
ಬೆಂಗಳೂರು (ಜೂ.19): ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ನಂದಿಗಿರಿಧಾಮದಲ್ಲಿ ಗುರುವಾರ (ಜೂ.19) ನಡೆಸಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸರ್ಕಾರ ವಿಧಾನಸೌಧದ ಸಚಿವ ಸಂಪುಟ ಸಭಾಂಗಣಕ್ಕೆ ಸ್ಥಳಾಂತರಿಸಿದೆ. ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲೇ ಸಭೆ ನಡೆಯಲಿದೆ. ಜೊತೆಗೆ ಸಚಿವ ಸಂಪುಟದಲ್ಲಿ ಚರ್ಚೆಗೆ ನಿಗದಿಪಡಿಸಿದ್ದ ವಿಷಯಗಳನ್ನು ಪರಿಷ್ಕರಿಸಲಾಗಿದ್ದು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆ, ವಿಷಯಗಳನ್ನು ತೆಗೆಯಲಾಗಿದೆ. ಕೆಲವೊಂದು ಹೊಸ ವಿಷಯಗಳನ್ನು ಸೇರಿಸಲಾಗಿದೆ.
ಪ್ರಮುಖವಾಗಿ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿ ಮತ್ತು ಅವರ ಅಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಾರ್ಷಿಕ ₹5 ಲಕ್ಷವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಅನುಮೋದನೆ ನೀಡುವುದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿ.ಮೀ. ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶವನ್ನು ಒಳಗೊಂಡ 5959 ಹೆಕ್ಟೇರ್ ಪ್ರದೇಶವನ್ನು ‘ಅಪ್ಪರಕೊಂಡ-ಮುಗಲಿ ಕಡಲ ವನ್ಯಜೀವಿಧಾಮ’ ಎಂದು ಘೋಷಿಸುವುದು ಸೇರಿದಂತೆ ಇನ್ನಿತರೆ ವಿಷಯಗಳು ಗುರುವಾರ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದ್ದು ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.
ಇದಲ್ಲದೆ ಅಕ್ರಮ ಗಣಿಗಾರಿಕೆ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ರಚಿಸಿರುವ ವಿಶೇಷ ತನಿಖಾ ತಂಡದ ಕಾಯಾವಧಿಯನ್ನು ಜುಲೈ 1ರಿಂದ ಮತ್ತೆ ಒಂದು ವರ್ಷ ವಿಸ್ತರಿಸುವುದು, ಕರ್ನಾಟಕ ನೋಂದಣಿ ಸಂಘಗಳಾಗಿ ನೋಂದಾಯಿತವಾದ ಆರೋಗ್ಯ ರಕ್ಷಾ ಸಮಿತಿಗಳ ಆಡಳಿತ/ಸಾಮಾನ್ಯ ಸಭೆಯ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿ ಬದಲಾವಣೆ ತರುವುದು. ಹಾವೇರಿ ಜಿಲ್ಲೆಯ ಯಳವಟ್ಟಿ ಗ್ರಾಮದಲ್ಲಿ 28 ಎಕರೆಯಲ್ಲಿ ಮಾವು ಮತ್ತು ಇತರೆ ತೋಟಗಾರಿಕಾ ಬೆಳಗಳ ಸಂಸ್ಕರಣಾ ಮತ್ತು ಸಂರಕ್ಷಣಾ ಘಟಕ ಸ್ಥಾಪನೆ, ಎತ್ತಿನಹೊಳೆ ಯೋಜನಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಸನ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಭೂಪ್ರದೇಶದ ಮಾಲೀಕತ್ವದ ಕುರಿತು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳ ನಡುವೆ ಉಂಟಾಗಿರುವ ದ್ವಿ-ಹಕ್ಕು ಮಾಲೀಕತ್ವದ ಭೂ ಪರಿಹಾರ ನೀಡಲು ಅನುಮೋದನೆ ನೀಡುವ ವಿಚಾರ ಸೇರಿದಂತೆ ಕೊಪ್ಪಳ, ರಾಯಚೂರು ಜಿಲ್ಲೆಗಳ ಕೆಲ ನಿರಾವರಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳು ಕೂಡ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿವೆ.--
ಸಂಪುಟ ಸಭೆ ಸ್ಥಳಾಂತರ ಏಕೆ?: ಚಿಕ್ಕಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಶಾಸಕರು ತಮ್ಮ ಮತಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಅನುದಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಹಣಕಾಸು ಇಲಾಖೆಯ ಅಧಿಕೃತ ಅನುಮೋದನೆ ದೊರೆತಿಲ್ಲ. ಹಾಗಾಗಿ ನಂದಿಬೆಟ್ಟದಲ್ಲಿ ಸಚಿವ ಸಂಪುಟ ನಡೆಸಿದರೆ ಶಾಸಕರ ಬೇಡಿಕೆಯಂತೆ ಯೋಜನೆಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ. ಇದರಿಂದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವ ಉದ್ದೇಶ ಈಡೇರಿದಂತಾಗುವುದಿಲ್ಲ ಎಂಬ ಅಭಿಪ್ರಾಯ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರಿಂದ ವ್ಯಕ್ತವಾಗಿದೆ. ಹಾಗಾಗಿ ಸರ್ಕಾರ ಸಚಿವ ಸಂಪುಟ ಸಭೆಯನ್ನು ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದೆ.
ಆದಷ್ಟು ಬೇಗೆ ಎರಡೂ ಜಿಲ್ಲೆಗಳ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಲ್ಲಿಸಿರುವ ಯೋಜನೆಗಳು ಮತ್ತು ಅದಕ್ಕೆ ಬೇಕಿರುವ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಯ ಅನುಮೋದನೆ ನೀಡಿ, ನಂತರ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ಮರು ನಿಗದಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.