಸಾಕಾರಗೊಳಿಸುವತ್ತ ದೃಢ ಹೆಜ್ಜೆಯನ್ನೂ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...

* ದೋಸ್ತಿಗಳಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆಯಲ್ಲ?
ಎರಡೂ ಬೇರೆ ಬೇರೆ ರಾಜಕೀಯ ಪಕ್ಷಗಳು. ಪಕ್ಷದ ಸಿದ್ಧಾಂತ ಹಾಗೂ ವಿಚಾರಗಳು ಬೇರೆ ಇರುತ್ತವೆ. ಹಲವು ಬಾರಿ ಒಟ್ಟಿಗೆ ಹೋರಾಟ ಮಾಡಿದ್ದೇವೆ. ಕೆಲ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಹೋರಾಟ ಮಾಡಬೇಕಾಗುತ್ತದೆ. ಮೈತ್ರಿಯಾದ ಮಾತ್ರಕ್ಕೆ ಎಲ್ಲಾ ಹೋರಾಟಗಳನ್ನು ಒಟ್ಟಿಗೆ ಮಾಡಬೇಕು ಎಂದೇನಿಲ್ಲ. ನಾವು ಎನ್‌ಡಿಎ ಮೈತ್ರಿ ಕೂಟದ ಒಂದು ಭಾಗವಾಗಿದ್ದೇವೆ. ಈ ಕೂಟದಲ್ಲಿ ಹಲವು ಪಕ್ಷಗಳು ಇವೆ. ಪ್ರತ್ಯೇಕ ಹೋರಾಟ ಮಾಡಿದ ಮಾತ್ರಕ್ಕೆ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬುದು ಸರಿಯಲ್ಲ. ಅಗತ್ಯ ಬಿದ್ದಾಗ ಎರಡೂ ಪಕ್ಷಗಳು ಸೇರಿ ಹೋರಾಟ ಮಾಡುತ್ತೇವೆ. ನಮ್ಮ ಮೈತ್ರಿ ಗಟ್ಟಿಯಾಗಿದೆ.

* ಯಾವುದೇ ಚುನಾವಣೆ ಸಮೀಪದಲ್ಲಿಲ್ಲದಿದ್ದರೂ ನೀವು ದಿಢೀರ್‌ ರಾಜ್ಯ ಪ್ರವಾಸ ಕೈಗೊಂಡಿದ್ದೀರಲ್ಲ?
ನನ್ನ ಈ ರಾಜ್ಯ ಪ್ರವಾಸದ ಮುಖ್ಯ ಉದ್ದೇಶ ಪಕ್ಷ ಸಂಘಟನೆ. ಇದನ್ನು ಪಕ್ಷದ ಅಧ್ಯಯನ ಪ್ರವಾಸ ಎಂದೂ ಕರೆಯಬಹುದು. ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷವಿದೆ. ಹೀಗಾಗಿ ಕ್ಷೇತ್ರಗಳಲ್ಲಿ ವಾಸ್ತವ ಸ್ಥಿತಿ ಏನಿದೆ, ಪಕ್ಷದ ಅಭ್ಯರ್ಥಿಗಳು ಜನರೊಂದಿಗೆ ಹೇಗೆ ಬೆರೆಯುತ್ತಿದ್ದಾರೆ ಇತ್ಯಾದಿ ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದು ಈ ಪ್ರವಾಸದ ಪ್ರಮುಖಾಂಶಗಳಲ್ಲಿ ಒಂದು. ಜೆಡಿಎಸ್‌ ಪಕ್ಷವು ಶೇ.30ರಷ್ಟು ವೋಟ್‌ ಷೇರಿಂಗ್‌ ಹೊಂದಿದೆ. ಇದೇನು ಕಡಿಮೆ ಅಲ್ಲ. ಸಾಮಾನ್ಯವಾಗಿ ನಮ್ಮ ಪಕ್ಷ 40 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದೆ. ಗೆಲ್ಲುವಂಥ 15-20 ಸ್ಥಾನಗಳಲ್ಲಿ ಸೋಲಾಗುತ್ತಿದೆ. ಇದಕ್ಕೆ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳುವ ಅಗತ್ಯವಿದೆ. ಇಷ್ಟು ದಿನ ಚುನಾವಣೆಯ ಕೊನೆಯ ಕ್ಷಣ ಅಥವಾ ಒಂದು ವರ್ಷ ಇದ್ದಾಗ ಪ್ರವಾಸ ಶುರು ಮಾಡಲಾಗುತ್ತಿತ್ತು. ಅಲ್ಪ ಸಮಯದಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಇರುವಾಗಲೇ ಪ್ರವಾಸ ಆರಂಭಿಸಿದ್ದೇನೆ. ಇದೊಂದು ರೀತಿ ಪ್ರಾಥಮಿಕ ಪ್ರವಾಸ. ಇನ್ನು ಮುಂದೆ ಇಂತಹ ಪ್ರವಾಸಗಳು ಹೆಚ್ಚಾಗಲಿವೆ.

* ಈ ರಾಜ್ಯ ಪ್ರವಾಸದ ಅಂಗವಾಗಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ನೀವು ಏನು ಮಾಡುತ್ತೀರಿ?
ಪಕ್ಷ ಸಂಘಟನೆ ದೃಷ್ಟಿಯಿಂದ ಸ್ಥಳೀಯ ಮುಖಂಡರು ಹಾಗೂ ಪದಾಧಿಕಾರಿಗಳಿಗೆ ಟಾಸ್ಕ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಆ ಟಾಸ್ಕ್‌ಗಳ ಅನುಷ್ಠಾನದ ಬಗ್ಗೆ ಫಾಲೋ ಅಪ್‌ ಮಾಡುತ್ತೇವೆ. ಈಗಾಗಲೇ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ‘ಮಿಸ್ಡ್‌ ಕಾಲ್‌ ಸದಸ್ಯತ್ವ ನೋಂದಣಿ ಅಭಿಯಾನ’ಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನದಲ್ಲಿ ಕನಿಷ್ಠ 50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಇರಿಸಿಕೊಂಡಿದ್ದೇವೆ. ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರು, ಯುವಕರು, ಮುಖಂಡರನ್ನು ಒಳಗೊಂಡಂತೆ 10 ಜನರ ತಂಡಗಳನ್ನು ಮಾಡುತ್ತೇವೆ. ಈ ರಾಜ್ಯಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ನೀಡಿದ ಕೊಡುಗೆಗಳ ಕರಪತ್ರಗಳನ್ನು ಹಂಚುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯುವಕರಿಗೆ ಹೇಗೆ ಬೆಂಬಲವಾಗಿ ನಿಲ್ಲಲಿದೆ ಎಂಬುದನ್ನು ತಿಳಿಸುತ್ತೇವೆ. ಮಿಸ್ಡ್‌ ಕಾಲ್‌ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಎರಡು ದಿನದಲ್ಲಿ 1.50 ಲಕ್ಷ ಮಂದಿ ನೋಂದಣಿಯಾಗಿದ್ದಾರೆ.

* ನೀವು ಈ ರಾಜ್ಯ ಪ್ರವಾಸ ಕೈಗೊಳ್ಳುವ ಮುನ್ನ ಏನಾದರೂ ಸಿದ್ಧತೆ ಮಾಡಿಕೊಂಡಿದ್ದೀರಾ?
ಹೌದು. ಕಳೆದ ಒಂದೂವರೆ ತಿಂಗಳಿಂದ ಹೋಂ ವರ್ಕ್‌ ಮಾಡಿದ್ದೇನೆ. ವಿಧಾನಸಭಾ ಕ್ಷೇತ್ರಗಳ ಪಕ್ಷದ ಪ್ರತಿ ಅಭ್ಯರ್ಥಿಯನ್ನು ಖುದ್ದು ಭೇಡಿ ಮಾಡಿ ಚರ್ಚಿಸಿದ್ದೇನೆ.

* ಪ್ರವಾಸ ಆರಂಭಿಸಿದ ಮೂರು ದಿನಗಳಲ್ಲಿ ನಿಮಗೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ?
ಪ್ರವಾಸದಲ್ಲಿ ಹೋದ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಕ್ಷ ಸಂಘಟನೆಗೆ ಇಂತಹ ಕಾರ್ಯಕ್ರಮಗಳು ಬೇಕು ಎಂದು ಹೇಳುತ್ತಿದ್ದಾರೆ. ಪಕ್ಷವನ್ನು ರೀಚಾರ್ಜ್‌ ಮಾಡಲು ಹಾಗೂ ಕೇಡರ್‌ ಅನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಬದಲಾವಣೆ ಬಯಸುತ್ತಿರುವುದು ಈ ಪ್ರವಾಸದ ವೇಳೆ ಕಾಣಿಸುತ್ತಿದೆ.

* ನಿಮ್ಮ ನಾಯಕತ್ವ ರೂಪಿಸುವ ಉದ್ದೇಶದಿಂದ ಈ ರಾಜ್ಯ ಪ್ರವಾಸ ರೂಪಿಸಲಾಗಿದೆಯಂತೆ?
ಇಲ್ಲಿ ನನ್ನ ನಾಯಕತ್ವಕ್ಕಿಂತ ಪಕ್ಷ ಮುಖ್ಯ. ಮೊದಲು ಪಕ್ಷ ಉಳಿಯಬೇಕು. ನನ್ನ ನಾಯಕತ್ವದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಹಳ ಸಮಯ ಈ ಪಕ್ಷ ಉಳಿಯಬೇಕಿದೆ. ಹೀಗಾಗಿ ಪಕ್ಷ ಸಂಘಟನೆ ದೃಷ್ಟಿಯಿಂದ ಈ ಪ್ರವಾಸ ಕೈಗೆತ್ತಿಕೊಂಡಿದ್ದೇನೆ. ಇಲ್ಲಿ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ಪಕ್ಷದ ಮುಂದೆ ನಾನು ಏನೇನೂ ಅಲ್ಲ. ಈ ಪಕ್ಷದ ಕಾರ್ಯಕರ್ತರು ನನ್ನಂಥ ತುಂಬಾ ಜನರನ್ನು ಸೃಷ್ಟಿ ಮಾಡಿದ್ದಾರೆ.

* ಪಕ್ಷದ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ನಿಮ್ಮನ್ನೇ ನೇಮಿಸಲಾಗುತ್ತದೆ. ಇದಕ್ಕೆ ಈ ಪ್ರವಾಸ ಒಂದು ಪೂರ್ವ ತಯಾರಿ ಎಂಬ ಮಾತು ಕೇಳಿಬರುತ್ತಿದೆ?
ಕುಮಾರಸ್ವಾಮಿ ಅವರು ಮಂತ್ರಿಯಾಗಿ ಕೇಂದ್ರಕ್ಕೆ ತೆರಳಿದಾಗಿನಿಂದ ಈ ಸುದ್ದಿ ಹರಿದಾಡುತ್ತಿದೆ. ಸುಮಾರು ಒಂದು ವರ್ಷದಿಂದ ಮಾಧ್ಯಮಗಳಲ್ಲಿ ನಾನೂ ನೋಡಿದ್ದೇನೆ. ಇದು ಕೇವಲ ಸುದ್ದಿ ಅಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಣ್ಣನವರು ಪಕ್ಷದ ಶಾಸಕರು, ಸಂಸದರು, ಮಾಜಿ ಶಾಸಕರು, ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ರಾಜ್ಯಕ್ಕೆ ಬಂದಾಗ ಭೇಟಿ ಮಾಡಿ ಚರ್ಚಿಸುತ್ತಾರೆ. ಮಾತನಾಡಲು ಸಮಯ ಕೊಡುತ್ತಾರೆ. ಸದ್ಯಕ್ಕೆ ಪಕ್ಷದ ಮುಖವಾಣಿಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಈವರೆಗೂ ಚರ್ಚೆಗೆ ಬಂದಿಲ್ಲ.

* ಕಳೆದ ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ನಿಮ್ಮನ್ನು ಮುಂಚೂಣಿಗೆ ತರುತ್ತಿರುವುದರಿಂದ ಇತರ ಹಿರಿಯ ನಾಯಕರಿಗೆ ಇರಿಸುಮುರಿಸಾದಂತೆ ಕಂಡು ಬರುತ್ತಿದೆಯಲ್ವಾ?
ನಾನು ಪಕ್ಷದ ಹಿರಿಯರು ಸೇರಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದೆ ಹೋಗುತ್ತಿದ್ದೇನೆ. ಅವರೆಲ್ಲ ನನ್ನನ್ನು ಬಹಳ ಚಿಕ್ಕ ವಯಸ್ಸಿನಿಂದ ನೋಡಿದ್ದಾರೆ. ನನ್ನನ್ನು ಮಗನ ರೀತಿ ನೋಡುತ್ತಾರೆ. ಬಹುತೇಕ ಹಿರಿಯ ನಾಯಕರಲ್ಲಿ ಪಕ್ಷದಲ್ಲಿ ಹೊಸತನ, ಬದಲಾವಣೆ ತರುವ ಭಾವನೆ ಇದೆ. ಸಂಘಟನೆಯ ವೇಗ ಹೆಚ್ಚಿಸಬೇಕು ಎಂಬ ತುಡಿತವಿದೆ. ದೇವೇಗೌಡರು ಪ್ರಧಾನಿಯಾದಾಗಿನಿಂದ ಇರುವ ಮಾಜಿ ಎಂಎಲ್‌ಸಿ ತಿಪ್ಪೇಸ್ವಾಮಿ ಅವರು ನನ್ನ ಜತೆಗೆ ಇದ್ದಾರೆ. ಈ ಪ್ರವಾಸದಲ್ಲಿ ಜತೆಯಲ್ಲೇ ಇದ್ದು ಮಾರ್ಗದರ್ಶನ ನೀಡುತ್ತಿದ್ದಾರೆ. ಹಿರಿಯ ನಾಯಕ ವೆಂಕಟ ರಾವ್‌ ನಾಡಗೌಡ ಮೊದಲಾದ ನಾಯಕರು ಸಲಹೆಗಳನ್ನು ನೀಡುತ್ತಿದ್ದಾರೆ. ಎಲ್ಲರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಪಡೆದೇ ಈ ಪ್ರವಾಸ ಆರಂಭಿಸಿದ್ದೇನೆ. ಈ ಬಗ್ಗೆ ಯಾವುದೇ ಅಪಸ್ವರ ಇಲ್ಲ.

* ರಾಜ್ಯ ಪ್ರವಾಸ ಮತ್ತು ಮಿಸ್ಡ್‌ ಕಾಲ್‌ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮಕ್ಕೆ ಹಲವು ಹಿರಿಯ ನಾಯಕರು ಗೈರು ಹಾಜರಾಗಿದ್ದರಲ್ಲಾ?
ಕಳೆದ ಶುಕ್ರವಾರವೇ ಈ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ತಂದೆ ಕೇಂದ್ರ ಸಚಿವಾಗಿರುವುದರಿಂದ ಅವರ ಸಮಯ ನೋಡಿಕೊಂಡು ಭಾನುವಾರಕ್ಕೆ ಕಾರ್ಯಕ್ರಮ ಮೂಂದೂಡಲಾಯಿತು. ಆದರೂ ಶನಿವಾರ ರಾತ್ರಿಯೇ ಪಕ್ಷದ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರೊಂದಿಗೆ ತಂದೆ ಸಭೆ ನಡೆಸಿ ಚರ್ಚಿಸಿದ್ದರು. ಇದರಲ್ಲಿ ಕೆಲ ನಾಯಕರು ಕ್ಷೇತ್ರದಲ್ಲಿ ಕಾರ್ಯಕ್ರಮಗಳು ಇರುವುದರಿಂದ ಹೋಗಬೇಕು ಎಂದು ಹೇಳಿದ್ದರು. ಕ್ಷೇತ್ರದ ಕಾರ್ಯಕರ್ತರನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರ ಅನುಮತಿ ಪಡೆದೇ ಕಾರ್ಯಕ್ರಮಕ್ಕೆ ಗೈರಾಗಿದ್ದರು.

* ಮೈತ್ರಿಯಾದಾಗ ಉಭಯ ಪಕ್ಷಗಳ ನಾಯಕರು ಒಂದಾಗುವುದು ಸುಲಭ. ಆದರೆ, ತಳಮಟ್ಟದಲ್ಲಿ ಕಾರ್ಯಕರ್ತರ ಹೊಂದಾಣಿಕೆ ಕಷ್ಟವಲ್ಲವೇ?
ತಳಮಟ್ಟದಲ್ಲಿ ನೋಡಿದಾಗ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಹೊಂದಾಣಿಕೆ ಕಷ್ಟ. ಆದರೆ, ಜೆಡಿಎಸ್‌-ಬಿಜೆಪಿ ವಿಚಾರ ಬಂದಾಗ ಅದು ಬೇರೆಯೇ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ 19 ಸ್ಥಾನಗಳ ಗೆಲುವಿನ ಶ್ರೇಯ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಹೋಗಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆಯಲ್ಲಿ ಕೆಲಸ ಮಾಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ನೂರಕ್ಕೆ ನೂರು ಯಶಸ್ವಿಯಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಪರಸ್ಪರ ವಿಶ್ವಾಸ, ಹೊಂದಾಣಿಕೆಯಿಂದ ಇದ್ದಾರೆ. ಮುಂದೆಯೂ ಇರುತ್ತಾರೆ.

* ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಹಂತ ಹಂತವಾಗಿ ಜೆಡಿಎಸ್ ಪಕ್ಷವನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಬರುತ್ತಿಲ್ಲವೇ?
ಇಲ್ಲಿ ಕಡೆಗಣನೆ ಪ್ರಶ್ನೆ ಇಲ್ಲವೇ ಇಲ್ಲ. ಎರಡೂ ಪಕ್ಷಗಳು ಸಾಕಷ್ಟು ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ವಿರುದ್ಧ ಅಭಿಯಾನ ಮಾಡಿದ್ದೇವೆ. ‘ಸಾಕಪ್ಪ ಸಾಕು; ಕಾಂಗ್ರೆಸ್‌ ಸರ್ಕಾರ’ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಲ್ಲಿ ಯಾರೂ ಯಾರನ್ನೂ ಕಡೆಗಣಿಸಿಲ್ಲ. ಎರಡೂ ಪಕ್ಷಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಲು ಒಂದು ಸಮನ್ವಯ ಸಮಿತಿ ಕೊರತೆ ಇದ್ದು, ಅದೊಂದು ಬೇಗ ಆಗಬೇಕು. ಶೀಘ್ರದಲ್ಲೇ ಆ ಸಮಿತಿಯೂ ಆಗಲಿದೆ.

* ಬಿಜೆಪಿಯೊಂದಿಗಿನ ಮೈತ್ರಿ ಬಳಿಕ ಜೆಡಿಎಸ್‌ ಸಂಘಟನೆಗೆ ಹಿನ್ನಡೆಯಾಗಿದೆಯೇ? ಹೀಗಾಗಿ, ಸಂಘಟನೆಗೆ ವೇಗ ನೀಡಲು ನೀವು ಪ್ರವಾಸ ಕೈಗೊಂಡಿದ್ದೀರಾ?
ಮೈತ್ರಿಯಿಂದ ಪಕ್ಷಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ನನ್ನ ಈ ಪಕ್ಷ ಸಂಘಟನೆ ಆಲೋಚನೆ ಹಲವು ವರ್ಷಗಳದ್ದು. ಎರಡೂ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರಿಗೆ ಹೋಲಿಕೆ ಮಾಡಿದರೆ, ಜೆಡಿಎಸ್‌ ಪಕ್ಷದ ಕಾರ್ಯಕರ್ತರು ವಿಭಿನ್ನ. ನಮ್ಮ ಕಾರ್ಯಕರ್ತರ ಬಗ್ಗೆ ರಾಷ್ಟ್ರೀಯ ಪಕ್ಷಗಳ ಸ್ನೇಹಿತರು ಮೆಚ್ಚುಗೆ ಮಾತನಾಡುತ್ತಾರೆ. ಹೀಗಾಗಿ ನಾನು ಪಕ್ಷದ ಸಂಘಟನೆ ಬಲಪಡಿಸುವ ಹಾಗೂ ಎಲ್ಲರನ್ನೂ ಒಂದು ವೇದಿಕೆಗೆ ತರುವ ಉದ್ದೇಶದಿಂದ ಈ ಪ್ರವಾಸ ಮಾಡುತ್ತಿದ್ದೇನೆ. ನಮಗೆ ಯಾರ ಬಗ್ಗೆಯೂ ಆತಂಕ ಇಲ್ಲ.

* ನಿಮ್ಮ ಪಕ್ಷದ ಅನೇಕ ಶಾಸಕರು ಕಾಂಗ್ರೆಸ್‌ನೊಂದಿಗೆ ಸತತ ಸಂಪರ್ಕದಲ್ಲಿದ್ದಾರಂತೆ. ಹೀಗಿರುವಾಗ ಪಕ್ಷ ಸಂಘಟನೆ ಸಾಧ್ಯವಾ?
ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಯಾವುದೇ ಪಕ್ಷವಾಗಿದ್ದರೂ ಜನ ನಂಬಿಕೆ ಇರಿಸಿ ಶಾಸಕರನ್ನು ಆಯ್ಕೆ ಮಾಡುತ್ತಾರೆ. ರಸ್ತೆ, ಚರಂಡಿ, ಶಾಲಾ ಕಟ್ಟಡ, ಆಸ್ಪತ್ರೆ, ಕುಡಿಯುವ ನೀರು ಸೇರಿ ಇತರೆ ಸವಲತ್ತುಗಳ ಬಗ್ಗೆ ಪ್ರಶ್ನಿಸುತ್ತಾರೆ. ಹೀಗಿರುವಾಗ ಶಾಸಕರು ಸರ್ಕಾರವನ್ನು ಅನುದಾನ ಕೇಳಬೇಕು. ಇಲಾಖಾವಾರು ಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಬೇಕು. ಭೇಟಿ ಮಾಡಿ ಅನುದಾನ ಕೇಳಿದ ಮಾತ್ರಕ್ಕೆ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ಎಷ್ಟೋ ಬಾರಿ ನಮ್ಮ ಶಾಸಕರು ನಮ್ಮ ನಾಯಕರಿಗೆ ಹೇಳಿಯೇ ಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಹೀಗಾಗಿ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.

* ಪಕ್ಷ ಸಂಘಟನೆ ಬಲಪಡಿಸಲು ಹೊರಟಿರುವ ನೀವು ವಿಷನ್‌ ಇಟ್ಟುಕೊಂಡಿದ್ದೀರಾ?
ಪಾರ್ಟಿ ಕೇಡರ್‌ ಅನ್ನು ಮರುವಿನ್ಯಾಸ ಮಾಡಬೇಕು. ಒಂದು ಪ್ಲಾಟ್‌ ಫಾರ್ಮ್‌ನಲ್ಲಿ ಜೋಡಿಸಬೇಕು. ಕೇಡರ್‌ ಅನ್ನು ಮತ್ತಷ್ಟು ಸಂಘಟನಾತ್ಮಕವಾಗಿ ಸಜ್ಜುಗೊಳಿಸಬೇಕು. ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು. ಇಂತಹ ಪ್ರವಾಸಗಳ ಮುಖಾಂತರ ಅವರ ಮನಸಿಗೆ ಹತ್ತಿರವಾಗಬೇಕು. ಏಕೆಂದರೆ, ಚುನಾವಣೆ ಮಾಡುವವರು ಅವರೇ. ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕದಲ್ಲಿ ಇರುವವರೂ ಅವರೇ. ಹೀಗಾಗಿ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ಅವರ ವಿಶ್ವಾಸ ಗಳಿಸಬೇಕು. ಅವರಲ್ಲಿ ಉತ್ಸಾಹ ತುಂಬಬೇಕು. ಇದಕ್ಕೆಲ್ಲ ಈಗ ಸಮಯ ಕೂಡಿ ಬಂದಿದೆ. ಹೀಗಾಗಿ ನಾನು ಈ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!