ರಾಜ್ಯದಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರೋಲ್ಲ
ಹೆಚ್.ಡಿ. ಕುಮಾರಸ್ವಾಮಿ ಮಾತುಗಳ್ಯಾವುದೂ ನಿಜವಾಗುವುದೂ ಇಲ್ಲ
ಕನ್ನಡಪ್ರಭ ವಾರ್ತೆ
ಮಂಡ್ಯ (ನ.23): ಸ್ತ್ರೀಶಕ್ತಿ ಸ್ವಸಹಾಯ ಸಂಘ ಸಾಲ ಮನ್ನಾ, ದಲಿತ ಮುಖ್ಯಮಂತ್ರಿ, ಮುಸ್ಲಿಂ ಉಪಮುಖ್ಯಮಂತ್ರಿ ಮಾಡುತ್ತೇನೆಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳುವ ಮಾತುಗಳೆಲ್ಲವೂ ಸುಳ್ಳಿನ ಕಂತೆ. ಅದರಲ್ಲಿ ಯಾವುದೂ ಸತ್ಯವಾಗುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ ಹೇಳಿದರು.
ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಯಾವಾಗಲೂ ಬಹಳ ಬುದ್ಧಿವಂತಿಕೆಯಿಂದ ಮಾತನಾಡುತ್ತಾರೆ. ಚುನಾವಣೆ ವೇಳೆ ಹೆಚ್ಚು ಬುದ್ಧಿವಂತರಾಗಿ ತಮ್ಮಿಂದ ಸಾಧ್ಯವಾಗದ ಭರವಸೆಗಳನ್ನೆಲ್ಲಾ ಜನರಿಗೆ ಚುನಾವಣಾ ಸಮಯದಲ್ಲಿ ನೀಡುತ್ತಾರೆ. ಅವುಗಳು ಈಡೇರದಿದ್ದಾಗ ಜೆಡಿಎಸ್‌ಗೆ ಬಹುಮತ ಬರಲಿಲ್ಲವಾದ ಕಾರಣ ನಾನು ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲವೆಂದು ಜನರ ಮುಂದೆ ಬಂದು ಕಣ್ಣೀರಿಡುತ್ತಾರೆ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವ್ಯಂಗ್ಯವಾಡಿದರು.
Mandya: ನಾಗಮಂಗಲ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಚಲುವರಾಯಸ್ವಾಮಿ
ಕಳೆದ ಚುನಾವಣಾ ಸಮಯದಲ್ಲೂ ರೈತರ ಸಾಲ ಮನ್ನಾ, ಸ್ವಸಹಾಯ ಸಂಘಗಳ ಸಾಲ ಮನ್ನಾ, ಅಡವಿಟ್ಟ ಚಿನ್ನದ ಮೇಲಿನ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರಲಿಲ್ಲ. ಕೊನೆಗೆ ಕಾಂಗ್ರೆಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾದರು. ಆದರೂ, ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲಿಲ್ಲ, ಏಳು ಜನ ಶಾಸಕರಿದ್ದರೂ ರಸ್ತೆಗಳಲ್ಲಿನ ಒಂದೇ ಒಂದು ಗುಂಡಿ ಮುಚ್ಚಲಿಲ್ಲಲ. ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸಾಲ ಮನ್ನಾ ಮಾಡಲಿಲ್ಲ. ಜಿಲ್ಲೆಗೆ ೮ ಸಾವಿರ ಕೋಟಿ ರು. ಕೊಟ್ಟೆ ಎಂದು ಇಂದಿಗೂ ಹೇಳುತ್ತಲೇ ಇದ್ದಾರೆ. ಆ ಹಣ ಎಲ್ಲಿಗೆ ಹೋಯಿತು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಇದೆಲ್ಲವೂ ಜನರಿಗೆ ಗೊತ್ತಿಲ್ಲವೇ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಉಪಮುಖ್ಯಮಂತ್ರಿ, ಲೋಕೋಪಯೋಗಿ, ಹಣಕಾಸು, ಇಂಧನ, ನೀರಾವರಿ ಖಾತೆಗಳನ್ನು ಬೇರೆಯವರಿಗೆ ನೀಡುವುದೇ ಇಲ್ಲ. ಎಲ್ಲ ಸಚಿವ ಸ್ಥಾನಗಳನ್ನು ತಮ್ಮ ಬಳಿ ಹಾಗೂ ತಮ್ಮ ಕುಟುಂಬ ಸದಸ್ಯರ ಬಳಿಯೇ ಇಟ್ಟುಕೊಂಡಿರುತ್ತಾರೆ. ಅಂತಹುದರಲ್ಲಿ ದಲಿತ ಮುಖ್ಯಮಂತ್ರಿ, ಮುಸ್ಲಿಂ ಮುಖ್ಯಮಂತ್ರಿ ಎನ್ನುವುದೆಲ್ಲಾ ಬರೀ ಬೊಗಳೆ ಮಾತುಗಳು ಎಂದು ಜರಿದರು.