ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳಲ್ಲಿ ದಿನೇ ದಿನೇ ಚಟುವಟಿಕೆಗಳು ಗರಿಗೆದರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಾಗಲು ಸಾಕಷ್ಟು ಆಕಾಂಕ್ಷಿಗಳಿದ್ದರೂ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿಯಾಗಲಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವಾಗಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಜ.2) : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳಲ್ಲಿ ದಿನೇ ದಿನೇ ಚಟುವಟಿಕೆಗಳು ಗರಿಗೆದರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಾಗಲು ಸಾಕಷ್ಟು ಆಕಾಂಕ್ಷಿಗಳಿದ್ದರೂ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿಯಾಗಲಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವಾಗಿದೆ.
2019ರ ಲೋಕಸಭಾ ಚುನಾವಣೆ ವೇಳೆ ಉಂಟಾಗಿದ್ದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಸುಮಲತಾ ಅಂಬರೀಶ್ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮಂಡ್ಯ ಕ್ಷೇತ್ರ ಜೆಡಿಎಸ್ ವಶವಾದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಸ್ಪರ್ಧೆ ಅತಂತ್ರವಾಗಲಿದೆ. ಅವರ ಮುಂದಿನ ರಾಜಕೀಯ ನಡೆ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಗುತ್ತಿಗೆ ನೌಕರರಿಗೂ ಗ್ರ್ಯಾಚ್ಯುಟಿ ಅನ್ವಯ; ಹೈಕೋರ್ಟ್ ಮಹತ್ವದ ಆದೇಶ!
ಕಾಂಗ್ರೆಸ್ ಪಕ್ಷದೊಳಗೆ ಪ್ರಬಲ ಅಭ್ಯರ್ಥಿಯ ಕೊರತೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಹಾಗೂ ಮಾಜಿ ಸಂಸದ ಎನ್.ಚಲುವರಾಯಸ್ವಾಮಿಗೇ ಅಭ್ಯರ್ಥಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಒಪ್ಪದ ಚಲುವರಾಯಸ್ವಾಮಿ ತಮ್ಮ ಪತ್ನಿ ಧನಲಕ್ಷ್ಮೀ ಅಥವಾ ಬೇರೆ ಯಾರನ್ನಾದರೂ ಅಭ್ಯರ್ಥಿ ಮಾಡುವಂತೆ ಕಾಂಗ್ರೆಸ್ ನಾಯಕರ ಮನವೊಲಿಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಕೈಪಾಳಯದಲ್ಲಿ ಗೆಲ್ಲುವ ಅಭ್ಯರ್ಥಿಗಳ ಕೊರತೆ:
ಕಾಂಗ್ರೆಸ್ ಪಕ್ಷದೊಳಗೆ ಲೋಕಸಭೆಗೆ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸಚಿವ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ, ಮುಖಂಡರಾದ ಕೀಲಾರ ರಾಧಾಕೃಷ್ಣ, ಡಾ.ಎಚ್.ಕೃಷ್ಣ, ಅಮರಾವತಿ ಚಂದ್ರಶೇಖರ್, ಡಾ.ಎಚ್.ಎನ್. ರವೀಂದ್ರ ಸೇರಿದಂತೆ ಅನೇಕ ಮಂದಿ ಇದ್ದಾರೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ಅಭ್ಯರ್ಥಿಗಳ ಕೊರತೆ ಇರುವುದರಿಂದ ಕಾಂಗ್ರೆಸ್ ನಾಯಕರು ಚಲುವರಾಯಸ್ವಾಮಿ ಅವರನ್ನೇ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಾಗಿರುವುದರಿಂದ ಚಲುವರಾಯಸ್ವಾಮಿ ಅವರು ತಮ್ಮ ಪತ್ನಿಯನ್ನೇ ಕಣಕ್ಕಿಳಿಸಿ ಗೆಲುವಿಗೆ ಶ್ರಮಿಸುವ ಅನಿವಾರ್ಯತೆ ಸೃಷ್ಟಿಯಾದಂತೆ ಕಂಡುಬರುತ್ತಿದೆ. ಇನ್ನು ಮಾಜಿ ಸಂಸದೆ ರಮ್ಯಾ ಅವರನ್ನು ಮಂಡ್ಯ ಕ್ಷೇತ್ರಕ್ಕೆ ಕರೆತರುವುದಕ್ಕೆ ಸ್ಥಳೀಯ ನಾಯಕರಿಗೂ ಇಷ್ಟವಿಲ್ಲ. ರಮ್ಯಾ ಕೂಡ ರಾಜಕಾರಣಕ್ಕೆ ಮರಳುವ ಬಗ್ಗೆ ಆಸಕ್ತಿ ವಹಿಸಿದಂತೆ ಕಂಡುಬರುತ್ತಲೂ ಇಲ್ಲ.
ಕೆಲವು ತಿಂಗಳಿಂದ ಸಚಿವ ಚಲುವರಾಯಸ್ವಾಮಿ ಭಾಗವಹಿಸಿದ ಅನೇಕ ಸಭೆ-ಸಮಾರಂಭಗಳಲ್ಲಿ ಪತ್ನಿ ಧನಲಕ್ಷ್ಮೀ ಹಾಜರಿ ತೀವ್ರ ಕುತೂಹಲ ಕೆರಳಿಸಿತ್ತು. ಪತ್ನಿಯನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ, ಚಲುವರಾಯಸ್ವಾಮಿ ಮಾತ್ರ ಆ ಪ್ರಸ್ತಾಪವೇ ಇಲ್ಲವೆಂದು ಹೇಳಿದ್ದರು. ಆದರೆ, ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಮತ್ತು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಮಾತ್ರ ಲೋಕಸಭೆಗೆ ಈಗಲೂ ಧನಲಕ್ಷ್ಮೀ ಹೆಸರನು ಪುನರುಚ್ಛರಿಸುತ್ತಲೇ ಇದ್ದಾರೆ.
ಅಷ್ಟೇ ಅಲ್ಲ, ಬಿಜೆಪಿ-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಬೇರೆ ಯಾರೇ ಸ್ಪರ್ಧಿಸಿದರೂ ಧನಲಕ್ಷ್ಮೀ ಅವರನ್ನು ಕಣಕ್ಕೆ ಇಳಿಸಬೇಕು. ಒಂದು ವೇಳೆ ಹಠಾತ್ ಬೆಳವಣಿಗೆ ನಡೆದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರೇನಾದರೂ ಮಂಡ್ಯದಿಂದ ಕಣಕ್ಕೆ ಇಳಿಯುವ ಮನಸ್ಸು ಮಾಡಿದರೆ ಆಗ ಅವರ ವಿರುದ್ಧ ಸ್ಪರ್ಧಿಸಲು ತಮಗೆ ಅವಕಾಶ ನೀಡಬೇಕು ಎಂದು ಮದ್ದೂರು ಶಾಸಕ ಉದಯ್ ಕಾಂಗ್ರೆಸ್ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಜೆಡಿಎಸ್‌ನಿಂದ ಪುಟ್ಟರಾಜು ಹೆಸರು ಮುಂಚೂಣಿ:
ಇನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಗ್ಗೂಡಿ ಕಾಂಗ್ರೆಸ್ ಮಣಿಸಲು ಸಜ್ಜಾಗಿವೆ. ಉಭಯ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಹೆಸರು ಮುಂಚೂಣಿಗೆ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲನುಭವಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ನಿಖಿಲ್ ಪರಾಭವಗೊಂಡಿದ್ದರು. ಪುತ್ರನ ಈ ಎರಡೂ ಸೋಲಿನಿಂದ ಜರ್ಜರಿತರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆಯಿಂದ ಪುತ್ರನನ್ನು ದೂರವಿಟ್ಟಿದ್ದಾರೆ. ತಾವೂ ಸಹ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಸಿ.ಎಸ್.ಪುಟ್ಟರಾಜು ಲೋಕಸಭೆ ಕ್ಷೇತ್ರದ ಟಿಕೆಟ್ ಹಾದಿ ಸುಗಮವಾದಂತಾಗಿದೆ ಎನ್ನಲಾಗುತ್ತಿದೆ.
ಇನ್ನು ಜೆಡಿಎಸ್‌ನಿಂದ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶ್‌ಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಅವರು ಸಮರ್ಥರಲ್ಲ ಎಂಬ ಭಾವನೆ ಜೆಡಿಎಸ್‌ನವರಲ್ಲೇ ಇದೆ. ಹಾಗಾಗಿ 2015ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಟಿ ರಮ್ಯಾ ವಿರುದ್ಧ ಗೆಲುವು ಸಾಧಿಸಿದ್ದ ಸಿ.ಎಸ್.ಪುಟ್ಟರಾಜು ಅವರನ್ನು ಎರಡನೇ ಬಾರಿಗೆ ಲೋಕಸಭೆ ಅಖಾಡಕ್ಕಿಳಿಸಲು ದಳಪತಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಅಂದು 2013ರ ಮೇಲುಕೋಟೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋತು ಆನಂತರ 2014ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ನಟಿ ರಮ್ಯಾ ವಿರುದ್ಧ ಪರಾಭವಗೊಂಡಿದ್ದ ಸಿ.ಎಸ್.ಪುಟ್ಟರಾಜು, ಮತ್ತೆ 2015ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಗೆದ್ದು ದಾಖಲೆ ಸೃಷ್ಟಿಸಿದ್ದರು. ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವ ಸಿ.ಎಸ್.ಪುಟ್ಟರಾಜು ಲೋಕಸಭೆ ಗದ್ದುಗೆ ಏರುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
3ರಿಂದ 4 ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ?: ಎಚ್.ಡಿ.ಕುಮಾರಸ್ವಾಮಿ
ಸುಮಲತಾ ನಡೆ ಏನು?
2023ರ ಚುನಾವಣಾ ಸಮಯದಲ್ಲಿ ಬಿಜೆಪಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿರುವ ಸುಮಲತಾ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾದಲ್ಲಿ ಸುಮಲತಾ ಕ್ಷೇತ್ರ ವಂಚಿತರಾಗುತ್ತಾರೆ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಎಂದು ಹೇಳುತ್ತಲೇ ಬರುತ್ತಿರುವ ಸುಮಲತಾ, ಅಂತಿಮ ಘಳಿಗೆಯಲ್ಲಿ ಬಿಜೆಪಿ ವರಿಷ್ಠರ ಮಾತಿಗೆ ಮಣಿದು ತಮ್ಮ ನಿರ್ಧಾರ ಬದಲಿಸುವರೋ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸುವರೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿಯಿಂದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.