ಚುನಾವಣೆಗೆ ಕರೆತರುವ ಉದ್ದೇಶದಿಂದ ಮಠಾಧೀಶರ ಭೇಟಿಯಾಗಿಲ್ಲ: ಯಡಿಯೂರಪ್ಪ

Published : Feb 26, 2023, 10:19 AM IST
ಚುನಾವಣೆಗೆ ಕರೆತರುವ ಉದ್ದೇಶದಿಂದ ಮಠಾಧೀಶರ ಭೇಟಿಯಾಗಿಲ್ಲ: ಯಡಿಯೂರಪ್ಪ

ಸಾರಾಂಶ

ಚುನಾವಣೆಗೆ ಕರೆತರುವ ಉದ್ದೇಶದಿಂದ ಯಾವ ಮಠಾಧೀಶರನ್ನು ನಾನು ಭೇಟಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು. 

ಶಿವಮೊಗ್ಗ (ಫೆ.26): ಚುನಾವಣೆಗೆ ಕರೆತರುವ ಉದ್ದೇಶದಿಂದ ಯಾವ ಮಠಾಧೀಶರನ್ನು ನಾನು ಭೇಟಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧೀಶರನ್ನು ಕರೆತಂದು ಚುನಾವಣೆಗೆ ನಿಲ್ಲಿಸುವ ವಿಚಾರವಾಗಿ ನಾನು ಯಾರ ಬಳಿಯೂ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು. ನನ್ನ ವಯಸ್ಸು 70 ವರ್ಷ ದಾಟಿದೆ. ಈ ಹಿನ್ನೆಲೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಮತ್ತೊಬ್ಬರಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಈ ತೀರ್ಮಾನ ಮಾಡಿದ್ದೇನೆ. ಇದು ಹೊರತುಪಡಿಸಿದರೆ, ಬೇರೇನೂ ಕಾರಣವಿಲ್ಲ. 

ನಾನು ಚುನಾವಣೆ ನಿಲ್ಲದೇ ಇರಬಹುದು. ಆದರೆ, ನಾನು ಸಕ್ರಿಯ ರಾಜಕಾರಣದಲ್ಲಿದ್ದು, ಪಕ್ಷವನ್ನು ಅಧಿಕಾರದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಫೆ.27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಇದೆ. ಅಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಅವರು ಆಗಮಿಸಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುತ್ತಿರುವುದು ಖುಷಿ ತಂದಿದೆ. .449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಂತಿ ರೀತಿಯಲ್ಲಿ ಭಾಗಿಯಾಗಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಬಿಎಸ್‌ವೈಯಂತೆ ನಾನೂ ಬಿಜೆಪಿ ಸಂಘಟಿಸುವೆ: ವಿಜಯೇಂದ್ರ

ಚುನಾವಣಾ ರಾಜಕೀಯಕ್ಕಷ್ಟೆ ವಿದಾಯ: ನಾನು ಚುನಾವಣಾ ರಾಜಕೀಯಕ್ಕಷ್ಟೇ ವಿದಾಯ ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 140 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 15ನೇ ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ಅವರು, ಆರೆಸ್ಸೆಸ್‌, ಬಿಜೆಪಿ ಮತ್ತು ಶಿಕಾರಿಪುರ ಕ್ಷೇತ್ರದ ಜನರ ಗುಣಗಾನ ಮಾಡಿದರು.

ನಾನು ರಾಜಕಾರಣದಲ್ಲಿ ಇಷ್ಟುಎತ್ತರಕ್ಕೆ ಬೆಳೆಯಲು ಆರೆಸ್ಸೆಸ್‌ ನೀಡಿದ ತರಬೇತಿ, ನಮ್ಮ ಪಕ್ಷ ನೀಡಿದ ಅವಕಾಶಗಳು ಹಾಗೂ ಶಿಕಾರಿಪುರ ಕ್ಷೇತ್ರದ ಜನರ ಬೆಂಬಲ ಕಾರಣ. ಪಕ್ಷ ನನಗೆ ಅನೇಕ ಅವಕಾಶಗಳನ್ನು ನೀಡಿದೆ. ಶಿಕಾರಿಪುರದ ಪುರಸಭಾ ಸದಸ್ಯನಾಗಿ ಮುಖ್ಯಮಂತ್ರಿ ಹುದ್ದೆವರೆಗೂ ಬಂದಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡ ಯಡಿಯೂರಪ್ಪ ಅವರು, ಶಿಕಾರಿಪುರದ ಜನರಿಗೆ ನಾನು ಚಿರಋುಣಿ. ಅವರ ಆಶೀರ್ವಾದದಿಂದಲೇ ನನಗೆ ಎಲ್ಲವೂ ಸಿಕ್ಕಿದೆ. ಜನರ ಋುಣ ತೀರಿಸುವ ಕೆಲಸ ಮುಂದುವರೆಸುತ್ತೇನೆ. ನಾನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. 

ಆದರೆ, ಬದುಕಿನ ಕೊನೆಯ ಉಸಿರಿರುವವರೆಗೂ ಬಿಜೆಪಿಗಾಗಿ ದುಡಿಯುತ್ತೇನೆ. ಮುಂದಿನ ಚುನಾವಣೆಯಲ್ಲೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದರು. ರಾಜ್ಯದಲ್ಲಿ ಸರಿಯಾದ ರಸ್ತೆಗಳು ಇಲ್ಲದಿದ್ದ ಕಾಲದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಂತಹ ಹಿರಿಯರ ಜೊತೆ ಸೇರಿ ಪಕ್ಷ ಕಟ್ಟಿದ್ದೇನೆ. ಆಗ ಪಕ್ಷದಲ್ಲಿ ಯಾರೂ ಇರಲಿಲ್ಲ. ವಿಧಾನಸಭೆಗೆ ಬಿಜೆಪಿಯಿಂದ ಇಬ್ಬರು ಸದಸ್ಯರು ಆಯ್ಕೆಯಾಗಿ ರೈತರ ಪರವಾಗಿ ಹೋರಾಟ ಮಾಡಿದ ಕ್ಷಣಗಳು, ಬಗರ್‌ ಹುಕುಂ ಸಾಗುವಳಿದಾರರಿಗೆ ನ್ಯಾಯ ಕೊಡಿಸಲು ಮಾಡಿದ ಹೋರಾಟ ಹಾಗೂ ಕಷ್ಟದಲ್ಲಿ ಪಕ್ಷ ಕಟ್ಟಿದ್ದನ್ನು ಯಡಿಯೂರಪ್ಪ ನೆನಪಿಸಿಕೊಂಡರು.

ಬಿಜೆಪಿ ಸೇರಲು ಸ್ವಾಮೀಜಿಗಳಿಗೆ ಮುಕ್ತ ಅವಕಾಶ: ಸಚಿವ ಅಶ್ವತ್ಥ ನಾರಾಯಣ

ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಲವು ಶಾಸಕರ ಜತೆ ಸೇರಿ ವಿಧಾನಸೌಧದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌, ಮಹಾತ್ಮಗಾಂಧಿ ಪುತ್ಥಳಿಗಳಿಗೆ ಪುಷ್ಪನಮನ ಸಲ್ಲಿಸಿ, ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!