100 ಕೋಟಿ ರುಪಾಯಿ ವೆಚ್ಚದಲ್ಲಿ ರಾಜ್ಯದ ಹಲವೆಡೆ 100 ರಾಮಮಂದಿರ ನಿರ್ಮಾಣ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಬಂದಿದ್ದು, ಈ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರ (ಫೆ.19): 100 ಕೋಟಿ ರುಪಾಯಿ ವೆಚ್ಚದಲ್ಲಿ ರಾಜ್ಯದ ಹಲವೆಡೆ 100 ರಾಮಮಂದಿರ ನಿರ್ಮಾಣ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಬಂದಿದ್ದು, ಈ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 100 ಕೋಟಿ ರುಪಾಯಿಗೆ ನಾನು ಬೇಡಿಕೆ ಇಟ್ಟಿದ್ದೆ. ಅದೇ ಸಮಯಕ್ಕೆ ಸರ್ಕಾರದ ಮುಂದೆ 100 ಕೋಟಿ ರು.ವೆಚ್ಚದಲ್ಲಿ ರಾಜ್ಯದ ಹಲವು ಭಾಗಗಳಲ್ಲಿ 100 ರಾಮ ಮಂದಿರಗಳನ್ನು ಕಟ್ಟುವ ಪ್ರಸ್ತಾವನೆಯೂ ಬಂದಿದ್ದು, ಅದರ ಬಗ್ಗೆಯೂ ಆಲೋಚನೆ ನಡೆದಿದೆ. ಇದು ಕಾರ್ಯಗತ ಆಗುವುದಾದರೆ ರಾಮನೂರಿಗೆ ಮೊದಲ ರಾಮಮಂದಿರ ಕೊಡಬೇಕೆಂದು ಕೇಳಿದ್ದಕ್ಕೆ ಸ್ಪಂದನೆಯೂ ಸಿಕ್ಕಿದೆ ಎಂದರು.
ರಾಮಮಂದಿರ ನಿರ್ಮಾಣಕ್ಕೆ 100 ಕೋಟಿ ರುಪಾಯಿ ಕೇಳಿದ್ದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಆಸಕ್ತರಾಗಿದ್ದಾರೆ. ರಾಮನಗರದಲ್ಲಿ ರಾಮ ಮಂದಿರವೂ ನಿರ್ಮಾಣ ಆಗುತ್ತದೆ, ರಾಮೋತ್ಸವವೂ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿಗೆ ಜನರು ಮತ್ತು ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಹಾಗಾಗಿಯೇ ಅವರೆಲ್ಲರು ಬಜೆಟ್ ಮಂಡಿಸುವಾಗ ಹೊರ ನಡೆಯುತ್ತಿದ್ದರು. ಇದು ಅವರು ನೀಡುತ್ತಿರುವ ಗೌರವ. ಅಧಿಕಾರ ಇಲ್ಲದ ಕಾರಣಕ್ಕೆ ಜನರ ಹಿತದೃಷ್ಟಿ ಮರೆತಿದ್ದಾರೆ. ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಇಕ್ಬಾಲ್ ಹುಸೇನ್ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
undefined
ಸುಪ್ರೀಂಕೋರ್ಟ್ ಹೇಳಿದ ಜಾಗದಲ್ಲಿ 'ರಾಮಮಂದಿರ' ಕಟ್ಟಿಲ್ಲ: ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ
ಜಿಲ್ಲಾ ಕ್ರೀಡಾಂಗಣದಲ್ಲಿ ಪೆವಿಲಿಯನ್ ಶೆಲ್ಟರ್ ನಿರ್ಮಾಣ: ಜಿಲ್ಲಾ ಕ್ರೀಡಾಂಗಣವನ್ನು ಅಭಿವದ್ಧಿಪಡಿಸಿ ಮೇಲ್ದರ್ಜೆಗೇರಿಸಲು 20 ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಇದೀಗ ಮೊದಲ ಹಂತದಲ್ಲಿ 5 ಕೋಟಿ ಅನುದಾನ ಮಂಜೂರಾಗಿದ್ದು, ಹಂತಹಂತವಾಗಿ 20 ಕೋಟಿ ನೀಡಲು ಕ್ರೀಡಾ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೆವಿಲಿಯನ್ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ಆರೋಗ್ಯವಾಗಿರಲು ಆಟೋಟ, ನಡಿಗೆ, ವ್ಯಾಯಾಮ ಮಾಡಬೇಕು.
ಇದಕ್ಕಾಗಿ ಕ್ರೀಡಾಂಗಣಗಳು ಅತ್ಯಗತ್ಯ. ಹಾಗಾಗಿ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದೇನೆ. ಇದೀಗ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ರಾತ್ರಿ ವೇಳೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಸುಭದ್ರವಾದ ಕಾಂಪೌಂಡ್ ಇರಲಿಲ್ಲ. ಈ ಹಿಂದೆ ನಿರ್ಮಿಸಿದ್ದ ತಂತಿ ಬೇಲಿ ಹಾಳಾಗಿತ್ತು. ಅದನ್ನು ತೆರವುಗೊಳಿಸಿ ಇದೀಗ ಸುಭದ್ರವಾದ ಗ್ರಿಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶ. ಎಲ್ಲಾ ವಯೋಮಾನದವರು ಕ್ರೀಡಾಂಗಣವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.
ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿಡಲು ಅಗತ್ಯ ಅನುದಾನ ತರಲಾಗುವುದು ಎಂದು ಭರವಸೆ ನಿಡಿದರು. ಕಾವೇರಿ ನೀರಾವರಿ ನಿಗಮದಿಂದ 50 ಕೋಟಿ ಅನುದಾನದಿಂದ ಕಸಬಾ ಹಾಗೂ ಕೈಲಾಂಚ ಹೋಬಳಿಯಲ್ಲಿ ಹಲವಾರು ಅಭಿವದ್ಧಿ ಕಾಮಗಾರಿಗಳು ನಡೆಯುತ್ತಿವೆ. ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಮಂಜೂರಾಗಿದ್ದ 456 ಕೋಟಿ ವೆಚ್ಚದಲ್ಲಿ 24 ತಾಸು ಕುಡಿಯುವ ನೀರಿಯ ಯೋಜನೆ ಪ್ರಗತಿಯಲ್ಲಿದೆ. ನಗರದಲ್ಲಿ ಪೈಪ್ಲೈನ್ ಕಾಮಗಾರಿಗೆ ರಸ್ತೆಗಳನ್ನು ಅಗೆದಿರುವುದರಿಂದ ಗುಂಡಿ ಬಿದ್ದಿವೆ. ಆ ರಸ್ತೆಗಳ ಅಭಿವದ್ಧಿಗೆ 82 ಕೋಟಿ ಅನುದಾನ ಬಿಡುಗಡೆಯಾಗಿದೆ.
ಬಾವಿ ತೋಡುವ ಕೆಲಸವನ್ನು ಕೈಬಿಡಿ: ಗೌರಿ ನಾಯ್ಕ್ ಅವರಿಗೆ ಮನವಿ ಮಾಡಿದ ಸಚಿವ ಮಂಕಾಳು ವೈದ್ಯ!
ಬಜೆಟ್‌ನಲ್ಲಿ 157 ಕೋಟಿ ವೆಚ್ಚದಲ್ಲಿ ಅರ್ಕಾವತಿ ನದಿ ಶುದ್ಧೀಕರಣಕ್ಕೆ ನೀಡಿದೆ. ಅಲ್ಪಸಂಖ್ಯಾತರ ಅಭಿವದ್ಧಿ ನಿಗಮದಿಂದ 12.5 ಕೋಟಿ ಅನುದಾನ ದೊರೆತಿದೆ. ಅತಿವೃಷ್ಠಿಯಿಂದ ಮನೆಗಳಿಗೆ ನೀರು ನುಗ್ಗಿ ಆಗಿದ್ದ ಅನಾಹುತಕ್ಕೆ ಈಗ 5.5 ಕೋಟಿ ಪರಿಹಾರ ಬಿಡುಗಡೆಯಾಗಿದೆ. ನಾನು ತಂದಿರುವ ಅನುದಾನದಲ್ಲಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇಕ್ಬಾಲ್ ಹುಸೇನ್ ಅವರಿಗಲ್ಲ, ನಾನೇ ಅಭ್ಯರ್ಥಿ, ನನಗೆ ಮತ ನೀಡಿ ಎಂದು ಕೇಳಿದ್ದರು. ಹಾಗಾಗಿ ಅವರೇ ಕಾಳಜಿ ವಹಿಸಿ ಅನುದಾನ ನೀಡುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.