ಕೇಂದ್ರ ಗೃಹ ಸಚಿವ ಅಮಿತ್ ಶಾ ಸುತ್ತೂರು ಮಠದ ಜಾತ್ರೆಗೆ ಬಂದಿದ್ದಾರೆ. ಮೈಸೂರು ಭಾಗದಪ್ರಮುಖರ ಜತೆಗೆ ಸಭೆ ನಡೆಸುತ್ತಿದ್ದಾರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ (ಫೆ.12): ಕೇಂದ್ರ ಗೃಹ ಸಚಿವ ಅಮಿತ್ ಶಾ ಸುತ್ತೂರು ಮಠದ ಜಾತ್ರೆಗೆ ಬಂದಿದ್ದಾರೆ. ಮೈಸೂರು ಭಾಗದಪ್ರಮುಖರ ಜತೆಗೆ ಸಭೆ ನಡೆಸುತ್ತಿದ್ದಾರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಪ್ರಮುಖರ ಜತೆಗೆ ಮಾತನಾಡಿದರೆ ಅದು ಚುನಾವಣೆ ರಣಕಹಳೆ ಅಲ್ಲ. ರಣಕಹಳೆ ಎನ್ನುವುದು ಮಾಧ್ಯ ಮಗಳ ಶಬ್ದ ಎಂದರು. ಬಹಳ ಎಂದರೆ ಇನ್ನು ಹದಿನೈದು ದಿನ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ.
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಕೋಟ್ಯಂತರ ಜನರ ಕನಸು ಎಂದರು.ಕೆಲ ದಿನಗಳ ಹಿಂದೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಇಂದೋರ್‌ಗೆ ಹೋಗಿದ್ದೆ. ಆದರೆ ಸಂಘದ ಯಾವ ಮುಖಂಡರನ್ನೂ ಭೇಟಿ ಮಾಡಿಲ್ಲ. ನಾನು ಯಾವ ಅಜೆಂಡಾ ಇಟ್ಟುಕೊಂಡು ಪಕ್ಷಕ್ಕೆ ಬಂದಿಲ್ಲ. ಹಿರಿಯರು ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಹೇಳಿದರು. ಅದಕ್ಕಾಗಿ ವಾಪಸ್ ಪಕ್ಷಕ್ಕೆ ಬಂದಿದ್ದೇನೆ ಎಂದರು. ನಾನು ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ವ್ಯಕ್ತಿ. ಎಲ್ಲರ ಜತೆಗೆ ನಾನು ಹೊಂದಿಕೊಳ್ಳುತ್ತೇನೆ.
ಸಾಲ ಮನ್ನಾಕ್ಕೆ ಸಿಎಂಗೆ ರೈತರ ಬೇಡಿಕೆ: ದೇಶದಲ್ಲೇ ಮಾದರಿಯಾಗುವಂತೆ ಕೃಷಿಕರಿಗೆ ಯೋಜನೆ ತನ್ನಿ!
ಅವರೇ ಹೊಂದಿಕೊಳ್ಳಲಿಲ್ಲ ಎಂದರೆ ನಾನೇನು ತಾನೇ ಮಾಡಲಿ ಎನ್ನುವ ಮೂಲಕ ಪಕ್ಷದಲ್ಲಿ ಇನ್ನು ಅಸಮಾಧಾನವಿದೆ ಎಂದು ಪರೋಕ್ಷವಾಗಿ ಹೇಳಿದರು. ಪಾಲಿಕೆ ಸದಸ್ಯೆ ಸರಸ್ವತಿ ದೋಂಗಡಿ ಸದಸ್ಯತ್ವ ರದ್ದಾಗಬಾರದಿತ್ತು. ನಾನು ಅವರ ಜತೆಗೆ ಮಾತನಾಡಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಮೊನ್ನೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತನಾಡಿದಾಗ ಕೇಸ್ ವಿಥ್‌ಡ್ರಾ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ತಡವಾಗಿದ್ದಕ್ಕೆ ಸದಸ್ಯತ್ವ ರದ್ದಾಗಿದೆ. ಇದೀಗ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ, ನೋಡೋಣ ಎಂದರು.
ವರಿಷ್ಠರು ಲೋಕಸಭೆಗೆ ಸ್ಪರ್ಧಿಸಲು ಸೂಚಿಸಿದರೆ ಸಿದ್ಧ: ಪಕ್ಷದ ವರಿಷ್ಠರು ಲೋಕಸಭೆಗೆ ಸ್ಪರ್ಧಿಸುವಂತೆ ಸೂಚನೆ ನೀಡಿದರೆ ಸ್ಪರ್ಧಿಸಲು ಸಿದ್ಧ. ಧಾರವಾಡ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿಸುವಂತೆ ತಿಳಿಸಿದರೆ ನಾನು ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿ ಕೆಲಸ ಮಾಡುವೆ. ಒಂದು ವೇಳೆ ಪಕ್ಷದ ಪರ ಕೆಲಸ ಮಾಡು ಎಂದರೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪರೋಕ್ಷವಾಗಿ ನಾನೂ ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಎಂದು ಸುಳಿವು ನೀಡಿದರು.
ಉಡುಪಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡಿಕೆ: ಮಾಹಿತಿ ಇಲ್ಲ ಎಂದ ಸಚಿವ ಗುಂಡೂರಾವ್
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಡಿ.ಕೆ. ಸುರೇಶರನ್ನು ಗುಂಡಿಕ್ಕಿ ಕೊಲ್ಲಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ, ಯಾರೇ ಆಗಲಿ ಲಕ್ಷ್ಮಣ ಗೇರೆ ದಾಟಬಾರದು ಎಂದರು. ಮಹಾತ್ಮ ಗಾಂಧೀಜಿ ಕೊಂದವರು ಬಿಜೆಪಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಉತ್ತರಿಸಿ, ಕಳೆದ 70 ವರ್ಷಗಳಿಂದ ಇದನ್ನೇ ಜನರ ಮುಂದೆ ಹೇಳುತ್ತಾ ಬಂದಿದ್ದೀರಿ. ಇನ್ನು ಎಷ್ಟು ದಿನಗಳ ವರೆಗೆ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಾ?. ಬಿಜೆಪಿಯವರು ಮಹಾತ್ಮ ಗಾಂಧೀಜಿ ಹಂತಕರು ಎಂದು ಪದೇ ಪದೇ ಹೇಳುವುದು ಸರಿಯಲ್ಲ ಎಂದರು.