ಬಿಜೆಪಿಗೆ ಕ್ರಿಮಿನಲ್‌ಗಳ ಸೇರ್ಪಡೆ ಇಲ್ಲ: ನಳಿನ್‌ಕುಮಾರ್‌ ಕಟೀಲ್‌

By Govindaraj SFirst Published Dec 3, 2022, 2:40 AM IST
Highlights

ಯಾವುದೇ ಕಾರಣಕ್ಕೂ ಕ್ರಿಮಿನಲ್‌ ಹಿನ್ನೆಲೆಯುಳ್ಳವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಪುನರುಚ್ಚರಿಸಿರುವ ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಈಗ ಸೇರ್ಪಡೆಯಾಗಿರುವವರ ಬಗ್ಗೆ ಕೂಡ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. 

ಬೆಂಗಳೂರು (ಡಿ.03): ಯಾವುದೇ ಕಾರಣಕ್ಕೂ ಕ್ರಿಮಿನಲ್‌ ಹಿನ್ನೆಲೆಯುಳ್ಳವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಪುನರುಚ್ಚರಿಸಿರುವ ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಈಗ ಸೇರ್ಪಡೆಯಾಗಿರುವವರ ಬಗ್ಗೆ ಕೂಡ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ, ಕ್ರಿಮಿನಲ್‌ ಚಟುವಟಿಕೆ ಮತ್ತು ಗೂಂಡಾ ರಾಜಕೀಯದಂತಹ ದೇಶ ವಿರೋಧಿ ಚಟುವಟಿಕೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಇತ್ತೀಚೆಗೆ ಯಾವುದೋ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ನಮ್ಮವರು ರೌಡಿ ಸೈಲೆಂಟ್‌ ಸುನೀಲ್‌ ಜತೆ ಪಾಲ್ಗೊಂಡಿದ್ದನ್ನು ಗಮನಿಸಿದ್ದೇನೆ. ಈ ಸಂಬಂಧ ವಿವರಣೆ ಕೇಳಿದ್ದೇನೆ. ಯಾವುದೇ ಕಾರಣಕ್ಕೂ ಕ್ರಿಮಿನಲ್‌ ಹಿನ್ನೆಲೆಯಲ್ಲಿ ಉಳ್ಳವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಇಲ್ಲಿಗೆ ಈ ವಿಷಯಕ್ಕೆ ಮುಕ್ತಾಯ ಹಾಡುತ್ತೇನೆ’ ಎಂದು ಹೇಳಿದರು.

ಫೆಬ್ರವರಿಗೆ ಕಾಂಗ್ರೆಸ್‌, ಜೆಡಿಎಸ್‌ ಮನೆಗಳು ಖಾಲಿ: ನಳಿನ್‌ ಕುಮಾರ್‌ ಕಟೀಲ್‌

ಡಿಕೇಶಿ ಯಾರ ಶಿಷ್ಯ?: ‘ಕೆಪಿಸಿಸಿ ಡಿ.ಕೆ.ಶಿವಕುಮಾರ್‌ ಯಾರ ಶಿಷ್ಯ? ಎಲ್ಲಿಂದ ರಾಜಕಾರಣಕ್ಕೆ ಬಂದರು ಎಂದು ನಾನೇನೂ ಬಹಿರಂಗಪಡಿಸಬೇಕಿಲ್ಲ. ಡಿ.ಕೆ.ಶಿವಕುಮಾರ್‌ ಇತಿಹಾಸ, ವ್ಯವಸ್ಥೆಗಳು, ರಕ್ತಸಿಕ್ತ ಕಾಂಗ್ರೆಸ್‌ನ ಚಟುವಟಿಕೆಗಳು ನನಗಿಂತ ಹೆಚ್ಚಾಗಿ ಬೆಂಗಳೂರಿನ ಜನರಿಗೆ ತಿಳಿದಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಟಾಂಗ್‌ ನೀಡಿದರು. ‘ದೆಹಲಿ ಸೇರಿದಂತೆ ದೇಶದಲ್ಲಿ ಸಿಖ್ಖರ ನರಮೇಧ ಯಾರು ಮಾಡಿದ್ದಾರೆ ಎಂಬುದಕ್ಕೆ ನಾವೇನೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಹಿಂದೆ ಬಾಣಲೆಯಲ್ಲಿ ಬೆಂಕಿ ಹಾಕಿ ಯಾರನ್ನೋ ಸುಟ್ಟಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಉದಾಹರಣೆಗಳಿವೆ’ ಎಂದರು.

‘ರಾಜಕೀಯ ವ್ಯವಸ್ಥೆಯಲ್ಲಿ ಸಹಜವಾಗಿ ಕೆಲವೊಂದು ಅಚಾತುರ್ಯಗಳಾಗುತ್ತವೆ. ಇಂತಹ ಘಟನೆಗಳು, ಕ್ರಿಮಿನಲ್‌ ಪ್ರಕರಣಗಳ ಕಾರಣವನ್ನೂ ಗಮನಿಸುತ್ತೇವೆ. ಎಲ್ಲ ಪ್ರಕರಣಗಳನ್ನೂ ಒಂದೇ ರೀತಿ ನೋಡಲು ಸಾಧ್ಯವಿಲ್ಲ. ನಮ್ಮ ಸಂಘಟನೆಯ ಎಲ್ಲರ ಮೇಲೂ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಿಂದುತ್ವದ ಪರವಾದ ಹೋರಾಟ ಮಾಡಿದ್ದರ ವಿರುದ್ಧ ಪ್ರಕರಣಗಳೂ ಇವೆ. ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಎಲ್ಲರ ಮೇಲೆ ಪ್ರಕರಣ ದಾಖಲಿಸಿ ರೌಡಿ ಲಿಸ್ಟ್‌ಗೆ ಸೇರಿಸಲಾಗಿದೆ’ ಎಂದರು.

ರೌಡಿ ಸುನೀಲನ ಬಿಜೆಪಿಗೆ ಸೇರಿಸಿಕೊಳ್ಳಲ್ಲ: ಕುಖ್ಯಾತ ರೌಡಿ ಸೈಲೆಂಟ್‌ ಸುನೀಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ಸಂಸದರು ಸೇರಿದಂತೆ ಪಕ್ಷದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ. ಅಲ್ಲದೆ, ಯಾವುದೇ ಕಾರಣಕ್ಕೂ ಸೈಲೆಂಟ್‌ ಸುನೀಲ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದೂ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ‘ಸೈಲೆಂಟ್‌ ಸುನೀಲ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕೆಲವು ಪ್ರಮುಖರು ಭಾಗವಹಿಸಿದ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡರಿಂದ ವಿವರಣೆ ಕೇಳಲಾಗುವುದು’ ಎಂದು ಕಟೀಲ್‌ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದ ಗಾಂಧಿ ಹೆಸರಿನಲ್ಲಿ ಜನರಿಗೆ ಟೋಪಿ: ನಳೀನ್‌ಕುಮಾರ್‌ ಕಟೀಲ್‌

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್‌, ಶಾಸಕ ಉದಯ್‌ ಗರುಡಾಚಾರ್‌, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಮತ್ತಿತರ ಬಿಜೆಪಿ ಮುಖಂಡರು ಆ ಸಮಾರಂಭದಲ್ಲಿ ಪಾಲ್ಗೊಂಡಿರುವ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ ಟೀಕೆ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಪಕ್ಷದ ಪಾಳೆಯದಲ್ಲೂ ಈ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಳಿನ್‌ಕುಮಾರ್‌ ಕಟೀಲ್‌ ಅವರು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

click me!