ತುಮಕೂರು (ನ.23) : 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಿಂದ ಹಿಡಿದು ಈಗ 2023ರ ಚುನಾವಣೆಗೂ ಸಜ್ಜಾಗುತ್ತಿರುವ ಈ ಹೊತ್ತಿನವರೆಗೂ ಹಾಲಿ ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶಗೌಡ ಅವರ ನಡುವೆ ಇನ್ನೂ ಕದನ ವಿರಾಮ ಉಂಟಾಗಿಲ್ಲ.
2018ರ ಚುನಾವಣೆ ವೇಳೆ ಹಾಲಿ ಶಾಸಕ ಗೌರಿಶಂಕರ್ ನಕಲಿ ಬಾಂಡ್‌ಗಳನ್ನು ವಿತರಿಸಿದ್ದಾರೆಂಬ ಸುರೇಶಗೌಡ ಆರೋಪದಿಂದ ಆರಂಭವಾದ ಕದನ ಒಂದು ಅವಧಿ ಮುಗಿದು ಹೊಸದಾಗಿ ಚುನಾವಣೆ ಹತ್ತಿರ ಇರುವ ಈ ಸಂದರ್ಭದವರೆಗೂ ಮುಂದುವರೆದಿದೆ. ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಪೈಕಿ ತುಮಕೂರು ಗ್ರಾಮಾಂತರ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿದ್ದು ಜಿದ್ದಾ ಜಿದ್ದಿನ ಕಣವಾಗಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಹಾಲಿ ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶಗೌಡರ ನಡುವಿನ ವಾಕ್ಸಮರ ಮುಂದುವರೆದಿದ್ದು ಈಗ ಹಾಲಿ ಶಾಸಕರು ಕೊಲೆ ಸುಪಾರಿ ನೀಡಿದ್ದಾರೆಂಬ ಗಂಭೀರ ಆರೋಪವನ್ನು ಸುರೇಶಗೌಡ ಮಾಡುವುದರೊಂದಿಗೆ ಮತ್ತೊಂದು ವಾಕ್ಸಮರಕ್ಕೆ ಕಾರಣರಾಗಿದ್ದಾರೆ.
ಕನ್ನಡ ಕೇವಲ ಅಕ್ಷರವಲ್ಲ ಅದು ನಮ್ಮ ಸಂಸ್ಕೃತಿ: ಬರಗೂರು ರಾಮಚಂದ್ರಪ್ಪ
ಸುರೇಶಗೌಡರ ವಿರುದ್ಧ ದೂರು:
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅರೆಯೂರಿನಲ್ಲಿ ಕಳೆದ ಎರಡು ದಿವಸಗಳ ಹಿಂದೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುರೇಶಗೌಡ ಅವರು ಶಾಸಕ ಗೌರಿಶಂಕರ್ ನನ್ನ ಕೊಲೆಗೆ ರೌಡಿಶೀಟರ್ ಒಬ್ಬರಿಗೆ 5 ಕೋಟಿಗೆ ಸುಫಾರಿ ನೀಡಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಶಾಸಕ ಗೌರಿಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಂದು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುರೇಶಗೌಡ ಅವರು ಹಾಲಿ ಶಾಸಕ ಗೌರಿಶಂಕರ್ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿದ್ದರು. ಈ ಸಂಬಂಧ ಗೌರಿಶಂಕರ್ ಅವರು ನನ್ನ ಘನತೆಗೆ ತೇಜೋವಧೆ ಮಾಡಲು ಈ ರೀತಿಯ ಸುಳ್ಳು ಆರೋಪವನ್ನು ಮಾಜಿ ಶಾಸಕ ಸುರೇಶಗೌಡ ಮಾಡಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ಸುರೇಶಗೌಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ ಬಂದಿರುವುದು ನಿಜ: ಸುರೇಶಗೌಡ
ನನಗೆ ಕೊಲೆ ಬೆದರಿಕೆ ಬಂದಿರುವುದು ನಿಜ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಬಿ. ಸುರೇಶಗೌಡ ಸ್ಪಷ್ಟಪಡಿಸಿದ್ದು ಆಯುಧಪೂಜೆ ದಿವಸ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಕೊಲೆ ಬೆದರಿಕೆ ಬಗ್ಗೆ ವಿವರಣೆ ನೀಡಿದ್ದಾಗಿ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಪೊಲೀಸ್ ಕಮಿಷನರ್‌ಗೂ ಸಹ ದೂರು ಕೊಟ್ಟಿದ್ದೇನೆ. ಕಳೆದ ವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಸರ್ಕಾರ ಶಕ್ತಿಶಾಲಿಯಾಗಿದೆ, ಗುಪ್ತಚರ ಇಲಾಖೆಯಿಂದ ವರದಿ ಬಂದಿದೆ, ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವ ಕಾರಣ ಮಾಧ್ಯಮದ ಮುಂದೆ ಬಂದಿರಲಿಲ್ಲ ಎಂದಿದ್ದಾರೆ.
ಸಾವಿರಾರು ಕಾರ್ಯಕರ್ತರು ಸೇರಿದ ಕಾರಣ ಅರೆಯೂರು ಕಾರ್ಯಕ್ರಮದಲ್ಲಿ ಭಾವನಾತ್ಮಕವಾಗಿ ಹೇಳಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ ರಾಜಕಾರಣ ನಡೆಯುತ್ತದೆ. ವ್ಯಕ್ತಿಗತ ಆರೋಪ ಯಾರು ಮಾಡುವುದಿಲ್ಲ. ರಾಜಕೀಯವಾಗಿ ವಿರೋಧ ಮಾಡುತ್ತಾರೆ. ಕೊಲೆ ಮಾಡುವಷ್ಟುನೀಚ ರಾಜಕಾರಣಕ್ಕೆ ಯಾರು ಇಳಿದಿಲ್ಲ. ಶಾಸಕ ಗೌರಿಶಂಕರ್, ಅಟಿಕಾ ಬಾಬು ಸೇರಿ 5 ಕೋಟಿ ಹಣ ಕೊಡುತ್ತಾರೆ, ಸುರೇಶ ಗೌಡರನ್ನು ಕೊಲೆ ಮಾಡಬೇಕು ಅಂತಾ ಜೈಲಿನಲ್ಲಿರುವ ಒಬ್ಬ ಖೈದಿಗೆ ಸುಮಾರು ಬಾರಿ ವ್ಯಕ್ತಿಯೊಬ್ಬ ಫೋನ್ ಮಾಡಿದ್ದಾರೆ ಎಂದು ದೂರಿದ್ದಾರೆ.
ಕಳೆದ ಹದಿನೈದು ದಿನದ ಹಿಂದೆ ಎಲ….ಎಚ್ ನಲ್ಲಿ ಶಾಸಕ ಗೌರಿಶಂಕರನ್ನು ಅಟಿಕಾ ಬಾಬು ಭೇಟಿಯಾಗಿರುವ ಬಗ್ಗೆ ಮಾಹಿತಿ ಇದೆ ಎಂದ ಅವರು ಸರ್ಕಾರದಲ್ಲಿರುವ ಇಂಟೆಲಿಜೆನ್ಸ್ ತುಂಬಾ ಸ್ಟ್ರಾಂಗಾಗಿರುವುದರಿಂದ ಎಲ್ಲಾ ಮಾಹಿತಿ ಲಭ್ಯವಾಗಿದೆ. ಗೌರಿಶಂಕರ್ ಭಾಗಿಯಾಗಿದ್ದಾರೋ ಇಲ್ಲವೋ ಗೊತಿಲ್ಲಾ,ಆದರೆ ತನಿಖೆ ಆಗಬೇಕು. ಇದರ ಹಿಂದೆ ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ತನಿಖೆ ಆಗಬೇಕು. ಗೌರಿಶಂಕರ್ ಹಿಂಬಾಲಕ ಹಿರೇಹಳ್ಳಿ ಮಹೇಶ್ ಜೈಲಿನಲ್ಲಿರುವ ಖೈದಿಗೆ ಕರೆ ಮಾಡಿ ಮಾತನಾಡಿರುವ ಪೋನ್ ನಂಬರ್‌ಕೂಡ ಕೊಟ್ಟಿದ್ದೇನೆ ಎಂದರು.
Tumakuru: ಸತತ 110 ದಿನದಿಂದ ಹರಿಯುತ್ತಿರುವ ಜಯಮಂಗಲಿ ನದಿ: ರೈತರಲ್ಲಿ ಸಂತಸ
ಮಾಜಿ ಶಾಸಕ ಸುರೇಶ ಗೌಡರಿಂದ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಜೀವ ಭಯವಿದೆ. ಕೂಡಲೇ ಈ ಪ್ರಕರಣವನ್ನು ಸಿಓಡಿ ತನಿಖೆ ನಡೆಸಿ ಸುರೇಶ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಈ ಕುರಿತ ದೂರನ್ನು ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೂ ರವಾನಿಸಲಾಗಿದೆ.
ಗೌರಿಶಂಕರ್ ಶಾಸಕ
ನಾನು ಗೌರಿಶಂಕರ್ ವಿರುದ್ಧ ತರಕಾರು ಅರ್ಜಿಯನ್ನು ಕೊಟ್ಟಿದ್ದೆ, ಅದು ಜಡ್ಜ್‌ಮೆಂಚ್ ಹಂತದಲ್ಲಿದೆ. ಆ ಹತಾಷೆ ಭಾವದಿಂದ ಹಿರೇಹಳ್ಳಿ ಮಹೇಶ್, ಗೌರಿಶಂಕರ್ ಇಬ್ಬರು ಸೇರಿ ಹಣ ಒದಗಿಸಲು ಅಟಿಕಾ ಬಾಬು ಹೆಸರನ್ನು ಕೂಡ ತಂದಿದ್ದಾರೆ. ನನಗೆ ಗೌರಿಶಂಕರ್ ಮೇಲೆ ವೈಯಕ್ತಿಕವಾಗಿ ಆರೋಪ ಮಾಡುವುದಕ್ಕೆ ಇಷ್ಟಇಲ್ಲಾ. ಸತ್ಯ ಇಲ್ಲದೇ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ನಕಲಿ ವ್ಯಾಕ್ಸಿನ್, ನಕಲಿ ಬಾಂಡ್ ಬಗ್ಗೆ ತಕರಾರು ಅರ್ಜಿಯ ತನಿಖೆ ನಡೆಯುತ್ತಿದೆ. ಗ್ರಾಮಾಂತರ ಜನರು ಮುಗ್ದರಿದ್ದಾರೆ, ಇಲ್ಲಿ ಕೂಡ ಏನೊ ಮಾಡೋಕೆ ಹೋದರು, ಆದರೆ ನಾನ್ ಬಿಟ್ಟಿಲ್ಲ.
ಬಿ. ಸುರೇಶಗೌಡ ಮಾಜಿ ಶಾಸಕ