ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಿ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha News  |  First Published Jun 14, 2023, 11:22 PM IST

ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿ. ರೈಲ್ವೆ, ನೀರಾವರಿ, ಹೆದ್ದಾರಿ, ರಿಂಗ್‌ ರೋಡ್‌, ಫ್ಲೈ ಓವರ್‌ ನಿರ್ಮಾಣ, ಭೂ ಸ್ವಾಧೀನ, ಪುನರ್ವಸತಿ ಯೋಜನೆಗಳ ಅನುಷ್ಠಾನ ತ್ವರಿತಗೊಳಿಸಬೇಕು. 


ಬೆಳಗಾವಿ (ಜೂ.14): ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿ. ರೈಲ್ವೆ, ನೀರಾವರಿ, ಹೆದ್ದಾರಿ, ರಿಂಗ್‌ ರೋಡ್‌, ಫ್ಲೈ ಓವರ್‌ ನಿರ್ಮಾಣ, ಭೂ ಸ್ವಾಧೀನ, ಪುನರ್ವಸತಿ ಯೋಜನೆಗಳ ಅನುಷ್ಠಾನ ತ್ವರಿತಗೊಳಿಸಬೇಕು. ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗುವ ತಾಂತ್ರಿಕ ತೊಂದರೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸ್ವಾಧೀನ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಬೆಳಗಾವಿ ರಿಂಗ್‌ ರಸ್ತೆ, ರೈಲ್ವೆ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಭೂ ಸ್ವಾಧೀನ ಅಥವಾ ನ್ಯಾಯಾಲಯದ ತಡೆಯಾಜ್ಞೆಯಂತಹ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

Latest Videos

undefined

ಸರ್ಕಾರ ಬಂದು 20 ದಿನ ಆಗಿಲ್ಲ, ಯಾವ ಕಮಿಷನ್‌ ತೆಗೆದುಕೊಳ್ಳುವುದು: ಎಚ್‌ಡಿಕೆ ವಿರುದ್ಧ ಸಚಿವ ವೆಂಕಟೇಶ್‌ ಕಿಡಿ

ಕಬಲಾಪುರ ಸ್ಥಳಾಂತರಕ್ಕೆ ಕ್ರಮ: ಬೆಳಗಾವಿ ತಾಲೂಕಿನ ಕಬಲಾಪುರ ಸ್ಥಳಾಂತರಕ್ಕೆ 72 ಎಕರೆ ಅಗತ್ಯ ಜಾಗೆ ಇದೆ. ಆದರೆ, ಗ್ರಾಮದ ಪಕ್ಕದಲ್ಲೇ ಇರುವ ಜಾಗೆಗೆ ಸ್ಥಳಾಂತರಿಸಲು ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಮುಳುಗಡೆ ಪ್ರದೇಶವೆಂದು ಘೋಷಿಸಿರುವ ಗ್ರಾಮಗಳ ಸ್ಥಳಾಂತರ ಅಥವಾ ಪುನರ್ವಸತಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಒಂದು ವೇಳೆ ನ್ಯಾಯಾಲಯದಲ್ಲಿ ತಡೆ ಅಥವಾ ಪ್ರಕರಣಗಳಿದ್ದಲ್ಲಿ ಪರಿಹರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಚಿಕ್ಕೋಡಿ ಭಾಗದ 5 ಗ್ರಾಮಗಳ ಸ್ಥಳಾಂತರಕ್ಕೆ ಪ್ರಸ್ತಾವನೆ: ಪುನರ್ವಸತಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳೇ ಮುತುವರ್ಜಿ ವಹಿಸಬೇಕು. ಗ್ರಾಮಸ್ಥರ ಅಭಿಪ್ರಾಯ ಹಾಗೂ ನ್ಯಾಯಾಲಯದ ಆದೇಶ ಗಮನದಲ್ಲಿಟ್ಟುಕೊಂಡು ಚಿಕ್ಕೋಡಿ ಸಮೀಪದ ಜಾಗನೂರ ಸೇರಿದಂತೆ ಐದು ಗ್ರಾಮಗಳ ಸ್ಥಳಾಂತರಕ್ಕೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಥಣಿ ತಾಲ್ಲೂಕಿನಲ್ಲಿ ಈಗಾಗಲೇ ಸಿದ್ಧಪಡಿಸಿರುವ ಪುನರ್ವಸತಿ ಕೇಂದ್ರದ ನಿವೇಶನಗಳನ್ನು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕೂಡಲೇ ಸಂಬಂಧಿಸಿದ ಗ್ರಾಮಸ್ಥರಿಗೆ ವಿತರಿಸಬೇಕು. ಗ್ರಾಮಸ್ಥರು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಾಗ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ತಿಳಿಸಿದರು.

ಭೂ ಸ್ವಾಧೀನದಲ್ಲಿ ಸ್ವಲ್ಪ ಬದಲಾವಣೆ ತೋರಿ: ಬೆಳಗಾವಿ ತಾಲೂಕಿನ ಕಡೋಲಿ, ಹೊನಗಾ, ಬೆನ್ನಾಳಿ, ಅಗಸಗಾ ಮತ್ತಿತರ ಸಣ್ಣ ಗ್ರಾಮಗಳಿದ್ದು, ಬೆಳಗಾವಿ ರಿಂಗ್‌ ರಸ್ತೆ ನಿರ್ಮಾಣಕ್ಕೆ ನೂರಾರು ಎಕರೆ ಸ್ವಾಧೀನ ಪಡಿಸಿಕೊಂಡರೆ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಆದ್ದರಿಂದ ಗ್ರಾಮಸ್ಥರ ಅಭಿಪ್ರಾಯ ಆಲಿಸಿ ವಿನ್ಯಾಸದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಬೇಕು. ಒಂದೆರಡು ಕಿ.ಮೀ. ಆಸುಪಾಸಿನಲ್ಲಿ ಪರ್ಯಾಯ ಸ್ಥಳ ಗುರುತಿಸಬೇಕು. ಹಲಗಾ-​ಮಚ್ಛೆ ಹೆದ್ದಾರಿ ಕಾಮಗಾರಿಗೆ ಅನುಕೂಲವಾಗುವಂತೆ ಬಾಕಿ ಇರುವ ಭೂ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಭೂಸ್ವಾಧೀನ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮೊದಲ ಹಾಗೂ ಎರಡನೇ ಗೇಟ್‌ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಟೆಂಡರ್‌ಗಳನ್ನು ಕೂಡಲೇ ಕರೆಯಬೇಕು. ಇದಕ್ಕೂ ಮುಂಚೆ ಮಹಾನಗರ ಪಾಲಿಕೆ, ಲೋಕೋಪಯೋಗಿ, ಪೊಲೀಸ್‌ ಇಲಾಖೆ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ವಿನ್ಯಾಸವನ್ನು ಅಂತಿಮಗೊಳಿಸಬೇಕು. ರೈಲ್ವೆ ಇಲಾಖೆ ರಸ್ತೆ ಮೇಲ್ಸೇತುವೆ ಹಾಗೂ ಅಂಡರ ಪಾಸ್‌ಗಳು ಅವೈಜ್ಞಾನಿಕವಾಗಿದ್ದು, ಜನರಿಗೆ ತೀವ್ರ ಅನಾನುಕೂಲ ಆಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಯಾವುದೇ ರಸ್ತೆ ಮೇಲ್ಸೇತುವೆ ಹಾಗೂ ಅಂಡರ್‌ ಪಾಸ್‌ ನಿರ್ಮಿಸುವಾಗ ಕಡ್ಡಾಯವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ವಿನ್ಯಾಸ ಅಂತಿಮಗೊಳಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಸರ್ಕಾರಿ ಕಚೇರಿಗಳ ಜಾಗೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿನ್ಯಾಸವನ್ನು ಆದಷ್ಟುಬೇಗನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ನಗರದಲ್ಲಿ ಫ್ಲೈ ಓವರ್‌ ನಿರ್ಮಾಣ: ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ ಗಾಂಧಿ ನಗರದಿಂದ ಕಿಲ್ಲಾವರೆಗೆ ಅಶೋಕ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿರುವ ಪ್ರಸ್ತಾವಿತ ರಸ್ತೆ ಫ್ಲೈ ಓವರ್‌ ನಿರ್ಮಾಣ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು, ಆರಂಭಿಕವಾಗಿ ಪ್ರಸ್ತಾವಿತ ಯೋಜನೆಯ ಮೊದಲ ಹಂತ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು. ಹೆದ್ದಾರಿ ಎರಡೂ ಕಡೆಯಿಂದ ಬಸ್‌ ನಿಲ್ದಾಣ, ಆರ್‌ಟಿಒ ವೃತ್ತ ಸೇರಿದಂತೆ ನಗರ ಪ್ರವೇಶಿಸುವ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದು ಫ್ಲೈ ಓವರ್‌ ಮುಖ್ಯ ಉದ್ದೇಶವಾಗಿರಬೇಕು. 

ಅದೇ ರೀತಿ ವಿನ್ಯಾಸ ರೂಪಿಸಬೇಕು. ಬಳಿಕ ಪೀರನವಾಡಿವರೆಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಬಹುದು ಎಂದರು. ಇನ್ನೂ ಮುಂಗಾರು ಶುರುವಾಗದೆ ಬೇಸಿಗೆಯ ವಾತಾವರಣ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್‌ (ರಾಜು) ಸೇಠ್‌ ಮಾತನಾಡಿ, ತಹಸೀಲ್ದಾರ್‌ ಕಚೇರಿ ಶಿಥಿಲಗೊಂಡಿದ್ದರಿಂದ ಬಹುಮಹಡಿ ಕಟ್ಟಡ ನಿರ್ಮಿಸುವಾಗ ಇದಕ್ಕೂ ಆದ್ಯತೆ ನೀಡಬೇಕೆಂದು ಹೇಳಿದರು. ಜಿಲ್ಲೆಯಲ್ಲಿ ಮುಳುಗಡೆ ಎಂದು ಘೋಷಿಸಲಾಗಿರುವ ಗ್ರಾಮಗಳ ಪುನರ್ವಸತಿಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ಬಾಕಿ ಇದ್ದರೆ ನೀರಾವರಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಕೂಡಲೇ ಜಿಲ್ಲಾಡಳಿತದ ಜತೆ ಸಮನ್ವಯ ಸಾಧಿಸಿ ಜನರಿಗೆ ಪುನರ್ವಸತಿ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು.

ರಿಂಗ್‌ ರಸ್ತೆ ನಿರ್ಮಾಣದ ಬಳಿಕ ಬೆಳಗಾವಿ ನಗರದಲ್ಲಿ ಟ್ರಾಫಿಕ್‌ ಹಾಗೂ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಇದೇ ರೀತಿ ಪೀರನವಾಡಿ ಬಳಿಯೂ ಸಂಚಾರ ದಟ್ಟಣೆ ದಿನೇದಿನೆ ಹೆಚ್ಚಾಗುತ್ತಿರುವುದರಿಂದ ಇಲ್ಲಿಯೂ ರಸ್ತೆ ಮೇಲ್ಸೇತುವೆ ನಿರ್ಮಿಸಬಹುದು ಎಂಬುದನ್ನು ಸಚಿವರ ಗಮನಕ್ಕೆ ತಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ಮಾತನಾಡಿ, ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ಬೈಪಾಸ್‌ ರಸ್ತೆ ಯೋಜನೆ ಜತೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರಿಂಗ್‌ ರಸ್ತೆ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು. ಸಭೆಯಲ್ಲಿ ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿಪಂ ಸಿಇಒ ಹರ್ಷಲ ಭೋಯರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ರೈಲ್ವೆ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ನಗರ ನೀರು ಸರಬರಾಜು, ರಾಷ್ಟ್ರೀಯ ಹೆದ್ದಾರಿ, ಭೂಸ್ವಾಧೀನ, ಕಂದಾಯ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Chikkaballapur: ಚಿಂತಾಮಣಿ ಸ್ಟೇಡಿಯಂಗೆ ಸೌಲಭ್ಯ ಕಲ್ಪಿಸಲು ಸಚಿವ ಸುಧಾಕರ್‌ ಸೂಚನೆ

ಸಾಮಾಜಿಕ ಜಾಲತಾಣ ಮೇಲೆ ನಿಗಾ ವಹಿಸಿ: ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಹರಡುವಂತಹ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಅಂತಹ ಪ್ರಕರಣ ಕಂಡುಬಂದರೆ ಪೊಲೀಸ್‌ ಇಲಾಖೆ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಪೊಲೀಸ್‌ ಆಯುಕ್ತರು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು. ಭದ್ರತೆ ದೃಷ್ಟಿಯಿಂದ ನಗರ ಹಾಗೂ ಹೆದ್ದಾರಿಯಲ್ಲಿ ವಾಣಿಜ್ಯ ಕೇಂದ್ರಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

click me!