
ಕೊಳ್ಳೇಗಾಲ (ಮೇ.20): ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಸಂದರ್ಭದಲ್ಲಿ ಭಾರಿ ಸದ್ದು ಮಾಡಿತ್ತು. ಕಾಡಂಚಿನ ಕ್ಷೇತ್ರದ ಜನರಿಗೆ ಚುನಾವಣಾ ದೃಷ್ಟಿಯಿಂದ ಕೆಲವರು ನೆರವಾಗಿದ್ದರು. ಬೃಹತ್ ಆರೋಗ್ಯ ಶಿಬಿರ, ಉದ್ಯೋಗ ಮೇಳ ಅಷ್ಟೇ ಅಲ್ಲ ಜನಸಂಕಲ್ಪ ಯಾತ್ರೆಯೂ ಇಲ್ಲಿಂದಲೇ ಆರಂಭವಾಗಿತ್ತು. ಆದರೆ, ಕ್ಷೇತ್ರದಲ್ಲಿದ್ದು, ಸಂಘಟನೆ ಮಾಡದೆ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅತಿಥಿಗಳಂತೆ ಬಂದವರಿಗೆ, ರಾಜ್ಯದ ಪ್ರಭಾವಿ ನಾಯಕರ ಒತ್ತಾಸೆಗೆ ಮಣಿದು ಟಿಕೆಟ್ ನೀಡಿದ್ದೇ ಬಿಜೆಪಿ ಸೋಲಿಗೆ ಕಾರಣವಾಯಿತು.
ಕಳೆದ ಬಾರಿ 2ನೇ ಸ್ಥಾನ ಪಡೆದು ಕಡಮೆ ಅಂತರದಲ್ಲಿ ಪರಾಭವ ಹೊಂದಿದ್ದ ಹನೂರಿನ ಬಿಜೆಪಿ ಅಭ್ಯರ್ಥಿ ಡಾ. ಪ್ರೀತನ್ ನಾಗಪ್ಪ 2023ರ ವಿಧಾನಸಭೆ ಚುನಾವಣೆಯಲ್ಲಿ 35,567ಮತಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಈ ಸಂಬಂಧ ತೀರಾ ಕಳಪೆ ಫಲಿತಾಂಶಕ್ಕೆ ಕಾರಣ ಹುಡುಕಲು ಹಾಗೂ ಚುನಾವಣೆಯಲ್ಲಿ ತಮ್ಮ ಪರ ದುಡಿದವರಿಗೆ ಕೃತಜ್ಞತೆ ಸಲ್ಲಿಸಲು ಕೃತಜ್ಞತೆ ಸಭೆಯನ್ನು ಡಾ. ಪ್ರೀತನ್ ನಾಗಪ್ಪ ಭಾನುವಾರ ಕಾಮಗೆರೆ ನಿವಾಸದಲ್ಲಿ ಸಭೆ ಕರೆದಿದ್ದಾರೆ. ಭಾನುವಾರ ನಡೆಯುವ ಸಭೆಯಲ್ಲಿ ತಮ್ಮ ಸೋಲಿಗೆ ಹಾಗೂ ಕಳಪೆ ಮತಗಳಿಕೆಗೆ ಕಾರಣಗಳೇನು ಎಂಬ ಕುರಿತು ಚರ್ಚೆಗಳು ನಡೆಯಲಿವೆ. ಜೊತೆಗೆ ಸ್ವಪಕ್ಷದ ಕೆಲ ಮುಖಂಡರು ರೆಸಾರ್ಟ್‌ನಲ್ಲಿ ಸಭೆ ನಡೆಸಿ ಅನ್ಯಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಸೂಚಿಸಿರುವ ಕುರಿತು ವದಂತಿಗಳು ಹಬ್ಬಿದೆ. ಮಾತ್ರವಲ್ಲ ಈ ಸಂಬಂಧ ವಿಡಿಯೋ ಸಹ ಇದೆ ಎಂದು ಹೇಳಲಾಗುತ್ತಿದೆ.
ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ
ಬಿಜೆಪಿಯ ಪ್ರಭಾವಿ ಮುಖಂಡರ ಸಂಬಂಧಿಯೊಬ್ಬರು ಪಕ್ಷವೊಂದರ ಪರ ಕೆಲಸ ಮಾಡಿ, ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಬೇಡಿ ಎಂಬುದಾಗಿ ತಮ್ಮ ಕೆಲ ಬೆಂಬಲಿಗರಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಮಾತ್ರವಲ್ಲ ಪಕ್ಷಕ್ಕೆ ಕಳಪೆ ಮತಗಳಿಸಲು ಪಕ್ಷದಲ್ಲೆ ಗುರುತಿಸಿಕೊಂಡಿದ್ದ ಕೆಲವರ ಕುತಂತ್ರವೂ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು, ಈ ಸಂಬಂಧ ಕೃತಜ್ಞತಾ ಸಭೆಯಲ್ಲಿ ಕೆಲ ಬಿಜೆಪಿ ಮುಖಂಡರೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚುನಾವಣಾ ಫಲಿತಾಂಶ ಮುಗಿದ 7ದಿನಗಳು ಕಳೆದ ಬಳಿಕ ಕೃತಜ್ಞತಾ ಸಭೆ ಕರೆದಿರುವುದು ನಾನಾ ಚರ್ಚೆಗೆ ಕಾರಣವಾಗಿದ್ದು ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ.
ಸೋಲಿಗೆ ಕಾರಣಗಳಿವು: ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ, ಅಭ್ಯರ್ಥಿ ಪಕ್ಷದ ಕೆಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋದದ್ದು, ಟಿಕೆಟ್ ಪ್ರಕಟವಾದರೂ ತಕ್ಷಣಕ್ಕೆ ಪ್ರಚಾರ ಕೈಗೊಳ್ಳಲು ಮುಂದಾಗದಿರುವುದು. ಕೊನೆ ಕ್ಷಣದಲ್ಲಿ ಸಂಪನ್ಮೂಲ ಕ್ರೋಡಿಕರಣದಲ್ಲಿ ಎಡವಿದ್ದು, ಬೂತ್ ಮಟ್ಟದಲ್ಲಿ ಹಣ ಹಂಚಿಕೆಯಲ್ಲಿ ತೀರಾ ಕಳಪೆ ಸಾಧನೆ, ಸ್ವಪಕ್ಷದಲ್ಲಿನ ಕೆಲವರು ಕಾಲೆಳೆದದ್ದು, ಮುನಿಸಿಕೊಂಡು ಅಂತರ ಕಾಯ್ದುಕೊಂಡ ಕೆಲವರನ್ನು ಸಮಾಧಾನಪಡಿಸದೆ ಬಿಟ್ಟದ್ದು. ಕೆಲವರನ್ನೆ ನಂಬಿದ್ದು, ಪಕ್ಷದ ಪದಾಧಿಕಾರಿಗಳಲ್ಲಿ ಭಿನ್ನಭಿನ್ನ ರಾಗ, ಮೃಧು ಧೋರಣೆ, ನಾಗಪ್ಪ ಕುಟುಂಬಕ್ಕೆ ಸಾಂಪ್ರದಾಯಿಕ ಮತವಿದೆ ಎಂದು ಅದನ್ನೆ ನಂಬಿ ಕುಳಿತದ್ದು, ಕಳೆದ ಚುನಾವಣೆಯಲ್ಲಿ ಸೋತ ಬಳಿಕ 4ವರ್ಷ ಬೆಂಗಳೂರಿ®ಲ್ಲೇ ಉಳಿದದ್ದು, ಚುನಾವಣೆ ವರ್ಷದಲ್ಲಿ ಡಾ. ಪ್ರೀತನ್ ನಾಗಪ್ಪ ಆಗಮನ ಸೇರಿದಂತೆ ಇನ್ನಿತರೆ ವೈಪಲ್ಯಗಳು ಸೋಲಿಗೆ ಪ್ರಮುಖ ಕಾರಣಗಳು ಎಂದು ಬಿಜೆಪಿ ಮೂಲಗಳಲ್ಲಿ ಚರ್ಚೆಯಾಗುತ್ತಿದೆ. ಪ್ರಸ್ತುತ ಕಳಪೆ ಮತಗಳಿಕೆ ಫಲಿತಾಂಶಕ್ಕೆ ಹನೂರು ಕ್ಷೇತ್ರದ ಕೆಲ ಗ್ರಾಮಗಳಲ್ಲಿ ನಾನಾ ಚರ್ಚೆ ಹಿನ್ನೆಲೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚಾಮರಾಜನಗರ ಮೌಢ್ಯ ಅಳಿಸಿದ್ದ ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ!
ಸೋತರೆ ಊರು ಬಿಡ್ತಾರಂತೆ: ಈ ಚುನಾವಣೆಯಲ್ಲಿ ಡಾ. ಪ್ರೀತನ್ ನಾಗಪ್ಪ ಅವರನ್ನು ಸೋಲಿಸಿದರೆ ಮುಂದಿನ ದಿನಗಳಲ್ಲಿ ಅವರು ಊರು ಬಿಡುತ್ತಾರೆ. ಗಂಟು, ಮೂಟೆ ಕಟ್ಟುತ್ತಾರೆ. ಮುಂದೆ ಇಲ್ಲಿ ನಾಯಕರಾರು ಉಳಿಯಲ್ಲ. ಅನ್ಯರನ್ನು ಇಲ್ಲಿಗೆ ಕರೆತರಬಹುದು, ಆ ಮೂಲಕ ಬಿಜೆಪಿಗೆ ಮತ್ತೊಬ್ಬ ಪ್ರಬಲ ನಾಯಕರನ್ನು ಸೃಷ್ಟಿಸಬಹುದು ಎಂಬ ಪಕ್ಷದೊಳಗಿನ ಸಂಚು, ತಂತ್ರಗಾರಿಕೆ ಜೊತೆಗೆ ಅವರು ಗೆದ್ದರೆ ಇನ್ನು 10 ವರ್ಷಗಳ ಕಾಲ ಅವರ ಕಾಲೆಳೆಯಲು ಸಾಧ್ಯವಿಲ್ಲ, ಈ ಚುನಾವಣೆಯಲ್ಲೇ ಸೋಲಿಸುವ ಕೆಲಸ ಮಾಡೋಣ ಎಂಬ ವ್ಯವಸ್ಥಿತಿ ಸಂಚು ಸಹ ಸೋಲಿಗೆ ಮುನ್ನುಡಿಯಾಯಿತು ಎಂದು ಚರ್ಚೆಯಾಗುತ್ತಿದೆ. ಜೊತೆಗೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರು ಕೆಲ ಕಾರ್ಯಕರ್ತರು, ಮುಖಂಡರೊಂದಿಗೆ ಆಡಿದ ಕೆಲ ದುಡಿಕಿನ ಮಾತುಗಳನ್ನೆ ಕೇಳಿಸಿಕೊಂಡಿದ್ದ ಕೆಲವರು ಈ ಚುನಾವಣೆಯಲ್ಲಿ ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.