ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸಭೆಯಲ್ಲಿ ಪಾಲ್ಗೊಂಡಿದ್ದರಲ್ಲಿ ಯಾವ ತಪ್ಪೂ ಇಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಂಡರು.
ಮಂಡ್ಯ (ಜೂ.14): ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸಭೆಯಲ್ಲಿ ಪಾಲ್ಗೊಂಡಿದ್ದರಲ್ಲಿ ಯಾವ ತಪ್ಪೂ ಇಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಂಡರು. ಮಂಡ್ಯದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸುರ್ಜೇವಾಲ ಪ್ರಸ್ತುತ ರಾಜ್ಯಸಭಾ ಸದಸ್ಯರು. ಅವರು ಸರ್ಕಾರಿ ಅಧಿಕಾರಿಗಳ ಅಧಿಕೃತ ಸಭೆಯಲ್ಲೇನೂ ಭಾಗಿಯಾಗಿರಲಿಲ್ಲ. ಅದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾಸಗಿಯಾಗಿ ಪಕ್ಷದ ಶಾಸಕರು, ಮುಖಂಡರ ಸಭೆ ನಡೆಸಿದ್ದರು. ಅದರಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದು ಅಪರಾಧವೇನಲ್ಲ ಎಂದು ಉತ್ತರಿಸಿದರು.
ನಾವೂ ಎಲ್ಲೋ ಹೋಟೆಲ್‌ನಲ್ಲಿ ಜಿಲ್ಲಾಧಿಕಾರಿಗಳನ್ನು ಕರೆಸಿಕೊಂಡು ಮಾತನಾಡುತ್ತಿರುತ್ತೇವೆ. ಆಗ ಪಕ್ಷದ ಮುಖಂಡ ಅಲ್ಲಿದ್ದಾಕ್ಷಣ ಅದನ್ನು ತಪ್ಪು ಎನ್ನಲಾಗುವುದಿಲ್ಲ ಎಂದು ಉತ್ತರಿಸಿದಾಗ, ಇದು ಸುದ್ದಿಯಾಗುತ್ತಿದ್ದಂತೆ ಸಚಿವ ಜಮೀರ್ ಅಹಮದ್ ಅವರು ಫೇಸ್‌ಬುಕ್‌ನಿಂದ ಫೋಟೋ ಡಿಲೀಟ್ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ, ಅದನ್ನು ಅವರನ್ನೇ ಕೇಳಬೇಕು. ಎಲ್ಲಾ ಮಂತ್ರಿಗಳು ಮಾಡುವ ಕೆಲಸಗಳಿಗೆ ನಾನು ಉತ್ತರ ನೀಡಲಾಗುವುದೇ ಎಂದು ನಯವಾಗಿಯೇ ಜಾರಿಕೊಂಡರು.
ಹಿಂದು ಸಂಪ್ರದಾಯವನ್ನು ಯಾರು ಮರೆಯಬಾರದು: ಯದುವೀರ್ ಒಡೆಯರ್
ಜನರ ಸಮಸ್ಯೆಗಳಿಗೆ ಪರಿಹಾರ ಕೇಂದ್ರ: ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೇಂದ್ರವಾಗಿ ಪರಿವರ್ತನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ಕಚೇರಿ ಸದಾಕಾಲ ತೆರೆದಿರುತ್ತದೆ. ನಾನು ಕಚೇರಿಯಲ್ಲಿ ಪ್ರತಿ ದಿನವೂ ಇರಲಾಗುವುದಿಲ್ಲ. ನನ್ನ ಆಪ್ತ ಸಹಾಯಕರು ಕಚೇರಿಯಲ್ಲಿರುತ್ತಾರೆ. ಕಚೇರಿಗೆ ಜನರು ನೀಡುವ ಸಮಸ್ಯೆಗಳ ಅಹವಾಲುಗಳನ್ನು ನನ್ನ ಗಮನಕ್ಕೆ ತರುವಂತೆ ಸೂಚಿಸಿದ್ದೇನೆ.
ಅಹವಾಲು ಪರಿಶೀಲಿಸಿ ಪರಿಹಾರ ದೊರಕಿಸಿ ಕೊಡುವುದಾಗಿ ಹೇಳಿದರು. ಮಂಡ್ಯಕ್ಕೆ ನಾನು ಬಂದಾಗಲೆಲ್ಲಾ ಕಚೇರಿಗೆ ಭೇಟಿ ಕೊಡುತ್ತೇನೆ. ನನ್ನ ಮತ್ತು ಜನರ ನಡುವಿನ ಸಂಪರ್ಕ ಸೇತುವೆಯಾಗಿ ಕಚೇರಿಯನ್ನು ಬಳಸಿಕೊಳ್ಳುವೆ. ಜನರ ಸೇವೆಗೆ ಕಚೇರಿ ಸದಾ ಮುಕ್ತವಾಗಿರುತ್ತದೆ ಎಂದರು. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 3ರಿಂದ 4 ಟಿಎಂಸಿ ಅಡಿ ನೀರು ಮಾತ್ರ ಇದೆ. ಮುಂಗಾರು ಮಳೆ ಈಗಾಗಲೇ ವಿಳಂಬವಾಗಿದೆ. ಬೆಳೆದು ನಿಂತಿರುವ ಕಬ್ಬು ಬೆಳೆ ರಕ್ಷಣೆಗಾಗಿ ಸರ್ಕಾರ ಕೆಆರ್‌ಎಸ್‌ನಿಂದ ನೀರು ಬಿಡುಗಡೆ ಮಾಡಿದೆ. ನೀರನ್ನು ವ್ಯರ್ಥ ಮಾಡದೆ ಎಚ್ಚರಿಕೆಯಿಂದ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಮುಲಾಜಿಲ್ಲದೆ ಕ್ರಮ: ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಪ್ರಕರಣಗಳು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳೊಂದಿಗೂ ಈ ವಿಷಯವಾಗಿ ಮಾತುಕತೆ ನಡೆಸುವುದಾಗಿ ಹೇಳಿದರು. ಆಹಾರ ಇಲಾಖೆ ಅಧಿಕಾರಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿರುವರಲ್ಲ ಎಂಬ ಮತ್ತೊಂದು ಪ್ರಶ್ನೆಗೆ, ಯಾವ ಹಂತದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್.ಡಿ.ಕುಮಾರಸ್ವಾಮಿ
ಕೃಷಿಗೆ ಹೆಚ್ಚಿನ ಒತ್ತು: ನೂತನ ಸರ್ಕಾರ ಮಂಡಿಸಲಿರುವ ಹೊಸ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದರಿಂದ ಆರ್ಥಿಕವಾಗಿ ಸಮಸ್ಯೆ ಇದೆ. ಹೊಸ ಕಾರ್ಯಕ್ರಮ ನೀಡಲು ಸಾಧ್ಯವಾಗದಿದ್ದರೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ ಎಂದರು.