ಕಳವು ಮಾಡುವುದು, ಸುಳ್ಳು ಹೇಳುವುದು ಕಾಂಗ್ರೆಸ್‌ ಜಾಯಮಾನ : ರವಿಕುಮಾರ್

By Kannadaprabha NewsFirst Published Nov 19, 2022, 9:45 AM IST
Highlights
  • ಕಳವು ಮಾಡುವುದು, ಸುಳ್ಳು ಹೇಳುವುದು ಕಾಂಗ್ರೆಸ್‌ ಜಾಯಮಾನ
  •  ಚಿತ್ರದುರ್ಗದಲ್ಲಿ ವಿಪ ಸದಸ್ಯ ರವಿಕುಮಾರ್‌ ಆರೋಪ
  • ಮತದಾರರ ಪಟ್ಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮೇಲೆ ಚುನಾವಣೆ ನಡೆಸಲು ಆಗ್ರಹ

ಚಿತ್ರದುರ್ಗ (ನ.19) : ಕಳವು ಮಾಡುವುದು, ಸುಳ್ಳು ಹೇಳುವುದು ಕಾಂಗ್ರೆಸ್‌ ಜಾಯಮಾನ. ಅಂತಹ ನಡಾವಳಿಗಳು ಬಿಜೆಪಿಯಲ್ಲಿಲ್ಲವೆಂದು ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಕಲಿ ಐಡಿ ನಿರ್ಮಿಸಿ ಬಿಎಲ್‌ಓ ಗಳನ್ನು ನೇಮಕ ಮಾಡಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂಬ ಕಾಂಗ್ರೆಸ್‌ ಒತ್ತಾಯ ತರವಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ 2018ರ ಡಿ.22 ರಂದು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿದೆ ಎಂದರು.

ಗುರುವಿಗೆ ಶರಣಾದರೆ ಸನ್ಮಾರ್ಗ ದೊರೆಯಲು ಸಾಧ್ಯ: ರಾಮಾನಂದ ಭಾರತಿ ಶ್ರೀ

ಪ್ರತಿಯೊಬ್ಬರ ಆಧಾರ್‌ ಕಾರ್ಡ್‌ ಮತದಾರರ ಪಟ್ಟಿಗೆ ಲಿಂಕ್‌ ಮಾಡಿ ಅದರ ಆಧಾರದ ಮೇಲೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಶನಿವಾರ ಚುನಾವಣಾ ಆಯೋಗವ ಭೇಟಿ ಮಾಡಲಾಗುವುದೆಂದು ಹೇಳಿದರು.

ಚಿಲುಮೆ ಸಂಸ್ಥೆಯನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿರುವ ಬೆನ್ನ ಹಿಂದೆಯೇ ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ರಂಗಪ್ಪ ದೂರು ನೀಡಿ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 130 ಕೋಟಿ ರು. ಖರ್ಚು ಮಾಡಿ ಜಾತಿ ಸಮೀಕ್ಷೆ ಮಾಡಿರುವ ಮಾಹಿತಿ ಸೋರಿಕೆಯಾಗಿದೆ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿರುವುದು ಸಿದ್ದರಾಮಯ್ಯನವರೆ ವಿನಃ ಮುಖ್ಯಮಂತ್ರಿಅಲ್ಲವೆಂದರು.

ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವುದು, ಡಿಲೀಟ್‌ ಮಾಡುವುದು ಚುನಾವಣಾ ಆಯೋಗದ ಕೆಲಸ. ಡಬ್ಬಲ್‌, ತ್ರಿಬಲ್‌ ಎಂಟ್ರಿಯಾಗಿರುವ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯುವಂತೆಯೂ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇವೆ. ಅಲ್ಪಸಂಖ್ಯಾತರನ್ನು ಓಟ್‌ಬ್ಯಾಂಕ್‌ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಇದು ಇಷ್ಟವಿಲ್ಲ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಕಾಂಗ್ರೆಸ್‌ ನಿರುದ್ಯೋಗಿಗಳ ಫೋರಂ ಆಗಿದೆ ಎಂದು ಲೇವಡಿ ಮಾಡಿದರು.

ನಾಗಮೋಹನ್‌ದಾಸ್‌ ವರದಿ ಬಂದ ನಂತರ ಪರಿಶಿಷ್ಟಜಾತಿ, ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಆದರೆ ಮೀಸಲಾತಿ ಹೆಚ್ಚಿಸಿದ್ದು ನಾವುಗಳು ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ. ಚಿಲುಮೆ ಸಂಸ್ಥೆ ಅಕ್ರಮ ನಡೆಸಿದೆ ಎನ್ನುವುದಾದರೆ ತನಿಖೆಗೆ ಒಳಪಡಿಸುತ್ತೇನೆಂದು ಸ್ವತಃ ಮುಖ್ಯಮಂತ್ರಿಗಳೆ ಹೇಳಿದ್ದಾರೆ. ಇನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬ ಮತದಾರನ ಹೆಸರು ಆಧಾರ್‌ಗೆ ಲಿಂಕ್‌ ಆದ ನಂತರವೇ ಚುನಾವಣೆ ನಡೆಸಬೇಕೆಂಬುದು ನಮ್ಮ ಬೇಡಿಕೆ ಎಂದು ಎನ್‌.ರವಿಕುಮಾರ್‌ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಉಪಾಧ್ಯಕ್ಷ ಸಂಪತ್‌ಕುಮಾರ್‌, ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ, ಉಪಾಧ್ಯಕ್ಷ ಶಿವಣ್ಣಾಚಾರ್‌, ವಕ್ತಾರ ನಾಗರಾಜ್‌ ಬೇದ್ರೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

22ರಂದು ಹಿರಿಯೂರಿಗೆ ಸಿಎಂ

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ನ.22 ರಂದು ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಸಚಿವರಾದÜ ಗೋವಿಂದ ಕಾರಜೋಳ, ಭೈರತಿ ಬಸವರಾಜ್‌ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ವಿವಿ ಸಾಗರಕ್ಕೆ ಬಾಗಿನ ಸಲ್ಲಿಸಿದ ನಂತರ ರೈತರ ಜೊತೆ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರೀರಾಮುಲು ಕಾರ್ಯಕ್ರಮದಲ್ಲಿ ನೂಕುನುಗ್ಗಲು: ನೆಲಕ್ಕೆ ಬಿದ್ದ ಮಾಂಸದ ತುಂಡಿಗಾಗಿ ಮುಗಿಬಿದ್ದ ಜನ..!

ಅದೇ ದಿನ ಮಧ್ಯಾಹ್ನ 2.30 ಕ್ಕೆ ಚಳ್ಳಕೆರೆಯಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಪ್ಪತ್ತು ಸಾವಿರದಷ್ಟುಜನ ಸೇರಲಿದ್ದಾರೆ. 23 ರಂದು ಜಗಳೂರು, ಹರಿಹರದಲ್ಲಿ ಜನಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಬಳ್ಳಾರಿಯಲ್ಲಿ ನಡೆಯಲಿರುವ ಬಿಜೆಪಿ ಎಸ್‌.ಟಿ.ಸಮಾವೇಶದಲ್ಲಿ ಐದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇದೊಂದು ವಿರಾಟ್‌ ಸಮಾವೇಶವಾಗಲಿದೆ ಎಂದರು.

click me!